ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಮೂಡುಬಿದಿರೆಯಲ್ಲಿ ಕೆ ಎಸ್ ಆರ್ ಟಿ ಸಿ ಯವರ ಒಂದು ಚೆಕ್ ಪೋಸ್ಟ್ ಇದೆ ಎನ್ನುವುದೇ ಯಾರಿಗೂ ಗೊತ್ತಿರಲಾರದು. ಏಕೆಂದರೆ ಇದು ಇರುವುದು ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ನಡುವಿನಲ್ಲಿರುವ ಅತ್ಯಂತ ಚಿಕ್ಕ ಕೋಣೆಯಂತಹ ಪ್ರದೇಶದಲ್ಲಿ. 

ಅದಕ್ಕೆ ಸರಿಯಾಗಿ ಇಲ್ಲಿಗೆ ಆಗಮಿಸುವ ಕೆ ಎಸ್ ಆರ್ ಟಿ ಸಿ ಬಸ್ಸುಗಳವರು ಕೂಡ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ತೆರಳುತ್ತಿರುವುದು ಬಹಳಷ್ಟು ಸಮಯದಿಂದ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಮುಖ್ಯ ರಸ್ತೆಯ ಬದಿಯಲ್ಲಿರುವ ರಿಕ್ಷಾ ನಿಲ್ದಾಣದ ಬದಿಯ ಎಲೆಕ್ಟ್ರಿಕ್ ಕಂಬಕ್ಕೆ ಸಮಯ ಸಾರಣಿಯ ಪಟ್ಟಿ ತೂಗು ಹಾಕಲಾಗಿದೆ. ಇದರಿಂದಾಗಿ ಎಲ್ಲ ಬಸ್ಸುಗಳವರು ಅದೇ ಪ್ರದೇಶದಲ್ಲಿ ನಿಲ್ಲಿಸಿ ಮುಂದುವರಿಯುತ್ತಿದ್ದಾರೆ. ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಪ್ರದೇಶ ನಿಜವಾಗಿಯೂ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ಲಿಸುವ ಸ್ಥಳವಾಗಿರುತ್ತದೆ. 

ಆದರೆ ಖಾಸಗಿ ವಾಹನಗಳವರು ಅಲ್ಲಿ ನಿಲ್ಲಿಸುತ್ತಿರುವುದರಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಅವಕಾಶವೇ ದೊರಕುತ್ತಿಲ್ಲ. ಇಷ್ಟು ಮಾತ್ರವಲ್ಲ ಆ ಕಾಂಪ್ಲೆಕ್ಸ್ ನ ಎದುರಿನ ಖಾಸಗೀ ವಾಹನಗಳು ನಿಲ್ಲಿಸುತ್ತಿರುವ ಸ್ಥಳ ಮುಂಬೈ, ಬೆಂಗಳೂರು ಇತ್ಯಾದಿ ಸ್ಥಳಗಳಿಗೆ ತೆರಳುವ ಖಾಸಗಿ ಬಸ್ಸುಗಳಿಗೂ ಕೂಡ ಅವಕಾಶ ಇರುತ್ತದೆ. ಆದರೆ ಖಾಸಗಿ ಬಸ್ಸುಗಳವರೆಗೂ ಕೂಡ ಅಲ್ಲಿ ನಿಲ್ಲಿಸಲು ಅವಕಾಶವಿಲ್ಲದೆ ಅವರು ಮುಖ್ಯರಸ್ತೆಯ ಬದಿಯಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಹತ್ತಿಸುವ ಕ್ರಮವನ್ನು ಮುಂದುವರಿಸುತ್ತಿದ್ದಾರೆ. ಮೂಡುಬಿದರೆ ಪುರಸಭೆಯವರು ಈ ಪ್ರದೇಶವನ್ನು ರಾಜ್ಯ ರಸ್ತೆ ಸಾರಿಗೆ ಹಾಗೂ ಹೊರರಾಜ್ಯಗಳಿಗೆ ತೆರಳುವ ಬಸ್ಸುಗಳವರಿಗೆ ನಿಲ್ಲಿಸಲು, ಪ್ರಯಾಣಿಕರಿಗೆ ಕಾಯಲು ಅವಕಾಶವನ್ನು ಮಾಡಿಕೊಡುವಂತೆ ಸಾರ್ವಜನಿಕರು ವಿನಂತಿಸುತ್ತಿದ್ದಾರೆ.

ಇದೀಗ ನಾಳೆಯಿಂದ ಮಂಗಳೂರು ಕಾರ್ಕಳ ನಡುವಿನ ರಾಜ್ಯ ರಸ್ತೆ ಸಾರಿಗೆ ಬಸ್ಸು ಕೂಡ ಆಗಮಿಸುತ್ತದೆ ಎನ್ನುವ ಮಾಹಿತಿ ಇರುವುದರಿಂದ ಅದಕ್ಕೂ ಇಲ್ಲಿಯೇ ಅವಕಾಶವನ್ನು ಮಾಡಿಕೊಡುವುದು ಯುಕ್ತ ಎನ್ನುವುದು ಹಲವರ ಅಭಿಪ್ರಾಯ.