ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ನವೆಂಬರ್ 07, 2026 ರಂದು ʼಕಾವ್ಯಾಂ ವ್ಹಾಳೊ-20ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, “ಕಾವ್ಯಾಂ ವ್ಹಾಳೊ ಎಂಬ ಕವಿಗೋಷ್ಟಿಯಲ್ಲಿ ಕೊಂಕಣಿಯ ಹಿರಿಯ ಹಾಗೂ ಕಿರಿಯ ಕವಿಗಳನ್ನು ಒಟ್ಟುಗೂಡಿಸುವುದು ಮಾತ್ರವಲ್ಲ, ಹೊಸ ಕವಿಗಳನ್ನು ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶ. ಇವತ್ತು ಈ ಉದ್ದೇಶ ಜಾರಿಯಾಗಿದೆ ಅನ್ನುವ ಸಂತೋಷ ನಮಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಕವಿಗಳಿಗೂ ಇಂತಹ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಹೇಳಿ ಕವಿಗೋಷ್ಟಿಗೆ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.

ಮುಖ್ಯ ಅಥಿತಿಗಳಾದ ಕೊಂಕಣಿಯ ಹಿರಿಯ ನಟ, ನಿರ್ದೇಶಕ ಹಾಗೂ ಕವಿಯಾದಂತಹ ಡೆನಿಸ್ ಮೊಂತೇರೊರವರು ಮಾತಾನಾಡಿ, “ಇಂತಹ ಕವಿಗೋಷ್ಟಿಗಳು ಕವಿಗಳಿಗೆ ಒಂದು ಪ್ರೇರಣೆ. ಕಿರಿಯ ಕವಿಗಳು ಹಿರಿಯರೊಂದಿಗೆ ಸೇರಿ ಅವರ ಅನುಭವಗಳನ್ನು ತಮ್ಮದಾಗಿಸಿಕೊಳ್ಳುವುದು ಇದರ ವಿಶೇಷತೆ. ಕವಿಗಳು ಬರೆಯುವ ಕವಿತಗಳು ಮನುಷ್ಯನನ್ನು ತನ್ನೆಡೆಗೆ ಸೆಳೆಯುವಂತಾಗಬೇಕು. ಆಗಲೇ ಆ ಕವಿಯ ವಿಶೇಷತೆ ಸಮಾಜಕ್ಕೆ ತಿಳಿಯುವುದು ” ಎಂದು ಸೇರಿರುವ ಎಲ್ಲಾ ಕವಿಗಳನ್ನು ಅಭಿನಂದಿಸಿದರು.
ಕೊಂಕಣಿ ಅಕಾಡೆಮಿಯ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಕೊಂಕಣಿಯ ಕುಡುಂಬಿ ಸಮುದಾಯದ ಜಾನಪದ ಕಲಾವಿದರಾಗಿರುವ ಶ್ರೀ ರಾಮ ನಾಯ್ಕ ಇವರು, “ಕೊಂಕಣಿ ಭಾ಼ಷೆಯು ಸಮುದಾಯದ ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುವ ಒಂದು ಸಾಧನ. ಭಾಷೆಯು ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಆದ್ದರಿಂದ ಎಲ್ಲರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು” ಎಂದು ಕರೆನೀಡಿದರು.
ಖ್ಯಾತ ಕವಯಿತ್ರಿಯಾದ ಡಾ. ಫ್ಲಾವಿಯಾ ಕ್ಯಾಸ್ತೆಲಿನೊರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ರೆನಿಶಾ ರೋನಾ ಲೋಬೊ, ಡಾ.ಅರವಿಂದ ಶ್ಯಾನಭಾಗ್, ಆಶ್ನಾ ಲೆನಾ ಪಿರೇರಾ, ಫ್ಲಾವಿಯಾ ಅಲ್ಬುಕರ್ಕ್, ಆಂತೊನ್ ಲುವಿಸ್ ಮಣಿಪಾಲ್, ಪೂರ್ಣಿಮಾ ಸುರೇಶ್ ನಾಯಕ್, ಲೋಯ್ಡ್ ರೇಗೊ ತಾಕೊಡೆ, ವಾಣಿ ಪರ್ಕಳ, ಮಾರ್ಟಿನ್ ಆರ್. ಡಿಸೋಜಾ ಮತ್ತು ರೋಬರ್ಟ್ ಮಿನೇಜಸ್ ಕಣಜಾರ್ ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಸಮರ್ಥ್ ಭಟ್‌ರವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು. ಕವಿಗೋಷ್ಟಿಯಲ್ಲಿ ಅಕಾಡೆಮಿ ಸದಸ್ಯರಾದ ಸುನೀಲ್ ಸಿದ್ದಿ ಹಾಗೂ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.
