ಕೊರೊನಾ ಎಂಬ ಮಹಾಮಾರಿಯ ಚಕ್ರವ್ಯೂಹದಲ್ಲಿ ಇಡೀ ಜಗತ್ತೇ ಸಿಲುಕಿಕೊಂಡು ನರಕಯಾತನೆಯನ್ನು ಅನುಭವಿಸುತ್ತಾ ಇದೆ. ನಮ್ಮ ದೇಶದಲ್ಲಿ ಇನ್ನೂ ಈ ರೋಗದ ಭೀಕರತೆಯ ಪ್ರಭಾವ ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಇನ್ನೂ ಬೀರಬೇಕಿದೆಯಷ್ಟೆ. ಅಂತಹ ಪರಿಸ್ಥಿತಿ ಬರಬಾರದೆಂಬ ನಮ್ಮ ನಿಮ್ಮೆಲ್ಲರ ಆಶಯ.

ಕೊರೊನಾ ವೇಗಕ್ಕೆ ಅಂಕುಷ ಹಾಕುವ ಲಸಿಕೆ ಅಥವಾ ಔಷಧಿ ಇನ್ನೂ ಸಂಶೋಧನಾ ಹಂತದಲ್ಲೇ ಇದೆ. ವಿಶ್ವದ ವಿವಿಧ ದೇಶಗಳ ಸುಮಾರು 40ಕ್ಕೂ ಹೆಚ್ಚಿನ ಅತ್ಯುನ್ನತ ಲ್ಯಾಬ್‍ಗಳಲ್ಲಿ ರಾತ್ರಿಹಗಲೆನ್ನದೆ ಸಾವಿರಾರು ಮಂದಿ ಲಸಿಕೆ ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವು ಲ್ಯಾಬ್‍ಗಳಲ್ಲಿ ಇದು ಕೊನೆಯ ಹಂತದಲ್ಲಿದೆ ಮತ್ತು ಇದರ ಪ್ರಾಯೋಗಿಕವಾಗಿ ಮಾನವ ದೇಹಕ್ಕೆ ಇನ್ನಷ್ಟೇ ಮಾಡಬೇಕಿದೆ. ಈ ಎಲ್ಲಾ ಸಂಶೋಧನೆಯ ನಂತರ WHO ಇದರ ಅಧಿಕೃತ ಅನುಮೋದನೆಗೊಳಪಟ್ಟು ಲಸಿಕೆ ಮಾರುಕಟ್ಟೆಗೆ ಲಭ್ಯವಾಗಲು ಇನ್ನೂ ಕೆಲವು ತಿಂಗಳುಗಳೋ ಅಥವಾ ವರ್ಷವೇ ಆಗಬಹುದು. ಹಾಗಾದರೆ ಈ ರೋಗದ ಭೀಕರತೆಯನ್ನು ನಿಯಂತ್ರಿಸುವ ಮಾರ್ಗೋಪಾಯಗಳು ಯಾವುವು? ನಿಯಂತ್ರಿಸುವ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರವೇನು? ಪಾಶ್ಚಾತ್ಯ ದೇಶಗಳಲ್ಲಿ ತೋರಿದಂತಹ ಭೀಕರತೆಯಿಂದ ನಮ್ಮ ದೇಶವನ್ನು ಪಾರುಮಾಡುವ ತಂತ್ರವೇನು? ಇನ್ನೂ ಎಷ್ಟು ದಿನ ಲಾಕ್‍ಡೌನ್ ಅಥವಾ ಸೀಲ್‍ಡೌನ್? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ, ಅದು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಬೇಕಾದ ಮಾರ್ಪಾಟುಗಳು. ಈ ಕೆಳಗಿನ ಪಂಚ ಸೂತ್ರಗಳನ್ನು ನಮ್ಮ ಜೀವನದಲ್ಲಿ ಸದ್ಯದ ಮಟ್ಟಿಗಾದರೂ ಅನುಸರಿಸಿದರೆ ಮುಖ್ಯವಾಗಿ ಪಟ್ಟಣವಾಸಿಗಳಿಗೆ ಬಹುಮುಖ್ಯ ಈ ಕೊರೋನಾ ರೋಗವನ್ನು ಹಂತ ಹಂತವಾಗಿ ನಿಯಂತ್ರಿಸಬಹುದು.

1.ಅಂತರತೆ:

