ಪಶ್ಚಿಮ ಘಟ್ಟದಲ್ಲಿ ಎಲ್ಲಾದರೂ ಆನೆ ಲದ್ದಿ ಹಾಕಿದರೆ, ಕಾಡುಕೋಣ ಸೆಗಣಿ ಹಾಕಿದರೆ ಅಲ್ಲಿ ಗಿಡ ಬೆಳೆಯುತ್ತದೆ, ಹಣ್ಣು, ಬೀಜಗಳನ್ನು ತಿಂದ ಜಿಂಕೆ , ಕಡವೆ ಅಥವಾ ಮಂಗಟ್ಟೆ ಹಕ್ಕೀ ಹಿಕ್ಕೆ ಹಾಕಿದರೆ ಅಲ್ಲಿ ಬೀಜ ಚಿಗುರಿ ಗಿಡಗಳ ಸೃಷ್ಟಿ ಆಗುತ್ತದೆ. ಇರುವೆ, ಗೆದ್ದಲು, ಪಾಚಿ ಶಿಲೀಂಧ್ರಗಳು ನೀರನ್ನು ಶೇಖರಿಸುವಂತೆ ಮಾಡಿ ಪಶ್ಚಿಮ ಘಟ್ಟದ ನದೀ ಮೂಲಗಳನ್ನು ಕಾಪಾಡುತ್ತವೆ.
ಪಶ್ಚಿಮ ಘಟ್ಟದ ಶೋಲಾ ಅಡವಿಯ ಆಕಾಶ ದ ಎತ್ತರಕ್ಕೆ ಏರಿ ನಿಂತ ಮರ ಮಳೆ ನೀರನ್ನು ನದಿಯ ಜಲ ಪಥ ಗಳಿಗೆ ಸರಬರಾಜು ಮಾಡುತ್ತಾ ಕಾರ್ಯ ನಿರ್ವಹಿಸುತ್ತವೆ. ಇಂತಹ ಮರ ಅಲ್ಲಿ ಮುರಿದು ಬಿದ್ದರೂ ಕಾಡಿನ ಮಣ್ಣಲ್ಲಿ ಮಣ್ಣಾಗಿ ಕರಗಿ ಕಾಡಿನ ಬೆಳವಣಿಗೆಗೆ ಫಲವತ್ತಾದ ಪಾತ್ರ ವಹಿಸುತ್ತವೆ. ಪಶ್ಚಿಮ ಘಟ್ಟದಲ್ಲಿ ಇರುವೆಯಿಂದ ಆನೆಯವರೆಗೆ.....ಚಿಕ್ಕ ಹುಲ್ಲಿನಿಂದ ಆಕಾಶದ ಎತ್ತರಕ್ಕೆ ಯೇರಿ ನಿಂತ ಮರದವರೆಗೆ ಒಂದಕ್ಕೊಂದು ಅವಲಂಬಿಸಿಕೊಂಡು ಬದುಕುತ್ತಿವೆ...ಪಶ್ಚಿಮ ಘಟ್ಟದ ಅಡವಿ, ಗಿರಿ,ಝರಿ, ಹುಲ್ಲು, ಬೀಳು, ಗಿಡ, ಮರ, ಪ್ರಾಣಿ ಪಕ್ಷಿಗಳು ನಮ್ಮ ದಿನ ನಿತ್ಯ ಬದುಕಿನ ನೆಮ್ಮದಿಗೆ ಪಾತ್ರ ವಹಿಸುತ್ತಾ ಇರುತ್ತವೆ....
ಆದರೆ ಮನುಜ ಎಂಬ ದುರಹಂಕಾರಿ ತಾನೇ ಎಲ್ಲದಕ್ಕಿಂತ ಶ್ರೇಷ್ಠ ಜೀವಿ ಎಂಬ ಹುಂಬತನ ದೊಂದಿಗೆ ತನ್ನ ಬದುಕಿನ ಚೇತನಾ ಶಕ್ತಿಗೆ ಆಧಾರ ಆಗಿರುವ ಪಶ್ಚಿಮ ಘಟ್ಟದ ಎಲ್ಲವನ್ನೂ ನಾಶ ಮಾಡುತ್ತಾ ಬರುತ್ತಿದ್ದು ....ಇದರ ಘೋರ ಪರಿಣಾಮವನ್ನು ಇನ್ನು ಮುಂದಿನ ದಿನಗಳಲ್ಲಿ ಅನುಭವಿಸಲೇಬೇಕು.
ಪಶ್ಚಿಮ ಘಟ್ಟ ಮತ್ತು ಅಲ್ಲಿನ ಎಲ್ಲಾ ಜೀವಿಗಳಿಗೆ ಮನುಷ್ಯರ ಒಂದು ಚೂರೂ ಕೂಡಾ ಅಗತ್ಯ ಇಲ್ಲ ..ಆದರೆ ಮನುಷ್ಯ ರೆಂಬ ಬುದ್ಧಿವಂತರಿಗೆ ಬದುಕು ಸಾಗಿಸಲು ಪಶ್ಚಿಮ ಘಟ್ಟ ಮತ್ತು ಅಲ್ಲಿನ ಎಲ್ಲವೂ ತುಂಬಾ ಅಗತ್ಯ ಇವೆ. ಆದರೂ ಪಶ್ಚಿಮ ಘಟ್ಟದ ಬಗ್ಗೆ ನಮ್ಮಲ್ಲಿ ಅಭಿಮಾನ, ಪ್ರೀತಿ ಕಡಿಮೆ ಆಗಿದ್ದು ಸಂರಕ್ಷಣಾ ಕ್ರಮಗಳನ್ನು ಮಾಡುತ್ತಿಲ್ಲ...ಅದರ ಬದಲಿಗೆ ಹಂತ ಹಂತ ವಾಗಿ ನಾಶ ಮಾಡುತ್ತಾ ನಮ್ಮ ನಾಶಕ್ಕೆ ನಾವೇ ಪಾತ್ರಧಾರಿ ಗಳಾಗುತ್ತಿದ್ದೇವೆ...