ಪಟ್ಟಣಗಳು ಎಂದ ಮೇಲೆ ಅಲ್ಲಿ  ಅಮ್ಮ ಬಿಟ್ಟು ಬೇರೆಲ್ಲ ಸಿಗುತ್ತವೆ. ಮಂಗಳೂರು ಅದಕ್ಕೆ ಹೊರತಲ್ಲ. ಇಲ್ಲಿನ ತೇರು ಬೀದಿ ಕೆಲವು ವಿಶೇಷಗಳದ್ದು.

ಮಂಗಳೂರಿನ ರಥ ಬೀದಿಯಲ್ಲಿ ಕೆಸು, ಅದರ ಗಡ್ಡೆ, ಕವಳೆ ಯಾ ಕರಂಡೆ, ಚಕಟೆ ಇಲ್ಲವೇ ತೊಜಂಕು ಹೀಗೆ ಹತ್ತು ಹಲವು ಪೇಟೆಯ ಎಲ್ಲ ಕಡೆ ದೊರೆಯದ ಕೆಲವು ವಸ್ತುಗಳು ದೊರೆಯುತ್ತದೆ. ಅವುಗಳಲ್ಲಿ ಮೂಡೆ ಕೊಟ್ಟಿಗೆಯೂ ಒಂದು.

ಮೂಡೆ ಎಂದರೆ ಅದು ಒಂದು ಕಡುಬು. ವಿಶಿಷ್ಠವಾದ ಮುಂಡಕನ ಓಲಿಯ ಕೊಟ್ಟೆ ಮಾಡಿ ಅದರಲ್ಲಿ ಬೇಯಿಸುವ ಈ ಕಡುಬಾಗಿದೆ ಇದು. ಕೊಟ್ಟೆಯಿಂದ ಬಿಡಿಸದ ಸ್ಥಿತಿಯಲ್ಲಿ ಇದನ್ನು ವಾರದ ಕಾಲ ಇಡಬಹುದು ಎಂಬುದು ವಿಶೇಷ. ಇದು ತುಳುನಾಡಿನ ತಿಂಡಿ ಇಲ್ಲವೇ ಕಡುಬು ಆಗಿರುವುದರಿಂದ ಅದಕ್ಕೆ ಸಂಬಂಧಿಸಿದಂತೆ ತುಳು ಶಬ್ದಗಳೇ ಹೆಚ್ಚು ಇವೆ.

ಮಂಗಳೂರಿನ ರಥ ಬೀದಿಯಲ್ಲಿ ಮೂಲ್ಕಿಯಿಂದ ಬರುವ ಈ ಮಹಿಳೆಯು ನಿತ್ಯ ಇಲ್ಲ ಮುಂಡಕನ ಎಲೆಯಿಂದ ಕೊಟ್ಟೆ ಸುತ್ತಿ ಮಾರಾಟ ಮಾಡಿ ಬದುಕು ‌ಸಾಗಿಸಿದ್ದಾರೆ. ಇದು ಶ್ರಮದ ಮತ್ತು ಕಷ್ಟದ ಕೆಲಸವಾಗಿದೆ.

ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ ಪೊದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು ಬರುತ್ತವೆ. ಕೆರೆ ಇತ್ಯಾದಿ ಎಂದು ನೀರ ನೆರೆಯಲ್ಲಿ ಇವು ಇರುತ್ತವೆ.

ಒಂದು ಮಾರುದ್ದದ ಇದರ ಎಲೆಗಳು ನಡು ಹಿಂಬದಿ ಮತ್ತು ಅಂಚಿನಲ್ಲಿ ಸಾಲು ಮುಳ್ಳುಗಳಿಂದ ತುಂಬಿರುತ್ತದೆ. ಈ ಮುಳ್ಳುಗಳು ಮುಮ್ಮುಖ ಬಾಗಿರುವುದರಿಂದ‌ ಹಿಮ್ಮುಖ ‌ಎಳೆಯದಂತೆ‌ ಲಾವಗದಿಂದ ಕೈ ಬಳಸಿ ಈ ಎಲೆಗಳನ್ನು ಕತ್ತರಿಸಿ, ಎಳೆದು ತರಬೇಕು. ಮುಳ್ಳುಗಳ ಸಾಲನ್ನು ಕತ್ತಿಯಿಂದ ಸವರಿ ತೆಗೆಯಬೇಕು. ಬಿಸಿಲಿನಲ್ಲಿ ಒಣಗಿಸಿ, ಬೆಂಕಿಯಲ್ಲಿ ತುಸು ಬಾಡಿಸಿದರೆ ಎಲೆ ಸಿದ್ಧ. ಸುಮಾರು ಎರಡಂಗುಲ ಅಗಲದ ಎಲೆಯನ್ನು ಮೇಲು ಮೇಲಕ್ಕೆ ಸುತ್ತುತ್ತ ಮುಳ್ಳು ಊರಿ ಉರುಟು ಕೊಟ್ಟೆ ಕಟ್ಟುವುದು ಒಂದು ಕಲೆ.

