ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ದಿನಬೆಳಗಾದರೆ ನೂರಾರು ಸಮಸ್ಯೆಗಳು ನಿರಂತರವಾಗಿ ಅಧಿಕಾರಿಗಳ ಬೆನ್ನು ಹತ್ತುತ್ತಿದೆ. ಇತ್ತೀಚಿಗೆ ಮೂಡುಬಿದಿರೆ ಫೋರಮ್ ಅವರು ಅಕ್ಷಯ್ ಜೈನ್ ಅವರ ಮೂಲಕ ಸುಮಾರು 36 ಸಮಸ್ಯೆಗಳ ಬಗ್ಗೆ ಸ್ವತಹ ಸ್ಥಳೀಯ ಶಾಸಕರನ್ನು ಎಚ್ಚರಿಸಿದ್ದರು. ಹೆಚ್ಚಿನ ಎಲ್ಲಾ ಸಮಸ್ಯೆಗಳು ಯಥಾವತ್ತಾಗಿ ಮುಂದುವರೆಯುತ್ತಿರುವುದು ಇದೀಗ ಒಂದು ತಿಂಗಳು ಕಳೆದರೂ ಪರಿಹಾರ ಕಾಣದೆ ಇರುವುದು ಬೇಸರದ ಸಂಗತಿ. ಇದಕ್ಕೆ ಬೇರೆ ಬೇರೆ ಹಲವಾರು ಕಾರಣಗಳು ಇರಬಹುದು.

ಆದರೆ ಪುರಸಭೆಯ ಹಲವಾರು ಸಮಸ್ಯೆಗಳಿಗೆ ಮುಖ್ಯವಾಗಿ ಕಾರಣ ಪೂರ್ಣಾವಧಿಯ ಇಂಜಿನಿಯರ್ ಅಲಭ್ಯತೆ. ನಿಯಮದಂತೆ ಮೂಡುಬಿದಿರೆ ಪುರಸಭೆಗೆ ಇಬ್ಬರು ಇಂಜಿನಿಯರ್ ಗಳ ಅಗತ್ಯವಿದೆ. ಆದರೆ ಇಲ್ಲಿ ಒಬ್ಬರೂ ಇಂಜಿನಿಯರ್ ಪೂರ್ಣಾವಧಿಗೆ ಇಲ್ಲದೆ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಇರುವ ಒಬ್ಬರು ಇಂಜಿನಿಯರ್ ಕೂಡ ಉಡುಪಿ ಜಿಲ್ಲೆಯಿಂದ ವಾರಕ್ಕೆ ಎರಡು ದಿನ ಮಾತ್ರ ಬಂದು ಹೋಗುವಂತೆ ಡಿಪ್ಯೂಟೇಶನ್ ನಲ್ಲಿ ಇದ್ದಾರೆ.
ನಮಗೆಲ್ಲ ಗೊತ್ತಿರುವಂತೆ ಮೂಡುಬಿದಿರೆ ಪುರಸಭೆ ಸುಮಾರು 40 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. 23 ವಾರ್ಡ್ ಗಳಲ್ಲಿ ಹಂಚಿ ಹೋಗಿರುವ ಮೂಡುಬಿದರೆ ಪುರಸಭೆ ಒಟ್ಟು ಐದು ಗ್ರಾಮಗಳನ್ನು ಒಳಗೊಂಡಿದೆ. ಆ ಗ್ರಾಮಗಳು ಮಾರ್ಪಾಡಿ, ಪ್ರಾಂತ್ಯ, ಕಲ್ಲಬೆಟ್ಟು, ಕರಿಂಜೆ, ಹಾಗೂ ಮಾರೂರು. ಇಷ್ಟು ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿರುವ ಮೂಡುಬಿದಿರೆ ಪುರಸಭೆಯಲ್ಲಿ ಪೂರ್ಣಾವಧಿಯ ಒಬ್ಬರೂ ಇಂಜಿನಿಯರ್ ಇಲ್ಲ ಎಂದರೆ ಸರಕಾರಕ್ಕೆ ನಾಚಿಕೆಗೇಡಿನ ವಿಷಯ.
ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ನೋಡಬೇಕಾದವರು ಯಾರು?, ಕಾಮಗಾರಿಯ ಯೋಜನೆಗಳು ಹೇಗೆ ಕಾರ್ಯಗತವಾಗಬೇಕೆಂದು ನಿರ್ಧರಿಸುವವರು ಯಾರು? ಅಧಿಕೃತ ಅನಧಿಕೃತ ಮನೆ, ಮಠ, ಮಂದಿರ, ಕೆರೆ ಇತ್ಯಾದಿಗಳ ತನಿಖೆ ಮಾಡುವವರು ಯಾರು? ನೀಡಲಾದ ಕಟ್ಟಡಗಳ ರೂಪರೇಷೆ ಸಮರ್ಪಕವಾಗಿದೆಯೇ ಎಂದು ಗಮನಿಸುವವರು ಯಾರು? ಇನ್ನಿತರ ಹಲವಾರು ವಿಷಯಗಳ ಬಗ್ಗೆ ಗಮನ ಇಡಬೇಕಾದ, ನೋಡಬೇಕಾದ, ತನಿಖೆ ಮಾಡಬೇಕಾದ ಜವಾಬ್ದಾರಿಯನ್ನು ಹೊಂದಿರುವ ಇಂಜಿನಿಯರ್ ಗಳೇ ಇಲ್ಲ ಎಂದಾದ ಮೇಲೆ ಸಮಸ್ಯೆಗಳ ಸರಮಾಲೆ ಮುಂದುವರಿಯದೆ ಇರುತ್ತದೆಯೇ?
ಇನ್ನಾದರೂ ಸ್ಥಳೀಯ ಶಾಸಕರು, ಸಂಸದರು ಇಲ್ಲಿಯ ಸಮಸ್ಯೆಗಳ ಬಗ್ಗೆ ಆದಷ್ಟು ಶೀಘ್ರ ಗಮನಹರಿಸಿ ಅಗತ್ಯ ಇರುವ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಮಾಜಿ ಶಾಸಕರು, ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೂಡ ಕೈಜೋಡಿಸುವ ಅಗತ್ಯವಿದೆ.
