ಮೂಡುಬಿದಿರೆ: ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಸಪ್ತಮಿ ಮಹೋತ್ಸವವು ಧಾರ್ಮಿಕ ಶ್ರದ್ಧಾಭಕ್ತಿಯಿಂದ ನಡೆಯಿತು.
ಭಾರತದ ಪ್ರಾಚೀನ ಪವಿತ್ರ ತೀರ್ಥಕ್ಷೇತ್ರಗಳ ಪರಂಪರೆಯಲ್ಲಿ ಮಹತ್ವ ಪಡೆದಿರುವ ಪಾರ್ಶ್ವನಾಥ ಸ್ವಾಮಿಯು ಕಾಶಿಯ ರಾಜ ಅಶ್ವಸೇನ ಹಾಗೂ ರಾಣಿ ವಾಮಾದೇವಿಯ ಪುತ್ರನಾಗಿ ಜನಿಸಿ, ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣಕ್ಕಾಗಿ ದೀಕ್ಷೆ ಸ್ವೀಕರಿಸಿ ಶ್ರಾವಣ ಸಪ್ತಮಿಯಂದು ಮೋಕ್ಷವನ್ನು ಪಡೆದರು ಎಂಬ ನಂಬಿಕೆಯಿದೆ.
ಆ ಪ್ರಯುಕ್ತ 2026ರ ಆಗಸ್ಟ್ 19ರಂದು ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಶ್ರೀಮಠ ಹಾಗೂ ಗುರುಬಸದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಜಗದ್ಗುರು ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಗುರುಬಸದಿ ಹಾಗೂ ಕ್ಷೇತ್ರದ ಮೂಲಸ್ವಾಮಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಬೆಳಿಗ್ಗೆ 8 ಗಂಟೆಗೆ ನಡೆದ ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡು ಅಷ್ಟವಿಧಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.





ಐತಿಹಾಸಿಕ ಮಹಾಪುರುಷರಾದ 23ನೇ ತೀರ್ಥಂಕರ ಭಗವಾನ್ ಪಾರ್ಶ್ವನಾಥರು ಜಾರ್ಖಂಡ್ ರಾಜ್ಯದ ಮಧುಬನ್ ಸಮೀಪದ ಶಾಶ್ವತ ತೀರ್ಥಕ್ಷೇತ್ರ ಸಮ್ಮೇದಗಿರಿಯ ಸುವರ್ಣಭದ್ರ ಕೂಟದಲ್ಲಿ ನಿರ್ವಾಣ ಹೊಂದಿದ ಶುಭದಿನದ ಸ್ಮರಣಾರ್ಥ 2803ನೇ ಮೋಕ್ಷ ಕಲ್ಯಾಣ ಮಹಾ ಅರ್ಘ್ಯವನ್ನು ಸಮರ್ಪಿಸಲಾಯಿತು.
ಭಗವಾನ್ ಪಾರ್ಶ್ವನಾಥರು ಭಗವಾನ್ ಮಹಾವೀರ ಸ್ವಾಮಿಗಿಂತ ಸುಮಾರು 250 ವರ್ಷಗಳ ಪೂರ್ವದಲ್ಲಿ ಜೀವಿಸಿದ್ದರು ಎಂದು ಜೈನ ಪರಂಪರೆ ತಿಳಿಸುತ್ತದೆ. ಸುಮಾರು ನೂರು ವರ್ಷಗಳ ಆಯುಷ್ಯವನ್ನು ಹೊಂದಿದ್ದ ಅವರು ತಪಸ್ಸು ಮತ್ತು ಧರ್ಮದ ಮೂಲಕ ಲೋಕಕಲ್ಯಾಣದ ಸಂದೇಶವನ್ನು ಸಾರಿದರು.
ಮೂಡುಬಿದಿರೆಯ ಪ್ರಾಚೀನ ಹೆಸರು ‘ಪಾರ್ಶ್ವಪುರ’ ಎಂಬುದಾಗಿದ್ದು, ಇಲ್ಲಿರುವ ಸುಮಾರು 12 ಅಡಿ ಎತ್ತರದ ಕೃಷ್ಣಶಿಲೆಯ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಸುಂದರ ಬಿಂಬವು ಈ ಕ್ಷೇತ್ರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿದೆ.
ಮೋಕ್ಷ ಸಪ್ತಮಿ ಅಂಗವಾಗಿ ಸ್ಥಳೀಯ ಮಹಿಳಾ ಸಮಾಜದ ವತಿಯಿಂದಲೂ ಸಾಮೂಹಿಕ ಪೂಜೆ ಹಾಗೂ ಮಹಾ ಅರ್ಘ್ಯ ಸಮರ್ಪಣೆ ನಡೆಯಿತು. ಭಕ್ತರು ಹಾಗೂ ಯಾತ್ರಾರ್ಥಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧರ್ಮಲಾಭ ಪಡೆದರು.
ಕಾರ್ಯಕ್ರಮದಲ್ಲಿ ಶಂಭವ ಕುಮಾರ್ ವೀರೇಂದ್ರ, ಸನತ್ ಕುಮಾರ್, ವೀಣಾ ರಘುಚಂದ್ರ, ಶ್ರೀಮತಿ ಮಂಜುಳಾ ಅಭಯಚಂದ್ರ, ದಿವ್ಯಾ, ಆರತಿ ಪುರೋಹಿತ, ವಿರಾಜ್ ಇಂದ್ರ ಸೇರಿದಂತೆ ಸ್ಥಳೀಯ ಭಕ್ತರು ಹಾಗೂ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.