ಕರ್ಕಟೆ ಮುಳ್ಳು, ತೆಂಗಿನ ಗರಿಯ ಕಡ್ಡಿ ಬಳಸಿ ಕೊಟ್ಟೆ ಕಟ್ಟುವರು. ಕೊಟ್ಟು ಎಂದರೆ ದ್ರಾವಿಡ ಭಾಷೆಯಲ್ಲಿ ತಟ್ಟು, ಹೊಡಿ, ಕಡಿ, ಚುಚ್ಚು ಎಂದೆಲ್ಲ ಅರ್ಥವಿದೆ. ಇಲ್ಲಿ ಎಲೆ ಕಡಿದು, ಎಲೆ ಮುಳ್ಳು ಹೊಡೆದು, ಬಿಸಿಗೆ ಬಾಡಿಸಿ ಬಡಿದು, ಮುಳ್ಳು ಇಲ್ಲವೇ ಕಡ್ಡಿ ಚುಚ್ಚಿ ಇದನ್ನು ತಯಾರಿಸುತ್ತಾರೆ. ಹಾಗಾಗಿ ‌ಇದು ಕೊಟ್ಟೆ ಒಂದು ರೀತಿಯ ತೊಟ್ಟೆ ಎಂಬ ಅನ್ವರ್ಥ ನಾಮವನ್ನು ಪಡೆದಿದೆ.

ಹತ್ತಕ್ಕೆ ಮೂರರ ಪ್ರಮಾಣದಲ್ಲಿ ಅಕ್ಕಿ ಉದ್ದು ಎರಡು ಗಂಟೆ ನನೆಸಿ, ಕಡೆದು ಅರ್ಥಾತ್‌ ರುಬ್ಬಿ  ಒಂದು ಇಡೀ ಇರುಳು ಹುದುಗಲು ಅಂದರೆ ಉರ್ಗೆರೆ ಬಿಡಬೇಕು. ಈ ಹಿಟ್ಟನ್ನು ಮರುದಿನ ಎಲೆಯ ಕೊಟ್ಟೆಯೊಳಗೆ ಎರೆದು ಇಡ್ಲಿ‌ ಬೇಯಿಸಿದಂತೆ ಬೇಯಿಸಿದರೆ ಮೂಡೆ ಇಲ್ಲವೇ ಕೊಟ್ಟೆ ಕಡುಬು  ಸಿದ್ದ.

ರಥ ಬೀದಿಯತ್ತ ಹೋದರೆ ತಯಾರಿಸಿಟ್ಟ ಕೊಟ್ಟೆ ಸಿಗುತ್ತದೆ. ಹಿಟ್ಟು ನೀವು ತಯಾರಿಸಿ ಕಡುಬು ಮಾಡಿದರೆ ಆಯಿತು. ಕೋಳಿ ಗಸಿಗೂ ಸೈ, ತೋವೆ ಸಾಂಬಾರಿಗೂ ಸೈ. ಅಷ್ಟೇ ಅಲ್ಲ. ತೆಂಗಿನ ಹಾಲು ತೆಗೆದು ಬೆಲ್ಲ ಏಲಕ್ಕಿ ಹಾಕಿದ ವಿಶೇಷ ಹಾಲಿನಲ್ಲಿಯೂ ಈ ಮೂಡೆ ಅಡ್ಯೆಯನ್ನು ಅಂದರೆ ಕಡುಬನ್ನು ಒಂದು ಕೈ ನೋಡಬಹುದು. ಒಂದು ಕೈ ಏನು ಹೊಟ್ಟೆ ತುಂಬ ಹೊಡೆಯಬಹುದು. 


-By ಪೇಜಾ