ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯಡಿ, ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿದ್ದ ಸುಮಾರು 400 ಪತ್ರಕರ್ತರ ಬಸ್ ಪಾಸ್ಗಳಿಗೆ ವಾರ್ತಾ ಇಲಾಖೆ ಅನುಮೋದನೆ ನೀಡಿದೆ.


ವಾರ್ತಾ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಕಮಿಟಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನಿರಂತರವಾಗಿ ನಡೆಸಿದ ಹೋರಾಟ ಮತ್ತು ಒತ್ತಾಯದ ಫಲವಾಗಿ, ಒಂದೇ ಹಂತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಮಂಜೂರು ಮಾಡಿರುವುದು ಇದೇ ಮೊದಲ ಬಾರಿ ಎನ್ನುವುದು ಸ್ವಾಗತಾರ್ಹ.
ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ದಾಖಲೆಗಳನ್ನು ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಿರುವ ವಾರ್ತಾ ಇಲಾಖೆಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ.
ಇದೇ ವೇಳೆ, ಇನ್ನೂ ಬಸ್ ಪಾಸ್ಗೆ ಅರ್ಜಿ ಸಲ್ಲಿಸದಿರುವ ಅರ್ಹ ಗ್ರಾಮೀಣ ಪತ್ರಕರ್ತರು ನಿಯಮಾವಳಿಯಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕೆಯುಡಬ್ಲ್ಯೂಜೆ ಮನವಿ ಮಾಡಿದೆ.
ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ಆಯುಕ್ತರನ್ನು ಸನ್ಮಾನಿಸಲಾಯಿತು.
ವಾರ್ತಾ ಇಲಾಖೆ ಉಪ ನಿರ್ದೇಶಕ ಗುರುನಾಥ್ ಕಡಬೂರು ಹಾಜರಿದ್ದರು.
ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸದಸ್ಯರಾದ ಶ್ರೀನಿವಾಸ ನಾಯಕ ಇಂಡಾಜೆ, ಚಂದ್ರು, ಮೋಹನ, ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
