ಮೂಡುಬಿದಿರೆ: ವಿಜ್ಞಾನವನ್ನು ಘನ, ದ್ರವ ಮತ್ತು ಅನಿಲ ಎಂಬ ಮೂರು ಸ್ಥಿತಿಗಳಿಗೆ ಮಾತ್ರ ಸೀಮಿತಗೊಳಿಸದೆ, ನಾಲ್ಕನೇ ಸ್ಥಿತಿಯಾದ ಪ್ಲಾಸ್ಮಾಕುರಿತು ವಿದ್ಯಾರ್ಥಿಗಳು ಆಸಕ್ತಿ ಮತ್ತು ಅರಿವು ಬೆಳೆಸಿಕೊಳ್ಳಬೇಕು ಎಂದು ಗಾಂಧಿನಗರದ ಇನ್‍ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (ಐಪಿಆರ್)ನ ವೈಜ್ಞಾನಿಕ ಅಧಿಕಾರಿ ಹಾಗೂ ಔಟ್‍ರೀಚ್ ವಿಭಾಗದ ಮುಖ್ಯಸ್ಥ ಡಾ. ಎನ್. ರಾಮಸುಬ್ರಮಣ್ಯನ್ ಹೇಳಿದರು.
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಭಾರತದ ಅಣುಶಕ್ತಿ ಇಲಾಖೆಯ (ಡಿಎಇ) ಅಧೀನದ ಇನ್‍ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್‍ನ (ಐಪಿಆರ್), ಸಹಯೋಗದಲ್ಲಿ ಎಐಇಟಿ ಎಂಬಿಎ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 5 ದಿನಗಳ 4ನೇ ರಾಜ್ಯ ಮಟ್ಟದ ಪ್ಲಾಸ್ಮಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.










ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು. ಪ್ಲಾಸ್ಮಾ ವಿಜ್ಞಾನದಲ್ಲಿ ಹೆಚ್ಚಿನ ಸಂಶೋಧಕರು ಮತ್ತು ಪರಿಣಿತರ ಅಗತ್ಯವಿದೆ. ವಿದ್ಯಾರ್ಥಿಗಳು ಭೌತಶಾಸ್ತ್ರ, ಗಣಿತ ಹಾಗೂ ಎಂಜಿನಿಯರಿಂಗ್ ವಿಷಯಗಳಲ್ಲಿ ಆಸಕ್ತಿ ಬೆಳೆಸಿ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ದೇಶದ ವೈಜ್ಞಾನಿಕ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಬಹುದು. ಪ್ಲಾಸ್ಮಾ ವಿಜ್ಞಾನ ಮತ್ತು ತಂತ್ರಜ್ಞಾನವು ಎಲೆಕ್ಟ್ರಾನಿಕ್ಸ್, ಸೂಪರ್ ಕಂಡಕ್ಟಿವಿಟಿ, ಜವಳಿ, ವೈದ್ಯಕೀಯ ಹಾಗೂ ಅಂತರಿಕ್ಷ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಸುಸ್ಥಿರ ಮತ್ತು ನಿರಂತರ ಶಕ್ತಿಯ ಮೂಲವನ್ನು ಕಂಡು ಹಿಡಿಯುವಲ್ಲಿ ಪ್ಲಾಸ್ಮಾ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ. ಪ್ಲಾಸ್ಮಾ ವಿಜ್ಞಾನದ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮಾನವ ಜೀವನವನ್ನು ಇನ್ನಷ್ಟು ಸುರಕ್ಷಿತ, ಸುಸ್ಥಿರ ಮತ್ತು ಸಮೃದ್ಧಗೊಳಿಸುವ ಸಾಮಥ್ರ್ಯ ಹೊಂದಿವೆ. ಆದ್ದರಿಂದ ವಿದ್ಯಾರ್ಥಿಗಳು ಪ್ಲಾಸ್ಮಾ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ನವೋದ್ಯಮ ಮತ್ತು ಸಂಶೋಧನೆಯ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು. ಅಣುಶಕ್ತಿ ಇಲಾಖೆ ಹಾಗೂ ಐಪಿಆರ್ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಪ್ಲಾಸ್ಮಾ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಔಟ್‍ರೀಚ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಭೂಮಿಯ ಮೇಲಿನ ಕೃತಕ ಸೂರ್ಯನನ್ನು ನಿರ್ಮಿಸುವುದು ಕೇವಲ ವೈಜ್ಞಾನಿಕ ಕಲ್ಪನೆಯಲ್ಲ. ಅದು ವಿಜ್ಞಾನದ ಮೂಲಕ ಮಾನವಜೀವನವನ್ನು ಇನ್ನಷ್ಟು ಸುಸ್ಥಿರಗೊಳಿಸುವ ಮಹತ್ವದ ಆವಿಷ್ಕಾರವಾಗಲಿದೆ. ಈ ತಂತ್ರಜ್ಞಾನ ಯಶಸ್ವಿಯಾದರೆ ಭವಿಷ್ಯದಲ್ಲಿ ವಿದ್ಯುತ್ ಕೊರತೆಯನ್ನು ಕಡಿಮೆ ಮಾಡಿ, ಪರಿಸರಕ್ಕೆ ಹಾನಿಯಾಗದ ಸ್ವಚ್ಛ ಶಕ್ತಿಯನ್ನು ಮಾನವಕುಲಕ್ಕೆ ಒದಗಿಸಲು ಸಾಧ್ಯವಾಗುತ್ತದೆ. ಪ್ಲಾಸ್ಮಾ ವಿಜ್ಞಾನ ಮತ್ತು ಅಣು ಸಂಯೋಜನೆಯ ಸಂಶೋಧನೆಗಳು ನಾಳಿನ ಜಗತ್ತಿನ ಶಕ್ತಿ ಭದ್ರತೆಗೆ ಹೊಸ ಆಶಾಕಿರಣವಾಗಲಿದೆ. ಈ ಮಹತ್ವದ ಗುರಿ ಸಾಧಿಸಲು ವಿಜ್ಞಾನಿಗಳು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಕೈ ಜೋಡಿಸಿ ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು- ಡಾ. ಎನ್. ರಾಮಸುಬ್ರಮಣ್ಯನ್ ಕಾರ್ಯಕ್ರಮದಲ್ಲಿ ಇನ್‍ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾರಿಸರ್ಚ್ (ಐಪಿಆರ್)ನ ವೈಜ್ಞಾನಿಕ ಅಧಿಕಾರಿ ಚೇತನ್ ಜರಿವಾಲಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್ , ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಸದಾಕತ್, ಕಾರ್ಯಕ್ರಮ ಸಂಯೋಜಕಡಾ ಶಶಿಕುಮಾರ್ ಇದ್ದರು. ಶಾರ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ಟೆಲ್ಲಾ ಸಾಜಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪ್ಲಾಸ್ಮಾದ ಮೂಲ ತತ್ತ್ವಗಳು, ಅದರ ವಿವಿಧ ಕೈಗಾರಿಕಾ, ವೈದ್ಯಕೀಯ ಮತ್ತು ಅಂತರಿಕ್ಷ ಕ್ಷೇತ್ರಗಳ ಅನ್ವಯಿಕೆಗಳನ್ನು ಒಳಗೊಂಡ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದ ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದರು.
