ಉಡುಪಿ : ದೇಶದ 75 ನೇ ಸ್ವಾಂತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರತೀ ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣೆ, ಜಿಲ್ಲೆಗೆ 25 ವರ್ಷ ತುಂಬಿ ಅಗಿರುವ ಅಭಿವಧ್ದಿ ಕಾರ್ಯಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯಗಳ ಕುರಿತ ಅವಲೋಕಿಸುವ ಕಾರ್ಯಕ್ರಮಗಳನ್ನು ಆಯೋಸಬೇಕೆಂದು ಅಧಿಕಾರಿಗಳಿಗೆ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್‍ನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಹರ್ ಘರ್ ತಿರಂಗ , ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕುರಿತ ಪೂರ್ವಭಾವಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಸ್ವಾಂತ್ರಂತ್ರ್ಯೋತ್ಸವದ ಅಮೃತ ಅಮೃತೋತ್ಸವದ ಸ್ಮರಣೀಯ ಈ ಅವಧಿಯುಲ್ಲಿ ಆಗಸ್ಟ್ 13 ರಿಂದ 15 ರ ವರೆಗೆ ಹಗಲು ರಾತ್ರಿಯನ್ನದೇ 3 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರತಿಯೊಬ್ಬರ ಮನೆಯ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ದೇಶದ ಎಲ್ಲಾ ಪ್ರಜೆಗಳಲ್ಲೂ ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸಲು ಅಭಿಯಾನ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 2,72,000 ಮನೆ, 1 ಲಕ್ಷಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು , ಸರ್ಕಾರಿ ಕಚೇರಿಗಳು ಸೇರಿದಂತೆ 4 ಲಕ್ಷಕ್ಕೂ ಹೆಚ್ಚು ಕಟ್ಟಡಗಳಿದ್ದು ಪ್ರತಿಯೊಂದು ಕಟ್ಟಡಗಳ ಮೇಲೆಯೂ ತ್ರಿವರ್ಣ ದೌಜ ಹಾರಿಸುವ ಹಿನ್ನಲೆ ಅಗತ್ಯಕ್ಕನುಗುಣವಾಗಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜಗಳು ಜನರಿಗೆ ಲಭ್ಯವಾಗುವಂತೆ ಕ್ರಮ ವಹಿಸಬೆಬೇಕು ಎಂದು ಸೂಚಿಸಿದರು.
ಇದೇ ಆಗಸ್ಟ್ 25 ಕ್ಕೆ ಉಡುಪಿ ಜಿಲ್ಲೆ ಘೋಷಣೆಯಾಗಿ 25 ವರ್ಷ ತುಂಬುತ್ತಿರುವ ಹಿನ್ನಲೆ ರಜತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ಅಂದಿನ ಉಡುಪಿಗೂ ಇಂದಿನ ಉಡುಪಿಗೂ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳ ಪುನಾರಾವಲೋಕನ ಹಾಗೂ ಮುಂಬರುವ ದಿನಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತ ಸಾಧಕ ಭಾದಕಗಳು, ಜನಸಾಮಾನ್ಯರ ಆಶೋತ್ತರಗಳನ್ನು ಕ್ರೂಢೀಕರಿಸುವುದರೊಂದಿಗೆ ಜಿಲ್ಲೆಯ ಅಭಿವೃದ್ದಿಗೆ ಭದ್ರ ಬುನಾದಿ ಹಾಕಬೇಕು ಎಂದರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಮಾತನಾಡಿ, ರಾಷ್ಟ್ರಧ್ವಜವನ್ನು 3 ದಿನಗಳ ಅವಧಿಯಲ್ಲಿ ರಾಜ್ಯದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶಪ್ರೇಮ ಮೆರೆಯುವುದರೊಂದಿಗೆ ತ್ರಿವರ್ಣ ಧ್ವಜ ಹಾರಿಸುವ ಹರ್ ಘರ್ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂಧರು.
ಜಿಲ್ಲೆಯ ರಜತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಬೇಕು , ಯುವಜನರಲ್ಲಿ ಸದೃಢ ಭಾರತ ನಿರ್ಮಾಣ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕ ಮಂಡಲಗಳ ಸಹಭಾಗಿತ್ವದಲ್ಲಿ ನಡೆಸಬೇಕು ಎಂದರು. ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಠಮಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉಡುಪಿ ನಗರದ ರಾಜಾಂಗಣದಲ್ಲಿ ಆಗಸ್ಟ್ 19 ರಂದು ಆಯೋಜಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣನ ಕುರಿತು ನೃತ್ಯ ರೂಪಕಗಳು, ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ಹುಲಿವೇಷದ ಸ್ಪರ್ಧೆ ಆಯೋಜಿಸುವುದರ ಜೊತೆಗೆ ಶ್ರೀಕೃಷ್ಣ ಕುರಿತು ವಿದ್ವಾಂಸರಿಂದ ಉಪನ್ಯಾಸ ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಶಿಷ್ಠಾಚಾರದ ಅನ್ವಯ ಜನಪ್ರತಿನಿಧಿಗಳು , ಗಣ್ಯರು ಹಾಗೂ ಸ್ವಾಮೀಜಿಗಳನ್ನು ಆಹ್ವಾನಿಸಬೇಕು ಎಂದ ಅವರು, ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.