ಮುಂಬಯಿ (ಗುರುಪುರ), ಸೆ.16: ಯಕ್ಷಗಾನ ಕಲಾವಿದ ಸುರೇಶ್ ಪೂಜಾರಿ ಬಳ್ಳಿ (ಕುಪ್ಪೆಪದವು) ಅವರಿಗೆ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡಲಾಗುವ 2026ನೇ ಸಾಲಿನ `ಯಕ್ಷ ಸಿರಿ’ ಪ್ರಶಸ್ತಿ ಸಿಕ್ಕಿದ್ದರೆ, 2024ರಲ್ಲಿ ಕುಪ್ಪೆಪದವು ಅಲ್ಲಿಯವರೇ ಆಗಿರುವ ಉಮೇಶ್ ಸಾಲ್ಯಾನ್ ಅವರಿಗೆ ಈ ಪ್ರಶಸ್ತಿ ಒಲಿದು ಬಂದಿತ್ತು. ವಿಶೇಷವೆಂದರೆ ಇವರಿಬ್ಬರೂ ಕಟೀಲು ಯಕ್ಷಗಾನ ಮೇಳಗಳಲ್ಲಿ ಮಹಿಸಾಸುರನ ಪಾತ್ರಧಾರಿಗಳಾಗಿ ಹೆಚ್ಚು ಪ್ರಚಲಿತದಲ್ಲಿದ್ದಾರೆ.



ಕುಪ್ಪೆಪದವು ಕಿಲೆಂಜಾರು ಗ್ರಾಮದ ಬಳ್ಳಿ ಎಂಬಲ್ಲಿನ ಚೆನ್ನಪ್ಪ ಪೂಜಾರಿ ಮತ್ತು ಶಾರದಾ ದಂಪತಿಯ ಪುತ್ರ ಸುರೇಶ್ ಪೂಜಾರಿ. ಬಾಲ್ಯದಿಂದಲೇ ಯಕ್ಷಗಾನ ಕ್ಷೇತ್ರದ ಮೇಲೆ ಆಸಕ್ತರಾದ ಇವರು 1984ರಲ್ಲಿ ಕುಪ್ಪೆಪದವಿನ ದುರ್ಗೇಶ್ವರಿ ಯಕ್ಷಗಾನ ಮಂಡಳಿ ಮೂಲಕ ರಂಗಸ್ಥಳಕ್ಕೆ ಪದಾರ್ಪಣೆ ಮಾಡಿದ್ದರು. ಇರುವೈಲು ಮೇಳದಲ್ಲಿ ವೇಷ ಮಾಡಿದ್ದ ಇವರು 1989ರಲ್ಲಿ ಮನೋಹರ ಶೆಟ್ಟಿ ನಡಿಕಂಬ್ಳಗುತ್ತು ಅವರ ಶಿಫಾರಸು ಹಾಗೂ ದಿ. ಕಲ್ಲಾಡಿ ವಿಠಲ ಶೆಟ್ಟಿ ಅವರ ಸಹಕಾರದಿಂದ ಕಟೀಲು ಮೇಳ ಸೇರಿದ್ದರು. ಆರಂಭದಲ್ಲಿ ಪುಂಡುವೇಷಕ್ಕೆ ಸೀಮಿತರಾಗಿದ್ದರೂ ಮುಂದೆ ಶೂರ್ಪನಖಾ, ರಾವಣ, ಕುಂಭಕರ್ಣ, ತಾರಕಾಸುರ ಮತ್ತಿತರ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ದೇರಣ್ಣ ಬಜ್ಪೆ ಮತ್ತು ಮಂಜುನಾಥ ಭಟ್ ಅವರಲ್ಲಿ ನಾಟ್ಯಾಭ್ಯಾಸ ಮಾಡಿದ್ದರು.
ಇವರು ಕಳೆದ 37 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 1994ರಲ್ಲಿ ಪ್ರಥಮ ಬಾರಿಗೆ ಮಹಿಷಾಸುರ ವೇಷ ಮಾಡಿದ್ದ ಇವರು ಮುಂದೆ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆಯಲ್ಲಿ ಖಾಯಂ ಮಹಿಷಾಸುರ ವೇಷಧಾರಿಯಾದರು. ವಿಶೇಷ ಅಭಿನಯ ಮತ್ತು ಮಾತುಗಾರಿಕೆಯ `ಗತ್ತಿನ’ ಮಹಿಷಾಸುರ ಪಾತ್ರ ಇವರದ್ದಾಗಿದ್ದು, ಯಕ್ಷಪ್ರಿಯರಿಗೆ ಇವರೆಂದರೆ ಅಚ್ಚುಮೆಚ್ಚು.
