ಮಂಗಳೂರು: ಕರಾವಳಿಯ ನಾಟ್ಯಪ್ರಪಂಚಕ್ಕೆ ಮಹಾನ್ ಕೊಡುಗೆ ನೀಡಿದ ಪಂದನಲ್ಲೂರು ಶೈಲಿಯ ಭರತನಾಟ್ಯ ನಿಪುಣೆ, ಕೀರ್ತಿಶೇಷ ಕರ್ನಾಟಕ ಕಲಾಶ್ರೀ ನೃತ್ಯಗುರು ವಿದುಷಿ ಕಮಲಾ ಭಟ್, ಸಂಸ್ಥಾಪಕಿ, ನಾಟ್ಯಲಯ ಉರ್ವ (ರಿ.) ಅವರ ಹುಟ್ಟುಹಬ್ಬದ ಅಂಗವಾಗಿ ಮಂಗಳೂರು ನಗರದ ಪುರಭವನದಲ್ಲಿ ಅವರ ಶಿಷ್ಯೆ ವಿನಯ ರಾವ್ ಹಾಗೂ ನಾಟ್ಯಲಯ ಊರ್ವ ಆಯೋಜಿಸಿದ್ದ ‘ಕಮಲಾಂಜಲಿ’ ಕಾರ್ಯಕ್ರಮವು ಗುರುವಾರ, ಆಗಸ್ಟ್ 13 ರಂದು ಗುರುಗಳ ಸವಿನೆನಪಿನೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ನೃತ್ಯ ಗುರುಗಳಾದ “ಶಾಂತಲಾ” ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ ಕುಮಾರ್ ರವರು ಉದ್ಘಾಟಿಸಿ, ಆಶೀರ್ವಾದ ಪೂರ್ವಕವಾಗಿ ಹಿತನುಡಿ ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಾಯೋಗಿ ಡಾ. ಸಾಗರ್ ಟಿ. ಎಸ್, ನಿರ್ದೇಶಕರು, ಶ್ರೀ ಸಾಯಿರಾಮನ್ ನೃತ್ಯ ಕೇಂದ್ರ, ತುಮಕೂರು, ಮತ್ತು ವಿನಯ್ ಭಟ್ ಪಿ ಜೆ, ಮಹಾಪ್ರಬಂಧಕರು, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು, ಇವರುಗಳು ಉಪಸ್ಥಿತರಿದ್ದರು.
ಭರತಾಂಜಲಿ (ರಿ.) ಕೊಟ್ಟಾರ ಇದರ ನಿರ್ದೇಶಕರಾದ ಗುರು ಶ್ರೀಧರ ಹೊಳ್ಳರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು.
ವಿದುಷಿ ಸೌಮ್ಯ ಸುಧೀದ್ರರಾವ್ ನೃತ್ಯ ಕಾರ್ಯಕ್ರಮವನ್ನು ನಿರೂಪಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ನಾಟ್ಯಲಯದ ಗುರುಗಳಾದ ವಿದುಷಿ ವಿನಯ ರಾವ್ ಸರ್ವರಿಗೂ ವಂದಿಸಿದರು.
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ|
ಕಮಲವು ಮತ್ತೊಂದು ಕಮಲದಿಂದ ಹುಟ್ಟಿದೆ ಎಂದು ಹೇಳಲಾಗುತ್ತದೆ, ಆದರೆ ಯಾರೂ ಅದನ್ನು ನೋಡಿಲ್ಲ. ಆದರೆ, ಕಮಲ ಟೀಚರ್ ಕಮಲ ದಳಗಳ ಹಾಗೆ ಶಿಷ್ಯೇಯರನ್ನು ಹುಟ್ಟುಹಾಕಿದ್ದಾರೆ.
ಗುರುಗಳಾದ ವಿದುಷಿ ಕಮಲಾ ಭಟ್ ರವರು ಸಹಸ್ರ, ಸಹಸ್ರಾರು ನೃತ್ಯಪಟುಗಳನ್ನು ತಯಾರುಮಾಡಿ ನಮ್ಮ ಸಮಾಜಕ್ಕೆ ನೀಡಿ, ನೃತ್ಯ ಕಲೆ ಮುಂದುವರೆಯುವಂತೆ ಮಾಡಿದ್ದಾರೆ.
ನಿರ್ದೇಶಕಿ ಗುರು ವಿದುಷಿ ವಿನಯ ರಾವ್ ರವರ ನಿರ್ದೇಶನದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯಾರ್ಚನೆ ಕಾರ್ಯಕ್ರಮ ಮನೋಜ್ಞವಾಗಿ ನಡೆಯಿತು.
ಈ ಭಾರಿ ವಿಶೇಷವಾಗಿ ಈ ವರ್ಷ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ತಮ್ಮ ಗುರುವಿನ ಮುಂದೆ ತಮ್ಮ ನೃತ್ಯ ಪ್ರದರ್ಶನವನ್ನು ಪ್ರದರ್ಶಿಸಿದರು. ಮತ್ತು ಗುರುಗಳಾದ ವಿದುಷಿ ವಿನಯರಾವ್ ಮತ್ತು ಶ್ರೀ ಕೃಷ್ಣರಾವ್ ದಂಪತಿಗಳನ್ನು ಅಭಿಮಾನಪೂರ್ವಕವಾಗಿ ಸನ್ಮಾನಿಸಿದರು.
ಈ ಕಾರ್ಯಕ್ರಮವೂ ಬರಿ ಸಾಂಸ್ಕೃತಿಕ ನೃತ್ಯಪ್ರದರ್ಶನವಾಗಿರದೇ, ಗುರು ಶಿಷ್ಯೆಯರ ಅವಿನಾಭಾವ ಸಂಬಂಧದಿಂದ ಕೂಡಿ ಭಾವನಾತ್ಮಕವಾಗಿ ಮೂಡಿಬಂದು ವಿಶೇಷವಾದ ಕಾರ್ಯಕ್ರಮವಾಗಿತ್ತು.