ನಾವು ಈಗ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ಎಂಬ ಸಂಕುಲದ ಕೊಂಡಿಗೆ ಸಿಲುಕದಿರುವ ಹಾಗೆ ಮಾಡಲು ತುಂಬಾ ಅವಶ್ಯಕ. ಸಾಧ್ಯವಾದಷ್ಟು ಮಟ್ಟಿಗೆ ನಾವು ಮನೆಯಲ್ಲೇ ಇದ್ದು ಇತರರೊಂದಿಗೆ ಬೇರ್ಪಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ತಮ್ಮ ತಮ್ಮ ಕಾರ್ಯರಂಗದಲ್ಲಿ ಇನ್ನೊಬ್ಬ ವ್ಯಕ್ತಿಯ ಜೊತೆ ಕನಿಷ್ಠ ಒಂದರಿಂದ ಎರಡು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ನಮ್ಮಲ್ಲಿರುವ ದ್ವಿಚಕ್ರ ವಾಹನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಎಷ್ಟು ಪಾರ್ಕ್ ಮಾಡುವ ಅನಿವಾರ್ಯತೆ ಇದೆ online ಸೇವೆಯ ಈ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ವರದಾನವಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ online ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವುದು. ಮನೆಯಲ್ಲಿ ಕುಳಿತೇ ಕರೆಂಟುಬಿಲ್ಲು, ನೀರಿನಬಿಲ್ಲು, ಮೊಬೈಲ್ ಅಥವಾ ಟಿ.ವಿ. ರಿಚಾರ್ಜ್, EMI ಪೇಮೆಂಟ್, ಬಾಡಿಗೆ, ದಿನಸಿ ಸಾಮಗ್ರಿ, ಔಷಧ, ಆಹಾರ ಸೇವೆಗಳು, ಈಗ ಹೆಚ್ಚಿನ ಎಲ್ಲಾ ಆಸ್ಪತ್ರೆಗಳು OPDಸೇವೆಯನ್ನು online ಅಥವಾ ವೀಡಿಯೋ ಕನ್ಸಲ್ಟಿಂಗ್ ಮೂಲಕವೂ ಕೊಡಲಾರಂಬಿಸಿದೆ. ಹಾಗಾಗಿ ನಮ್ಮ ಜೀವನಾವಶ್ಯಕ ಹೆಚ್ಚಿನ ಎಲ್ಲಾ ಸೇವೆಗಳು ನಮ್ಮ ಅಂಗಯ್ಯಲ್ಲೇ ಇದೆ. ಇದರ ಸದುಪಯೋಗವನ್ನು ಪಡೆದಷ್ಟು ಅನಾವಶ್ಯಕ ಓಡಾಟವನ್ನು ತಡೆಯಬಹುದು.

2.ಸ್ವಚ್ಛತೆ:

ನಮ್ಮ ಶಾರೀರಿಕ ಸ್ವಚ್ಛತೆಯು ನಾವು ಆರೋಗ್ಯದಿಂದಿರಲು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂದು ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮುಖ್ಯವಾಗಿ ನಾವು ನಮ್ಮ ಕೈಗಳನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳುವುದು, ಹೊರಗಡೆ ಹೋದಲ್ಲಿ ಸಾನಿಟೈಸರನ್ನು ಬಳಸಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಅಂಗಡಿ ಮುಗ್ಗಟ್ಟುಗಳಲ್ಲಿ ಸಾನಿಟೈಸರ್ ಬಳಕೆಗೆ ಲಭ್ಯತೆಯನ್ನು ಕಲ್ಪಿಸುವುದು, ಮಾಸ್ಕನ್ನು ಧರಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ವಸ್ತುಗಳನ್ನು ಅಥವಾ ಇನ್ಯಾವುದೇ ಮೇಲ್ಮೈಯನ್ನು ಮುಟ್ಟದಿರುವುದು. ಎಲ್ಲಾ ದಿನವೂ ಒಗೆದ ಬಟ್ಟೆಯನ್ನು ಧರಿಸುವುದು ಇವುಗಳಿಂದ ಸೊಂಕು ಹರಡುವುದನ್ನು ತಡೆಗಟ್ಟಬಹುದು.

3.ಸರಳತೆ:

ಸದ್ಯದ ಪರಿಸ್ಥಿತಿಗೆ ಸರಳ ಜೀವನವೇ ಸುಗಮ ಮಾರ್ಗೋಪಾಯ ಮತ್ತು ಆಡಂಬರದ ಜೀವನಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಎಲ್ಲರ ಮುಂದಿದೆ. ತಮ್ಮ ಮನೆಯಲ್ಲಿ ಬೇಯಿಸಿದ ಆಹಾರವನ್ನೇ ಸೇವಿಸುವುದು. ಸಾಫ್ಟ್ ಡ್ರಿಂಕ್ಸ್, ಜಂಕ್‍ಫುಡ್ ಇತ್ಯಾದಿಗಳನ್ನು ತ್ಯಜಿಸುವುದು, ಪಾರ್ಟಿ, ಮೋಜು, ಮಸ್ತಿಗಳಿಗೆ ಕಡಿವಾಣ ಹಾಕುವುದು, ಬೇಕಾದಷ್ಟೆ ಆಹಾರವನ್ನು ತಯಾರಿಸುವುದು ಹಾಗೂ ಈ ಮೂಲಕ ಅನಾವಶ್ಯಕವಾಗಿ ಆಹಾರ ಚೆಲ್ಲುವುದನ್ನು ತಡೆಗಟ್ಟುವುದು ತಮ್ಮ ಆಹಾರ ಸಾಮಗ್ರಿ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಬರುವುದು ಅಗತ್ಯಕ್ಕಿಂತ ಜಾಸ್ತಿ ಇದ್ದಲ್ಲಿ ಬಡವರಿಗೆ ಸಹಾಯ ಹಸ್ತವನ್ನೂ ಚಾಚುವುದು.

