ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಳ್ವಾಸ್ ಹೆಲ್ತ್ ಸೆಂಟರ್ ನ ಸಹಯೋಗದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಡುಬಿದಿರೆ ವಲಯ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಏಳು ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಯಿತು. ಮೊದಲ ದಿನ ಆಳ್ವಾಸ್ನ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ ಶ್ರೇಯಾ ವೈದ್ಯ, ಸುಮಾರು 120 ತಾಯಂದಿರಿಗೆ ಝಮ್ ಮೀಟಿಂಗ್ ಮೂಲಕ ಮಾಹಿತಿ ಒದಗಿಸಿದರು. ಎರಡನೇ ದಿನ ಆಳ್ವಾಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ತನ್ಯಪಾನ ಬಗ್ಗೆ ಮಾಹಿತಿ ನೀಡುವ ದೃಶ್ಯ ಮಾಧ್ಯಮದ ವಿಡಿಯೋಗಳನ್ನು ತಯಾರಿಸಿದರು. ಮೂರನೇ ದಿನ ಗರ್ಭಿಣಿಯರ ಆಹಾರ ಪದ್ದತಿಯನ್ನು ವಿವರಿಸುವ ಸ್ಟಾಲ್ಗಳನ್ನು ನಿರ್ಮಿಸಿ ಮಾಹಿತಿ ನೀಡಲಾಯಿತು. ನಾಲ್ಕನೇಯ ದಿನ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಐದನೇ ದಿನ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಎಸ್. ಶ್ರೀಧರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶೈಲಾ ಕಾರಗಿ ಇದ್ದರು. ಮಕ್ಕಳ ತಜ್ಞ ಡಾ. ದೀಪಕ್ ಪ್ರೀತೇಶ್ ಮಾಹಿತಿ ನೀಡಿದರು. ಆರನೇ ದಿನ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಿ ಎಲ್ಲರಿಗೂ ಮಾಹಿತಿ ನೀಡಲಾಯಿತು. ಏಳನೇ ದಿನ ಮೂಡುಬಿದಿರೆ ವಿಭಾಗದ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಗರ್ಭಿಣಿಯರ ಮಾನಸಿಕ ಆರೋಗ್ಯದ ಕುರಿತು ಮಾಹಿತಿಯನ್ನು ಆಳ್ವಾಸ್ನ ಮಾನಸಿಕ ಆರೋಗ್ಯ ತಜ್ಞೆ ಡಾ. ಪ್ರಜಕ್ತ ವಿ ರಾವ್ ನೀಡಿದರು. ಗರ್ಭಿಣಿಯರ ಆಹಾರ ಪದ್ಧತಿಯನ್ನು ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಅನುಷಾ ಆಚಾರ್ ಹಾಗೂ ಮಡಿಲು ಹೆರಿಗೆ ಯೋಜನೆಯ ಕುರಿತು ಆಳ್ವಾಸ್ನ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ ನೀಡಿದರು. ಪ್ರೊ. ಕವಿತಾ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ 2026ನೇ ಸಾಲಿನ ತಳಮಟ್ಟದ ನವೋದ್ಯಮ ಗೌರವಕ್ಕೆ ಪಾತ್ರರಾಗಿರುವ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್ ರನ್ನು ಆಳ್ವಾಸ್ ಹೆಲ್ತ್ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.
ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಜ್ಞರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ಆಳ್ವಾಸ್ನ ಹಿರಿಯ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
