ಪ್ರಕೃತಿ ವಿಕೋಪದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾದಲ್ಲಿ ಕೂಡಲೇ ಸ್ಪಂದಿಸಿ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್

ಉಡುಪಿ, ಆಗಸ್ಟ್ 07: ಪ್ರಕೃತಿ ವಿಕೋಪ ಹಾಗೂ ಅತಿವೃಷ್ಠಿಯಿಂದಾಗಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸುವುದರ ಜೊತೆಗೆ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿಯೇ ನೀಡಬೇಕು ಎಂದು ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಫರೀದ್ ಹೇಳಿದರು.

ಅವರು ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪ ಹಾಗೂ ಅತಿವೃಷ್ಠಿಯಿಂದಾಗಿ ಪ್ರಾಣಹಾನಿ, ಮನೆಹಾನಿ ಸೇರಿದಂತೆ ಮತ್ತಿತರ ಹಾನಿಗಳು ಉಂಟಾದಲ್ಲಿ ಕೆಳಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಅವರುಗಳಿಗೆ ಅಗತ್ಯ ನೆರವುಗಳನ್ನು ಒದಗಿಸಬೇಕು. ಮಳೆಯ ನೀರಿನಿಂದ ಪರಿಕರ, ಹೊದಿಕೆ, ಆಹಾರ ದಾಸ್ತಾನುಗಳು ಹಾಳಾದಲ್ಲಿ ತುರ್ತಾಗಿ ಅಧಿಕಾರಿಗಳು ತತ್‍ಕ್ಷಣ 5,500 ರೂ. ಪರಿಹಾರ ಧನ ವಿತರಿಸುವುದರೊಂದಿಗೆ ಸ್ವಾಭಿಮಾನದಿಂದ ಅವರುಗಳು ಜೀವಿಸಲು ಅವಕಾಶ ಮಾಡಿಕೊಡಬೇಕು. ಪರಿಹಾರದ ಹಣವನ್ನು ನೀಡುವಾಗ ಅಧಿಕಾರಿಗಳು ಹೃದಯವಂತಿಕೆ, ಪ್ರಜ್ಞಾವಂತಿಕೆ ಹಾಗೂ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಂಡು ಜನ ಸಾಮಾನ್ಯರ ಕಷ್ಟಕಾಲದಲ್ಲಿ ಸ್ಪಂದಿಸಿ, ಸಹಾಯಹಸ್ತ ನೀಡಬೇಕು ಎಂದರು.