ಉಡುಪಿಯ ಕಲಾರಂಗ, ಕುಂಬಳೆಯ ಬಣ್ಣದ ಮಾಲಿಂಗ ಪ್ರತಿಷ್ಠಾನ, ಎಕ್ಸೆಲ್ ಅಕಾಡೆಮಿ ಮತ್ತಿತರ ಸಂಸ್ಥೆಗಳಿಗೆ ನೂರಾರು ಪ್ರಶಸ್ತಿ, ಗೌರವಗಳು ಇವರಿಗೆ ಸಂದಾಯವಾಗಿವೆ. ಇದೀಗ ಇವರ ಪ್ರತಿಭೆಗೆ ಸಂದ ಗೌರವವೆಂಬಂತೆ ರಾಜ್ಯ ಯಕ್ಷಗಾನ ಅಕಾಡೆಮಿಯ ಯಕ್ಷ ಸಿರಿ ಪ್ರಶಸ್ತಿ ಬಂದಿದೆ. ಇದು ಇವರ ಕಲಾಸೇವೆ ಮತ್ತು ಯಕ್ಷ ಪ್ರೌಢಿಮೆಗೆ ಸಂದ ಗೌರವವಾಗಿದೆ.
“ಹಲವು ಪ್ರಶಸ್ತಿಗಳು ಬಂದಿವೆ. ಯಕ್ಷಗಾನ ಅಕಾಡೆಮಿಯಿಂದ ಗುರುತಿಸಿರುವುದು ತುಂಬ ಸಂತೋಷವಾಗಿದೆ. ಯಕ್ಷರಂಗದಲ್ಲಿ ಈ ಮಟ್ಟಕ್ಕೆ ಏರಲು ಸಹಕರಿಸಿದ ಕಟೀಲಿನ ಆಸ್ರಣ್ಣರು, ಮೇಳದ ಯಜಮಾನರು ಮತ್ತು ಸಹ ಕಲಾವಿದರನ್ನು ಮರೆಯುವಂತಿಲ್ಲ. ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಅದರಲ್ಲೂ ಸದಸ್ಯ ವಿನಯ ಕುಮಾರ್ ಶೆಟ್ಟಿ ಗುರುಪುರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಸುರೇಶ್ ಪೂಜಾರಿ ಬಳ್ಳಿ (ಕುಪ್ಪೆಪದವು) ಹೇಳಿದರು.
“ಪ್ರಶಸ್ತಿಗಳು ಪ್ರಭಾವರಹಿತವಾಗಿರಬೇಕು. ಅರ್ಹರನ್ನು ಗುರುತಿಸಿದಾಗ ಮಾತ್ರ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ. ಪ್ರಶಸ್ತಿಗಾಗಿ ಸದಸ್ಯರೊಬ್ಬರು ಮಾಡುವ ಶಿಫಾರಸು ಆ ಕಲಾವಿದರ ಸಾಧನೆಗೆ ಪೂರಕವಾಗಿರಬೇಕೇ ಹೊರತು ಶ್ರೀಮಂತಿಕೆಗೆ ಅಲ್ಲ. ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿಯು ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾಗದ ಹಿರಿಯ ಪ್ರತಿಭೆಗಳಿಗೆ ಮಣೆ ಹಾಕಿದೆ. ಸದಸ್ಯನಾಗಿ ಈ ಬೆಳವಣಿಗೆ ನನಗೆ ಖುಷಿ ತಂದುಕೊಟ್ಟಿದೆ” ಎಂದು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು (ಗುರುಪುರ) ಹೇಳಿದರು.
