ಮಂಗಳೂರು: ಎಂಆರ್ಪಿಎಲ್ (MRPL) ಹಾಗೂ MSEZL ಕೈಗಾರಿಕೆಗಳ ಹಸಿರು ವಲಯ ನಿರ್ಮಾಣಕ್ಕಾಗಿ ಈಗಾಗಲೇ ಸುಮಾರು 27 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಗೊಂಡಿದೆ. ಇದೇ ಸಂದರ್ಭದಲ್ಲಿ, ಕೈಗಾರಿಕಾ ಮಾಲಿನ್ಯದಿಂದ ತೀವ್ರವಾಗಿ ಬಾಧಿತವಾಗಿರುವ ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನೂ ಈ ಭೂಸ್ವಾಧೀನ ಪ್ರಕ್ರಿಯೆಗೆ ಸೇರಿಸಬೇಕೆಂದು ಆಗ್ರಹಿಸಿ ಸುಮಾರು 105 ಕುಟುಂಬಗಳ ಸ್ಥಳೀಯ ನಿವಾಸಿಗಳು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸ್ಥಳೀಯರು ಸಲ್ಲಿಸಿದ ಮನವಿಯಲ್ಲಿ, 2007ರಿಂದಲೂ ಕೈಗಾರಿಕಾ ಮಾಲಿನ್ಯದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸರ್ಕಾರ ಈವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ತಿಳಿಸಿದ್ದಾರೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ನೋಟಿಸ್ಗಳನ್ನು ನೀಡಲಾಗಿದ್ದರೂ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಮತ್ತೊಂದೆಡೆ, ಭೂಮಿಯ ಅಭಿವೃದ್ಧಿಯೂ ನಡೆಯದೆ, ಸುಮಾರು 105 ಕುಟುಂಬಗಳು ಅನಿಶ್ಚಿತತೆ ಮತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ ಎಂದು ಅವರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಈ ಕುರಿತು ತಕ್ಷಣ ಸ್ಪಂದಿಸಿದ ಐವನ್ ಡಿ’ಸೋಜಾ ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದರು. ಅಲ್ಲದೆ, ಸ್ಥಳೀಯರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಹಾಗೂ ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನು ಎಂಆರ್ಪಿಎಲ್ ಅಥವಾ MSEZL ವತಿಯಿಂದ ಭೂಸ್ವಾಧೀನಪಡಿಸಿ, ಸ್ಥಳೀಯ ನಿವಾಸಿಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗುವುದು. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ಸಮಸ್ಯೆಯನ್ನು ಪ್ರಸ್ತಾಪಿಸಿ, ಬಜ್ಪೆ ಶಾಂತಿಗುಡ್ಡೆಯ ನಿವಾಸಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಕೃಷ್ಣರಾಜ, ಮೈಯದ್ದಿ. ಕಿಶೋರ್ ಕುಲಾಲ್, ಜಾಕಿರ್ ಹುಸೇನ್, ಶಿಶಿರ್ ಕುಲಾಲ್ , ವಿನೋದ್ ಕುಲಾಲ್ , ಹರೀಶ್ ಪೂಜಾರಿ, ಕೌಶಿಕ್ ಜೋಗಿ ,ರಫೀಕ್, ರಫೀಕ್ ಶಾಂತಿಗುಟ್ಟೆ, ಹಫೀಜ್ ಜೋರಾ ಕರೀಂ ಮಮ್ತಾಜ್ ಮಾಲತಿ ಮಾಲತಿ ಕುಲಾಲ್ ಜಯಂತಿ….ಹಲವು ಸಂತ್ರಸ್ಥರು ಭಾಗಿಯಾಗಿದ್ದರು.