ಜಿಲ್ಲೆಯ ಕಾಪು ತಾಲೂಕಿನಲ್ಲಿ ಭತ್ತದ ಬೆಳೆಯೇ ಪ್ರಮುಖವಾಗಿದ್ದು, ಪ್ರಸ್ತುತ 2020 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯಗಳು ಪೂರ್ಣಗೊಂಡಿವೆ. ಅನಾವೃಷ್ಠಿಯಿಂದಾಗಿ ಭತ್ತದ ಬೆಳೆ ಹಾನಿಯುಂಟಾಗಿದೆ. ಹಾನಿ ಉಂಟಾದ ಜಮೀನುಗಳಲ್ಲಿ ಪುನಃ ಭಿತ್ತನೆ ಕಾರ್ಯಗಳು ಮುಂಬರುವ ಆಗಸ್ಟ್ 20 ರ ವರೆಗೆ ನಡೆಯಲಿದೆ ಎಂದ ಅವರು, ಮಳೆಯಿಂದಾಗಿ ಬೆಳೆ ಹಾನಿಯ ಬಗ್ಗೆ ನಿಖರ ಸಮೀಕ್ಷೆಯನ್ನು ಕ್ರೂಢೀಕರಿಸಿ, ಸರಕಾರಕ್ಕೆ ಸಲ್ಲಿಸಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಸೇರಿದಂತೆ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ರೋಗಗಳ ಭಾದೆ ಆಗುವ ಸಾಧ್ಯತೆಗಳಿವೆ, ಇದಕ್ಕೆ ಅಗತ್ಯವಾಗಿರುವ ಔಷಧಿಗಳನ್ನು ಸಿಂಪರಣೆಗೆ ರೈತರುಗಳಿಗೆ ನೆರವಾಗಬೇಕು ಎಂದ ಅವರು, ಪ್ರಸ್ತುತ ಜಿಲ್ಲೆಯಲ್ಲಿ 19,236 ರೈತರುಗಳು ತೋಟಗಾರಿಕೆ ಬೆಳೆಗಳ ವಿಮೆಯನ್ನು ಮಾಡಿಸಿದ್ದಾರೆ. ಕಳೆದ ಬಾರಿ ಹೋಲಿಸಿದ್ದಲ್ಲಿ ಈ ಬಾರಿ 7690 ಕ್ಕೂ ಹೆಚ್ಚು ರೈತರುಗಳು ಒಳಪಟ್ಟಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕಾಪು ತಾಲೂಕಿನಲ್ಲಿ ಒಟ್ಟು 200 ಶಾಲೆಗಳ 660 ಕೊಠಡಿಗಳಲ್ಲಿ 91 ಕೊಠಡಿಗಳ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಇದು ಆದಷ್ಟು ಶೀಘ್ರದಲ್ಲಿಯೇ ಆಗಬೇಕು. ಅಪಾಯಕಾರಿ ಕೊಠಡಿಗಳಿದ್ದಲ್ಲಿ ಅಂತಹವುಗಳನ್ನು ಪಾಠ-ಪ್ರವಚನಗಳಿಗೆ ಬಳಕೆ ಮಾಡಿಕೊಳ್ಳಬಾರದು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಕಾಂಪೌಂಡ್‍ಗಳು ಶಾಲೆಯ ಸಮೀಪವಿದ್ದಲ್ಲಿ ವಿದ್ಯಾರ್ಥಿಗಳು ಹತ್ತಿರ ಹೋಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು. ಒಂದೊಮ್ಮೆ ಅಪಘಾತಗಳು ಉಂಟಾದಲ್ಲಿ ಶಾಲೆಗಳಿಗೆ ಹಾಗೂ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು ವಿತರಣೆ ಆಗಿರುವುದರ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳಿಗೆ ಶೂ ಗಳ ವಿತರಣೆಗೆ ರಾಜ್ಯ ಮಟ್ಟದಲ್ಲಿಯೇ ಉತ್ತಮ ಗುಣಮಟ್ಟದ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಂದ ಸರಬರಾಜಾದಾಗ ಶೂ, ಸಾಕ್ಸ್ ಗಳ ಗುಣಮಟ್ಟವನ್ನು ಪರೀಕ್ಷಿಸಿ, ಅವು ಉತ್ತಮ ಗುಣಮಟ್ಟದಿದ್ದಲ್ಲಿ ಮಾತ್ರ ವಿತರಿಸಬೇಕು. ಒಂದೊಮ್ಮೆ ಕಳಪೆಯಾದಲ್ಲಿ ಅವುಗಳ ವಿತರಣೆ ತಡೆಹಿಡಿಯಬೇಕು ಎಂದರು.

ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ, ಮೊಟ್ಟೆ ಹಾಗೂ ಹಾಲು ವಿತರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಮಕ್ಕಳಿಗೆ ವಿತರಣೆ ಆಗುತ್ತಿರುವ ಆಹಾರೋಪಚಾರಗಳ ಗುಣಮಟ್ಟದ ಕುರಿತು ಪರೀಕ್ಷೆಯನ್ನು ಜಿಲ್ಲಾ ಮಟ್ಟದ ಆಹಾರ ಅಂಕಿತ ಅಧಿಕಾರಿಗಳಿಂದ ಕೈಗೊಳ್ಳಲು ಸೂಚನೆ ನೀಡಿದರು.
ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಕೆಲವು ರಸ್ತೆಗಳು ಹಾಳಾಗಿ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ತುರ್ತಾಗಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಪಂಚಾಯತ್ ಇಂಜಿನಿಯರಿಂಗ್, ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸೂಚನೆ ನೀಡಿದರು.

