ಉಡುಪಿ, ಸೆ. 18: ಭಾರತೀಯ ಸಂಸ್ಕೃತಿ, ಪುರಾಣ, ಧಾರ್ಮಿಕ ಪರಂಪರೆ ಹಾಗೂ ಶಿಲ್ಪಕಲೆಯ ಇತಿಹಾಸದ ಬಗ್ಗೆ ಅವಲೋಕಿಸಿದಾಗ ‘ವಿಶ್ವಕರ್ಮ’ ಎಂಬ ಹೆಸರು ಅತ್ಯಂತ ಮಹತ್ವಪೂರ್ಣವಾಗಿ ಕಾಣಿಸುತ್ತದೆ. ತಂತ್ರಜ್ಞಾನದ ಪರಿವೇ ಇಲ್ಲದ ಸಾವಿರಾರು ವರ್ಷಗಳ ಹಿಂದೆ ತನ್ನ ಕೈಚಳಕದಿಂದ ಇಡೀ ವಿಶ್ವವನ್ನೇ ನಿರ್ಮಾಣ ಮಾಡುವ ಮೂಲಕ ದೇವಶಿಲ್ಪಿ ಹಾಗೂ ವಿಶ್ವದ ಸೃಷ್ಟಿಕರ್ತನೆಂದು ವಿಶ್ವಕರ್ಮರು ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು.


ಅವರು ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಸರಕಾರವು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಿ, ಆ ಮೂಲಕ ಸಮುದಾಯದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ದೇಶದ ಪಾರಂಪರಿಕ ಕುಲ ಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಿದ್ದು, ಯೋಜನೆಗಳ ಲಾಭ ಪಡೆದುಕೊಳ್ಳುವುದರ ಮೂಲಕ ಸಮುದಾಯದ ಬಹಳಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿಯೂ ಸಹ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಕಾಪು ಮಾರಿಗುಡಿ, ಪಡುಬಿದ್ರಿ, ಕಡಿಯಾಳಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೊಸ ರೂಪ ಕೊಡುವ ಕೆಲಸ ವಿಶ್ವಕರ್ಮರಿಂದ ಆಗಿದೆ ಎಂದರು.
ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ವಿಶ್ವಕರ್ಮರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದ್ದು, ಅವರನ್ನು ಮಾದರಿಯಾಗಿ ಸಮುದಾಯ ಬಾಂಧವರು ಸ್ವೀಕಾರ ಮಾಡಬೇಕು. ಮುಂದಿನ ಪೀಳಿಗೆಗೆ ಅವರ ಪರಂಪರಾಗತ ಜ್ಞಾನವನ್ನು ಪಸರಿಸುವ ದೃಷ್ಠಿಯಿಂದ ಸರಕಾರ ಪ್ರತೀ ವರ್ಷ ಸೆ. 17 ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮುದಾಯದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುತ್ತಾ ಬರಲಾಗುತ್ತಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಪ್ರಪಂಚ ನಿರ್ಮಾಣದಲ್ಲಿ ಶಿಲ್ಪಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ವೇದ-ಉಪನಿಷತ್ತುಗಳಲ್ಲಿರುವ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ದೇವರು ಯಾವ ಉದ್ದೇಶಕ್ಕಾಗಿ ಮನುಕುಲವನ್ನು ಸೃಷ್ಠಿಸಿದ್ದಾನೆಂದು ಅರಿವಿಗೆ ಬರುತ್ತದೆ. ಆಧುನಿಕ ಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರೆದಿದ್ದರೂ ಸಹ ಯಾವುದೇ ವಿಜ್ಞಾನ, ತಂತ್ರಜ್ಞಾನದ ಅರಿವಿಲ್ಲದೇ ಅನಾದಿ ಕಾಲದಲ್ಲಿಯೂ ಸಹ ದೇವರು ನೀಡಿದ ವರದ ಮೂಲಕ ವಾಸ್ತು ಶಿಲ್ಪ ರಚಿಸುವ ಕುಶಲತೆಯನ್ನು ವಿಶ್ವಕರ್ಮ ಸಮುದಾಯದವರು ಮೈಗೂಡಿಸಿಕೊಂಡಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯದವರು ಯಾವುದೇ ಜಾತಿ, ಮತ ಧರ್ಮ ಬೇಧವಿಲ್ಲದೇ ಕ್ರಿಯಾಶೀಲತೆಯಿಂದ ಮಠ, ಮಂದಿರ, ದೇವಸ್ಥಾನ, ಚರ್ಚ್, ಮಸೀದಿಗಳನ್ನು ವಾಸ್ತುಶಿಲ್ಪದಂತೆ ನಿರ್ಮಿಸುತ್ತಿದ್ದಾರೆ. ಯಾವುದೇ ಸಮುದಾಯಗಳು ಸಂಘಟಿತರಾದಾಗ ಮಾತ್ರ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಕೊಡುಗೆ ಕಾಣಬಹುದಾಗಿದೆ ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಯುಗ ಯುಗಗಳಿಂದಲೂ ಪ್ರಪಂಚ ಉದ್ಭವವಾದಾಗಿನಿಂದಲೂ ವಿಶ್ವಕರ್ಮರ ಸೇವೆ ಸಮಾಜಕ್ಕೆ ಇದೆ. ಜಿಲ್ಲೆಯಲ್ಲಿ ವಿಶ್ವಕರ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವ ವಿಶ್ವಕರ್ಮರು ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಪಡುಕುತ್ಯಾರು ಆನೆಗುಂದಿ ಮಠದ ಲೋಲಾಕ್ಷ ಶರ್ಮ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, ವಿಶ್ವಕರ್ಮ ಸಮುದಾಯದ ಆರಾಧ್ಯ ಧೈವ ದೇವಶಿಲ್ಪಿ ವಿಶ್ವಕರ್ಮರು. ಪ್ರಪಂಚದ ಸೃಷ್ಠಿ ಹೇಗಾಯಿತು ಎಂದು ಅರಿಯಲು ವಿಶ್ವಕರ್ಮರನ್ನು ಅಧ್ಯಯನ ಮಾಡಿದಾಗ ನಮಗೆ ತಿಳಿಯುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಎಂದ ಅವರು, ಯಾವುದೇ ಜನಾಂಗದವರ ಮನೆ, ಕೃಷಿಗೆ ಸಂಬಂಧಿತ ವಸ್ತುಗಳ ಕೆಲಸಗಳನ್ನು ಸಮುದಾಯದವರು ಮಾಡಿಕೊಡುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಮಕ್ಕಳು ಆಧುನಿಕತೆಯ ತಂತ್ರಜ್ಞಾನ ಬಳಸಿಕೊಂಡು ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐದು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ವಂದಿಸಿದರು.