ಸರ್ಕಾರದ ಯಾವುದೇ ಒಂದು ಕಲಾ ಅಕಾಡೆಮಿ ಅಥವಾ ಪರಿಷತ್ತಿನಲ್ಲಿ ಗ್ರಾಮೀಣ ಪ್ರದೇಶವನ್ನು ಪ್ರತಿನಿಧಿಸುವ ಸದಸ್ಯರಿದ್ದರೆ, ಗ್ರಾಮೀಣ ಭಾಗದಲ್ಲಿ ಅದೆಷ್ಟೋ ವರ್ಷಗಳಿಂದ ಕಲಾ ಸೇವೆಗೈಯುತ್ತಿರುವ ಅಥವಾ ನಿವೃತ್ತಿ ಹೊಂದಿರುವ ಹಿರಿಯ ಪ್ರತಿಭೆಗಳನ್ನು ಗುರುತಿಸಲು ಸುಲಭ ಸಾಧ್ಯವಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯು ಕಳೆದ 4 ವರ್ಷಗಳ ಅವಧಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆಗೈದ, ಜೀವಿತದ ಕೊನೆಯವರೆಗೂ ಎಲೆಮರೆ ಕಾಯಿಯಂತೆ ಇರಬೇಕಿದ್ದ ಹಲವು ಹಿರಿಯ ಮಹಾನ್ ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಗುರುಪುರ ಹೋಬಳಿಗೆ ಸಂಬಂಧಪಟ್ಟಂತೆ 2024ರಲ್ಲಿ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮೇಳದ ಸಂಚಾಲಕ ಹಾಗೂ ಹಿರಿಯ ಸ್ತ್ರೀ ವೇಷಧಾರಿ ಸುರೇಂದ್ರ ಮಲ್ಲಿ ಗುರುಪುರ ಮತ್ತು ಕಟೀಲು ಯಕ್ಷಗಾನ ಮೇಳದ ಮಹಿಷಾಸುರ ಪಾತ್ರಧಾರಿ ಉಮೇಶ್ ಸಾಲ್ಯಾನ್ ಕುಪ್ಪೆಪದವು, 2025ರಲ್ಲಿ ಕಟೀಲು ಮೇಳದ ಕಲಾವಿದ ಮಂಜುನಾಥ ಭಟ್ ಬೆಳ್ಳಾರೆ, 2026 ರಲ್ಲಿ ಕಟೀಲು ಯಕ್ಷಗಾನ ಮೇಳದ ಮತ್ತೋರ್ವ ಮಹಿಷಾಸುರ ಪಾತ್ರಧಾರಿ ಸುರೇಶ್ ಪೂಜಾರಿ ಬಳ್ಳಿ (ಕುಪ್ಪೆಪದವು) ಅವರಿಗೆ ಯಕ್ಷಗಾನ ಅಕಾಡೆಮಿ ‘ಯಕ್ಷ ಸಿರಿ’ ಪ್ರಶಸ್ತಿ ಒಲಿದಿದ್ದರೆ, 2023ರ ಕೊನೆಯ ಅವಧಿಯಲ್ಲಿ ಕಟೀಲು ಯಕ್ಷಗಾನ ಮೇಳದ ಹಿರಿಯ ವೇಷಧಾರಿ ಬಾಬು ಕುಲಾಲ್ ಹಾಗೂ ತಲಕಳ ಶ್ರೀ ವಿಶ್ವನಾಥ ಮಹಾಗಣಪತಿ ಮೇಳದ ಹಿರಿಯ ವೇಷಧಾರಿ ಮಂಗಳೂರಿನ ಕೇಶವ ಶಕ್ತಿನಗರ ಅವರಿಗೂ ಈ ಪ್ರಶಸ್ತಿ ಲಭಿಸಿತ್ತು. ಯಕ್ಷಗಾನ ಉಳಿಸಿ, ಬೆಳೆಸುವಲ್ಲಿ ಶ್ರಮಿಸಿದವರಲ್ಲಿ ಮಂಗಳೂರು ಗ್ರಾಮೀಣ ಪ್ರದೇಶಗಳ ಕಲಾವಿದರ ಸೇವೆ ಮಹತ್ವದ್ದಾಗಿದೆ. ಅಂತಹ ಹಿರಿಯ ಮತ್ತು ಅಪ್ರತಿಮ ಯಕ್ಷಗಾನ ಕಲಾವಿದರಿಗೆ ಅಕಾಡೆಮಿಯ ಗೌರವ ಸಂದಾಯವಾದಾಗಲೇ ಪ್ರಶಸ್ತಿಗಳ ಗೌರವ ಹೆಚ್ಚುತ್ತದೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ.