4.ಸಂಯಮತೆ:

ಸ್ನೇಹಿತರೇ ಲಾಕ್‍ಡೌನ್ ಮುಗಿದ ಕೂಡಲೇ ಅಥವಾ ದಿನ ಬೆಳಗಾಗುವುದರೊಳಗೆ ಈ ಜಗತ್ತು ಕೊರೋನಾ ಮುಕ್ತವಾಗುವುದಿಲ್ಲ. ಎಲ್ಲಿಯವರೆಗೆ ಕೊರೋನಾ ಮುಕ್ತವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ತುಂಬಾ ಸಂಯಮದಿಂದಿರಬೇಕು. ಹಂತ ಹಂತವಾಗಿ ಈ ಚಕ್ರವ್ಯೂಹದಿಂದ ಹೊರಬರಲು ಕೆಲವು ತಿಂಗಳುಗಳು ಅಥವಾ ವರ್ಷವೇ ಬೇಕಾಗಬಹುದು. ಮತ್ತು ಆರ್ಥಿಕತೆಯು ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು, ಎಲ್ಲಾ ವ್ಯವಹಾರ ವಹಿವಾಟುಗಳು ಸ್ಥಬ್ಧವಾಗಿರುವುದರಿಂದ ತಮ್ಮ ಗಳಿಕೆಯಲ್ಲಿ ಇಳಿಮುಖವಾಗಬಹುದು ಅಥವಾ ನಷ್ಟ ಅನುಭವಿಸಬಹುದು. ಇದೆಲ್ಲವೂ ತಾತ್ಕಾಲಿಕ, ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಪರಿಸ್ಥಿತಿ ಸುಧಾರಿಸುವವರೆಗೂ ತಾಳ್ಮೆಯಿಂದ ಇರುವುದೊಂದೇ ದಾರಿ, ಈಗಾಗಲೇ ಸರಕಾರ ಪ್ರಕಟಿಸಿರುವ ಪರಿಹಾರಗಳೂ, ಸಹಾಯಕಗಳೂ ಕಾರ್ಯರೂಪಕ್ಕೆ ಒಂದೊಂದಾಗಿ ಬರಲಿವೆ.

5.ಬದ್ಧತೆ:

ಕ್ಷಣಕ್ಷಣಕ್ಕೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಿಸ್ಥಿತಿಯ ಅವಲೋಕನ ಮಾಡಿ, ಎಲ್ಲಾ ಭಾಗಗಳಲ್ಲೂ ಹದ್ದಿನ ಕಣ್ಣಿಟ್ಟು ಬೇಕಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಇದೆ. ಆಗಿಂದಾಗ್ಗೆ ಜನರು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸುತ್ತಾ ಇದೆ. ಈ ಎಲ್ಲಾ ಮಾರ್ಗಸೂಚಿಯನ್ನು ಎಲ್ಲರೂ ಬದ್ಧತೆಯಿಂದ ಪಾಲಿಸಿದರೆ ಈ ಪ್ರಾಥಮಿಕ ರೋಗ ನಿಯಂತ್ರಿಸುವ ಹಾದಿ ಸುಗಮವಾಗಬಲ್ಲದು. ಕೆಲವು ದಿನಗಳ ಹಿಂದೆ ಸರಕಾರದ ಕಾರ್ಯಸೂಚಿಯ ವಿರುದ್ಧವಾಗಿ ಕೆಲವು ಚಟುವಟಿಕೆಗಳು ಈ ದೇಶದಲ್ಲಿ ನಡೆದು ನಮ್ಮೆಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವುದು ಎಲ್ಲರಿಗೂ ಗೊತ್ತು. ಈ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರದೊಂದಿಗೆ ಕೈ ಜೋಡಿಸೋಣ ಸರಕಾರ ಜಾರಿಗೊಳಿಸುವ ಆರೋಗ್ಯ ತಪಾಸಣೆಯನ್ನು ಉಲ್ಲಂಘಿಸದೆ ಇರೋಣ.

ಈ ಮೇಲಿನ ಪಂಚ ಸೂತ್ರಗಳನ್ನು ನಮ್ಮ ದೈನಂದಿನ ಜೀನವನದಲ್ಲಿ ಅಳವಡಿಸಿಕೊಂಡಲ್ಲಿ ಆದಷ್ಟು ಬೇಗ ಈ ರೋಗವನ್ನು ಲಸಿಕೆ ಲಭ್ಯವಾಗುವವರೆಗೆ ನಿಯಂತ್ರಿಸುವಲ್ಲಿ ನಾವು ಸಫಲರಾಗುವುದು ಖಂಡಿತ.

ಸ್ನೇಹಿತರೇ ಎಲ್ಲಿಯವರೆಗೆ ಲಸಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ಕೊರೊನಾ ಶೂನ್ಯವಾಗುವುದಿಲ್ಲ. ಎಲ್ಲಿಯವರೆಗೆ ಕೊರೋನ ಶೂನ್ಯವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಈ ಮೇಲಿನ ಸೂತ್ರವನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸೋಣ.  

-ಗುರುಪ್ರಸಾದ್ ಕಡಂಬಾರ್