ಮಳೆ-ಗಾಳಿಯಿಂದಾಗಿ 163 ವಿದ್ಯುತ್ ಕಂಬಗಳು ಉರುಳಿ ಹೋಗಿ, 31.71 ಲಕ್ಷ ರೂ. ನಷ್ಟು ಹಾನಿ ಉಂಟಾಗಿದೆ ಎಂದ ಅವರು, ಮಳೆ-ಗಾಳಿಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಲೈನ್‍ಮ್ಯಾನ್ ಗಳ ಕೊರತೆಗಳು ಇದ್ದಲ್ಲಿ ಹೊರಗುತ್ತಿಗೆ ಮೇಲೆ ಪಡೆಯಬೇಕು. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗಳು 24*7 ನಿರಂತರವಾಗಿ ಚಾಲನೆ ಇರುವಂತೆ ನೋಡಿಕೊಂಡು ದುರಸ್ಥಿ ಕಾರ್ಯಗಳನ್ನು ನೆರವೇರಿಸಬೇಕು ಎಂದರು.
ಅಪಾಯಕಾರಿ ಮರಗಳ ತೆರವು ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಒಂದೊಮ್ಮೆ ಇವುಗಳ ಕಾರ್ಯ ಆಗದೇ ಇದ್ದಲ್ಲಿ ಪ್ರಾಣಾಪಾಯಗಳು ಆಗುವ ಸಾಧ್ಯತೆ ಇರುತ್ತದೆ. ಹೀಗಾದಂತೆ ಎಚ್ಚರ ವಹಿಸಬೇಕು ಎಂದ ಅವರು, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಮನ್ವಯದೊಂದಿಗೆ ಈ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಅಧಿಕಾರಿಗಳು ಸರಕಾದ ಮುಖಗಳಿದ್ದಂತೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಳಮಟ್ಟದಲ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಜನಪರ ಕೆಲಸಗಳನ್ನು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಮಾಡಿಕೊಡಬೇಕು ಎಂದ ಅವರು, ಕಾಪು ತಾಲೂಕಿನಲ್ಲಿ ತಹಶೀಲ್ದಾರ್ ಅವರ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ವಿದ್ಯುತ್ ನಿರಂತರ ಸರಬರಾಜಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಮಳೆ ಗಾಳಿಯಿಂದ ವಿದ್ಯುತ್ ಸಂಪರ್ಕದಲ್ಲಿ ಸಂಜೆಯ ವೇಳೆಯಲ್ಲಿ ವ್ಯತ್ಯಯ ಉಂಟಾದಾಗ ಮುಂದಿನ ದಿನದ ಮಧ್ಯಾಹ್ನದ ವರೆಗೂ ಸಹ ವಿದ್ಯುತ್ ಸಮಸ್ಯೆ ಸಾರ್ವಜನಿಕರಿಗೆ ಉಂಟಾಗುತ್ತಿದೆ. ತಾಲೂಕಿನಲ್ಲಿ ಮಳೆಯಿಂದಾಗಿ ಕೆಲವು ರಸ್ತೆಗಳು ತುಂಬಾ ಹಾಳಾಗಿದ್ದು ಶಾಲಾ ಬಸ್‍ಗಳು ಸಂಚಾರಕ್ಕೆ ತೊಂದರೆ ಆಗಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿಲ್ಲ. ಅಲ್ಲದೆ ಸಾರ್ವಜನಿಕರಿಗೂ ಸಹ ತೊಂದರೆ ಉಂಟಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮುಖಂಡರಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *