
ಲೇಖನ: ನವೀನ್ ಹಬೀಬ್
(ಶಿಕ್ಷಕರು, ಬರಹಗಾರರು ಹಾಗೂ ಜೀವನ ಕೌಶಲ್ಯ ಮಾರ್ಗದರ್ಶಕರು)
ಇಂದಿನ ನಮ್ಮ ಶಾಲೆಯ ವಿಶೇಷ ಅಸೆಂಬ್ಲಿಗೆ ನಿಮ್ಮೆಲ್ಲರಿಗೂ ಸ್ವಾಗತ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಬದುಕಿನ ಮೌಲ್ಯಗಳನ್ನು ತಿದ್ದಿ ತೀಡಲು ನಮ್ಮ ನಡುವೆ ಇಂದು ಒಬ್ಬ ವಿಶೇಷ ಅತಿಥಿಗಳು ಉಪಸ್ಥಿತರಿದ್ದಾರೆ.
ಮಕ್ಕಳಲ್ಲಿ ಅಡಗಿರುವ ಗೊಂದಲಗಳನ್ನು ನಿವಾರಿಸಿ, ಜೀವನದ ಸತ್ಯಗಳನ್ನು ಸರಳವಾಗಿ ತಿಳಿಸಿಕೊಡಲು ಆಗಮಿಸಿರುವ ಮಾನ್ಯ “ನವೀನ್ ಮಾಸ್ಟರ್” ಅವರನ್ನು ಅತ್ಯಂತಾದಾರವಾಗಿ ಶಾಲೆಯ ಪರವಾಗಿ ವೇದಿಕೆಗೆ ಸ್ವಾಗತಿಸುತ್ತೇನೆ.
ಈಗ ಈ ಇಂದಿನ ವಿಶೇಷ ಉಪನ್ಯಾಸವನ್ನು ಆರಂಭಿಸುವಂತೆ ನವೀನ್ ಮಾಸ್ಟರ್ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸುತ್ತೇನೆ.”

‘ನವೀನ್ ಮಾಸ್ಟರ್’ ಶಾಲೆಯ ಪ್ರಾಚಾರ್ಯರಿಗೆ ನನ್ನ ವಿಶೇಷ ಧನ್ಯವಾದಗಳು,, ಈ ವಿಶೇಷ ವೇದಿಕೆ ಹಾಗೂ ಅವಕಾಶ ನೀಡಿದಕ್ಕಾಗಿ,,
ಶುಭ ಮುಂಜಾನೆ ಮಕ್ಕಳೇ,,ಅದೇನು ಅಂದ್ರೆ,
ಪ್ರತಿಯೊಬ್ಬರ ಬದುಕಿನ ಹಾದಿಯಲ್ಲಿಯೂ ಯಾವುದೋ ಒಂದು ಘಟನೆಯ ನೆರಳು, ಮನಸ್ಸನ್ನು ಕಾಡುವ ಅಪರಾಧಿ ಪ್ರಜ್ಞೆ ಅಥವಾ ‘ಗಿಲ್ಟ್’ ಇದ್ದೇ ಇರುತ್ತದೆ. ನಮ್ಮದಾಗದ ತಪ್ಪಿಗೂ, ನಮ್ಮಿಂದಲೇ ಎಲ್ಲವೂ ಆಯಿತು ಎಂಬ ಅಘಾತಕಾರಿ ನೋವಿನಲ್ಲಿ ಜೀವಿಸುತ್ತಿರುವ ಅದೆಷ್ಟೋ ಜೀವಗಳು ನಮ್ಮಲ್ಲೇ ಇವೆ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಗಿಂತ, ವಿಧಿಯ ಆಟಕ್ಕೆ ಸಿಲುಕಿ ನಾವೇ ಕಾರಣಕರ್ತರಂತೆ ನರಳುವುದೇ ಹೆಚ್ಚು. ಬಾಳಿನ ಹಾದಿಯಲ್ಲಿ ಯಾವುದೋ ಒಂದು ಅನಿರೀಕ್ಷಿತ ತಿರುವು ನಮ್ಮನ್ನು ಸುಮ್ಮನೆ ಒಂದು ನಿಮಿತ್ತವನ್ನಾಗಿ ಮಾಡಿಕೊಂಡಿರುತ್ತದೆ. ವಿಧಿ ತನ್ನದೇ ಆದ ಚಿತ್ರಕತೆಯನ್ನು ಬರೆಯಲು ನಮ್ಮನ್ನು ಒಂದು ಪಾತ್ರವನ್ನಾಗಿ ಆಯ್ಕೆ ಮಾಡಿಕೊಂಡಿರುತ್ತದೆಯೇ ಹೊರತು, ಆ ದುರ್ಘಟನೆಗೆ ನಾವೇ ನೇರ ಹೊಣೆಯಾಗಿರುವುದಿಲ್ಲ. ಆದರೆ ಈ ಸತ್ಯವನ್ನು ಅರಿಯದೆ, ತಮ್ಮದೇ ತಪ್ಪೆಂಬ ಭ್ರಮೆಯಲ್ಲಿ ಕೊರಗುವವರ ಸಂಖ್ಯೆ ತುಂಬಾ ದೊಡ್ಡದಿದೆ ಮಕ್ಕಳೇ,,
ನಾವೆಲ್ಲರೂ ಬದುಕಿನ ರಂಗಮಂಚದ ನಟರು. ನಿರ್ದೇಶಕನಿಲ್ಲದ ನಾಟಕವಿಲ್ಲ, ವಿಧಿಯ ಲಿಖಿತವಿಲ್ಲದೆ ಯಾವುದೇ ಘಟನೆ ನಡೆಯುವುದಿಲ್ಲ. ಆದರೆ ವಿಚಿತ್ರವೆಂದರೆ, ತೆರೆಯ ಹಿಂದಿನ ಆಟವನ್ನು ಅರಿಯದ ನಾವು, ಆ ದೃಶ್ಯದಲ್ಲಿ ನಮ್ಮ ಉಪಸ್ಥಿತಿ ಇತ್ತೆಂಬ ಒಂದೇ ಕಾರಣಕ್ಕೆ ಇಡೀ ಪ್ರಸಂಗದ ಪಾಪದ ಹಣೆಪಟ್ಟಿಯನ್ನು ನಮ್ಮ ತಲೆಗೆ ಕಟ್ಟಿಕೊಳ್ಳುತ್ತೇವೆ. ಯಾವುದೋ ಒಂದು ಅಪಘಾತ, ಅನಿರೀಕ್ಷಿತ ಸಾವು ಅಥವಾ ಕುಟುಂಬದ ಬಿಕ್ಕಟ್ಟು—ಇವುಗಳಲ್ಲಿ ನಮ್ಮ ಪಾತ್ರ ಕೇವಲ ಒಂದು ಸಂದರ್ಭದ ಸಾಕ್ಷಿಯಷ್ಟೇ ಆಗಿರುತ್ತದೆ. ಅದನ್ನು ಬದಲಾಯಿಸುವ ಶಕ್ತಿ ನಮ್ಮ ಕೈಯಲ್ಲಿರಲಿಲ್ಲವಾದರೂ, “ನಾನು ತಡೆಯಬೇಕಿತ್ತು”ನಾನು ಬೇಡ ಅಂತ ಹೇಳ್ಬೇಕಿತ್ತು” ನಾನು ಹಠ ಮಾಡ್ಬಾರ್ದಿತ್ತು ” ಅಥವಾ “ನನ್ನಿಂದಲೇ ಆಯಿತು” ಎಂಬ ಭ್ರಮೆ ನಮ್ಮನ್ನು ಕೊಲ್ಲುತ್ತಿರುತ್ತದೆ.
ಈ ಸೆಷನ್ ಅಂಥದ್ದೇ ಒಂದು ದೂರು, ನೋವು ಮತ್ತು ಮೌನ ವೇದನೆಯಲ್ಲಿ ಮುಳುಗಿರುವ ಮನಸ್ಸುಗಳಿಗೆ ಒಂದು ಸಾಂತ್ವನದ ಸ್ಪರ್ಶ.
ನಿಮ್ಮ ತಪ್ಪಿಲ್ಲದಿದ್ದರೂ, ವಿಧಿಯ ಕಕ್ಷೆಯಲ್ಲಿ ಸಿಲುಕಿ ನಲುಗುತ್ತಿರುವ ಆ ನೋವಿನ ಭಾರವನ್ನು ಇಳಿಸುವ ಸಣ್ಣ ಪ್ರಯತ್ನ. ವಿಧಿಯ ಆಟಕ್ಕೂ ನಮಗೂ ಇರುವ ಸೂಕ್ಷ್ಮ ನಂಟನ್ನು ಬಿಚ್ಚಿಡುತ್ತಾ, ಆಪಾದನೆಯ ಮುಕ್ತಿಯಿಂದ ಹೊರಬಂದು ನೆಮ್ಮದಿಯ ಉಸಿರು ಬಿಡುವ ಹಾದಿಯನ್ನು ಹುಡುಕುವ ಪ್ರಾಮಾಣಿಕ ಹೆಜ್ಜೆ. ಬನ್ನಿ, ಈ ಅಪರಾಧಿ ಪ್ರಜ್ಞೆಯ ಸೆರೆಯಿಂದ ಮನಸ್ಸನ್ನು ಮುಕ್ತಗೊಳಿಸುವ ಕಥನವೊಂದನ್ನು ಒಟ್ಟಾಗಿ ಓದೋಣ, ಅರಿವಿನ ಬೆಳಕಿನಲ್ಲಿ ನಮ್ಮೊಳಗಿನ ನೋವನ್ನು ಹಗುರ ಮಾಡಿಕೊಳ್ಳೋಣ.
“ಪ್ರಿಯ ವಿದ್ಯಾರ್ಥಿಗಳೇ, ಇಂದು ನಾವು ಒಂದು ಗಂಭೀರವಾದ ಆದರೆ ಪ್ರತಿಯೊಬ್ಬರ ಜೀವನಕ್ಕೂ ಅತ್ಯಂತ ಹತ್ತಿರವಿರುವ ವಿಷಯದ ಬಗ್ಗೆ ಮಾತನಾಡೋಣ. ನಮ್ಮ ಬದುಕಿನ ಹಾದಿಯಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದುಹೋಗುತ್ತವೆ.ಆಗ್ ನಾವು ನಮಗೆ ನಾವೇ ಕೊರಗುತ್ತಾ, ಅಪರಾಧಿ ಪ್ರಜ್ಞೆಯಲ್ಲಿ (Guilt) ದಿನ ಕಳೆಯುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಆದರೆ ನಿಜಕ್ಕೂ ಆ ಘಟನೆಗೆ ಕಾರಣರಾದವರು ನಾವೇನಾ? ಅಥವಾ ಇದರ ಹಿಂದೆ ಬೇರೆ ಯಾವುದೋ ಶಕ್ತಿ ಇದೆಯಾ?
ಈ ಪ್ರಶ್ನೆಗೆ ಉತ್ತರ ಹುಡುಕಲು ನಾವಿಂದು ರಾಮಾಯಣದ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳೋಣ.ಅದಕ್ಕೂ ಮೊದಲು ಹೇಳಿ,,
ರಾಮ-ಲಕ್ಷ್ಮಣರು 14 ವರ್ಷ ವನವಾಸಕ್ಕೆ ಹೋಗಲು ಕಾರಣ ಯಾರು ಹಾಗೂ ಕಳಿಸಿದವರು ಯಾರು?
(ಈ ಪ್ರಶ್ನೆಯನ್ನು ಕೇಳಿದಾಗ, ಮಕ್ಕಳಿಂದ ತಕ್ಷಣ ಉತ್ತರ ಬರುತ್ತದೆ…)
ಒಬ್ಬ ವಿದ್ಯಾರ್ಥಿ ಎದ್ದು: “ಕೈಕೇಯಿ ಸರ್!” ಎನ್ನುತ್ತಾನೆ.
ಮತ್ತೊಬ್ಬ ಹುಡುಗಿ: “ಮಂಥರೆ ದಾಸಿ ಸರ್!” ಎನ್ನುತ್ತಾಳೆ.
ಆಗ್ ‘ನವೀನ್ ಮಾಸ್ಟರ್’ ಹೇಳುತ್ತಾರೆ,,
“ಇಲ್ಲ ಮಕ್ಕಳೇ, ನಿಮ್ಮ ಉತ್ತರ ತಪ್ಪು! ಅವರನ್ನು ವನವಾಸಕ್ಕೆ ಕಳಿಸಿದ್ದು ಕೈಕೇಯಿಯಲ್ಲ, ಹಾಗೆ ಹೋಗಲು ಅಸಲಿ ಕಾರಣ ದಶರಥ ಮಹಾರಾಜರ ಪೂರ್ವಜನ್ಮದ ಅಥವಾ ಅಂದಿನ ಶಾಪ!”
ಆಗ ಆ ವಿದ್ಯಾರ್ಥಿನಿ ಆಶ್ಚರ್ಯದಿಂದ ಕೇಳುತ್ತಾಳೆ: “ಅದೇನು ಸರ್?”
ಹೇಳ್ತಿನಿ ಮಕ್ಕಳೇ,,, ಕೇಳಿ
ಸಾಮಾನ್ಯವಾಗಿ ಈ ಪ್ರಶ್ನೆ ಯಾರನ್ನು ಕೇಳಿದರೂ, ‘ಕೈಕೇಯಿ’ ಅಥವಾ ‘ಮಂಥರೆ ದಾಸಿ’ ಅಂತ ತಕ್ಷಣ ಉತ್ತರಿಸುತ್ತಾರೆ. ಆದರೆ ನಿಮ್ಮಲ್ಲಿ ಯಾರಾದರೂ ಯೋಚಿಸಿದ್ದೀರಾ, ರಾಮನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕೈಕೇಯಿ ಹಾಗೆ ಮಾಡುವುದಕ್ಕೆ ಕಾರಣವೇನು?
ಇದರ ಮೂಲ ಬೇರು ಇರುವುದು ಅಯೋಧ್ಯೆಯ ರಾಜ ದಶರಥನ ಕರ್ಮಫಲದಲ್ಲಿ. ಒಮ್ಮೆ ದಶರಥ ಮಹಾರಾಜ ಯುದ್ಧದಲ್ಲಿ ಕೈಕೇಯಿಯ ಸಹಾಯ ಪಡೆದು ಜಯಗಳಿಸಿದಾಗ, ಸಂತೋಷದಿಂದ ಎರಡು ವರಗಳನ್ನು ಕೊಡುವುದಾಗಿ ಮಾತುಕೊಟ್ಟಿರುತ್ತಾನೆ. ಮುಂದೆ ಒಂದು ದಿನ ರಾಜ ಕಾಡಿಗೆ ಬೇಟೆಗೆ ಹೋದಾಗ, ಶಬ್ದವೇಧಿ ಬಾಣ ಬಿಟ್ಟು ಜಿಂಕೆ ಎಂದು ಭ್ರಮಿಸಿ ಬಾಣ ಬಿಡುತ್ತಾನೆ. ಆದರೆ ಅಲ್ಲಿ ಬಾಣ ತಗುಲಿ ಪ್ರಾಣಬಿಟ್ಟಿದ್ದು ಮಾತ್ರ ಜಿಂಕೆಯಲ್ಲ ಬದಲಾಗಿ ಶ್ರವಣ ಕುಮಾರ..ಅಲ್ಲಿ ದಶರಥ ಮಹಾರಾಜ ಬಂದು ತನ್ನ ತಪ್ಪಿನಿಂದ ನಿಮ್ಮ ಮಗ ಮೃತಪಟ್ಟ ಅಂತ ಹೇಳಿದಾಗ,, ಆ ಕಣ್ಣುಗಳು ಕಾಣದ ವೃದ್ಧ ತಂದೆ-ತಾಯಿ ತಮ್ಮ ಪುತ್ರ ವಿಯೋಗದ ನೋವಿನಲ್ಲಿ ದಶರಥನಿಗೆ ಶಾಪ ಕೊಡುತ್ತಾರೆ—ದಶರಥ ನಮ್ಮ ಮೃತ್ಯು ಹೇಗೆ ಪುತ್ರವಿಯೋಗದಲ್ಲಿ ಆಗುತ್ತೋ ‘ನೀನು ಕೂಡ ಹೀಗೆಯೇ ಪುತ್ರ ವಿಯೋಗದಿಂದ ನರಳಿ ಸಾಯುತ್ತೀಯ’ ಎಂದು.
ಇಲ್ಲಿ ಯೋಚಿಸಿ ನೋಡಿ! ಶಾಪದ ಪ್ರಕಾರ ದಶರಥನ ಮೃತ್ಯು ಪುತ್ರ ವಿಯೋಗದಿಂದಲೇ ಆಗಬೇಕು. ಹಾಗಿದ್ದಮೇಲೆ ಆ ಶಾಪ ತನ್ನ ಕೆಲಸ ಮಾಡಬೇಕಲ್ಲವೇ? ದಶರಥನ ಮಕ್ಕಳನ್ನು ಅವರಿಂದ ದೂರ ಮಾಡಬೇಕಿತ್ತು. ಅದಕ್ಕಾಗಿ ವಿಧಿ ಅಥವಾ ಕರ್ಮಫಲ ಮಂಥರೆ ದಾಸಿಯ ಬುದ್ಧಿಯನ್ನು ಕೆಡಿಸಿತು; ರಾಮನನ್ನು ತನ್ನ ಮಗನಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಕೈಕೇಯಿಯ ಮನಸ್ಸಿನಲ್ಲಿ ಮೋಹದ ಬೀಜ ಬಿತ್ತಿತು. ಕೈಕೇಯಿ ಮಗ ಭರತನಿಗೆ ರಾಜ್ಯಾಭಿಷೇಕ ಮತ್ತು ರಾಮನಿಗೆ ವನವಾಸ ಕೇಳುವಂತೆ ಮಾಡಿತು. ದಶರಥ ಸಾಯಬೇಕೆಂದರೆ, ಅವನ ಮಕ್ಕಳು ದೂರ ಹೋಗಲೇಬೇಕಲ್ಲವೇ? ಹಾಗಾದರೆ ಈಗ ಹೇಳಿ, ಇದಕ್ಕೆ ಅಸಲಿ ಕಾರಣ ಯಾರು? ಕೈಕೇಯಿಯೇ ಅಥವಾ ದಶರಥನ ಕರ್ಮಫಲವೇ? ಮಕ್ಕಳು ಬಹಳ ಖಚಿತವಾಗಿ ಹೇಳುತ್ತಾರೆ— ‘ಇದು ದಶರಥನ ಕರ್ಮಫಲ’ ಅಂತ!
ಮಕ್ಕಳೇ, ರಾಮಾಯಣದ ಈ ಕಥೆ ಕೇವಲ ಪುರಾಣವಲ್ಲ; ಇದು ನಮ್ಮ ಜೀವನದ ಸತ್ಯವೂ ಹೌದು.
ಮಕ್ಕಳೇ : ಕೆಲವು ತಿಂಗಳುಗಳ ಹಿಂದೆ ಪಿಯುಸಿ (PUC) ರಿಸಲ್ಟ್ ಬರುತ್ತದೆ. ಒಬ್ಬ ಹುಡುಗ ರಾಜ್ಯದಲ್ಲೇ ಟಾಪ್ ಬರ್ತಾನೆ. ತಂದೆಗೆ ತುಂಬಾ ಖುಷಿಯಾಗಿ, ‘ಮಗನೇ, ನಡಿ ಒಂದು ಅದ್ಭುತ ಸ್ಥಳಕ್ಕೆ ಪ್ರವಾಸ ಹೋಗೋಣ’ ಅಂತ ಹೇಳಿ ಕರೆದುಕೊಂಡು ಹೋಗ್ತಾರೆ. ಆದರೆ ಅಲ್ಲಿ ಉಗ್ರರು ದಾಳಿ ನಡೆಸಿ, ಆ ಮಗನ ಕಣ್ಣೆದುರೇ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ತಂದೆಯನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಆ ಹುಡುಗ ಇವತ್ತಿಗೂ ಕೊರಗುತ್ತಿರಬಹುದು— ‘ಯಾಕಾದರೂ ನಾನು ಟಾಪ್ ಬಂದೆನೋ, ನಾನು ಟಾಪ್ ಬರ್ದೇ ಇದ್ದಿದ್ರೆ ನಾವು ಟೂರ್ ಹೋಗ್ತಾ ಇರ್ಲಿಲ್ಲ, ನನ್ನಪ್ಪ ಇವತ್ತು ನನ್ನ ಜೊತೆ ಇರ್ತಿದ್ರು’ ಅಂತ ತನ್ನನ್ನು ತಾನೇ ಪ್ರತಿದಿನ ಶಿಕ್ಷಸುತ್ತ ಒದ್ದಾಡುತ್ತಿರಬಹುದು.
ಮತ್ತೊಂದು ಕಡೆಗೆ : ಬಹಳ ದಿನಗಳು ಆದಮೇಲೆ ಮನೆಗೆ ಅಕ್ಕ ಬಂದಿದ್ದಾಳೆ. ಸಂಜೆ ‘ಅಕ್ಕನಿಗೆ ಇಷ್ಟವಾಗುವ’ ಐಸ್ ಕ್ರೀಮ್ ತರೋನಾ ಅಂತ ತಮ್ಮ ಬೈಕ್ ತೆಗೆದುಕೊಂಡು ಹೊರಡುತ್ತಾನೆ. ದಾರಿಯಲ್ಲಿ ಆಕ್ಸಿಡೆಂಟ್ ಆಗಿ ಅವನ ಕಾಲು ಗಂಭೀರವಾಗಿ ಹಾನಿಯಾಗುತ್ತದೆ. ಆ ಅಕ್ಕ ಕೂಡ ಈಗ ಕಣ್ಣೀರಿಡುತ್ತಿರಬಹುದು— ‘ನಾನು ತವರುಮನೆಗೆ ಬರದೇ ಇದ್ದಿದ್ದರೆ ನನ್ನ ತಮ್ಮನಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ’ ಎಂದು ತನ್ನನ್ನೇ ಅಪರಾಧಿ ಎಂದುಕೊಳ್ಳುತ್ತಿರಬಹುದು.
ಆದರೆ ವಿದ್ಯಾರ್ಥಿಗಳೇ, ಯೋಚಿಸಿ ನೋಡಿ! ಆ ಹುಡುಗನಾ ತಂದೆ ಕರ್ನಾಟಕದಿಂದ ಕಾಶ್ಮೀರಕ್ಕೋ ಅಥವಾ ಎಲ್ಲೋ ಪ್ರವಾಸಕ್ಕೆ ಹೋಗಿ ಉಗ್ರನ ಕೈಯಲ್ಲಿ ಸಾಯಲು ಕಾರಣವೇನು? ವಿಧಿ ತನ್ನ ಆಟವನ್ನು ಮುಗಿಸಲು ಆ ಮಗನ ಯಶಸ್ಸನ್ನು ಒಂದು ನಿಮಿತ್ತವನ್ನಾಗಿ ಮಾಡಿಕೊಂಡು ಆ ಜಾಗಕ್ಕೆ ಕರೆದೊಯ್ದಿತ್ತು ಅಷ್ಟೇ. ಆ ಅಕ್ಕ ತವರುಮನೆಗೆ ಬಂದದ್ದು ಸಹಜ, ಆದರೆ ವಿಧಿ ಅವಳ ಮುಖಾಂತರ ತಮ್ಮನನ್ನು ಆಚೆ ಕಳುಹಿಸುವ ಒಂದು ದಾರಿಯನ್ನು ಮಾಡಿಕೊಟ್ಟಿತ್ತು.
ಅಸೆಂಬ್ಲಿಯಲ್ಲಿ ಮಕ್ಕಳಿಗಾಗಿ ಅಂತಿಮ ಸಂದೇಶ:
ಹೀಗಾಗಿ ಮಕ್ಕಳೇ, ನಮ್ಮ ಬದುಕಿನಲ್ಲಿಯೂ ಏನೇನೋ ಅನಾಹುತಗಳು, ಅನಿರೀಕ್ಷಿತ ತಿರುವುಗಳು ನಡೆದಿರಬಹುದು. ಅದಕ್ಕೆ ನಾವೇ ನೇರ ಕಾರಣ, ನಾವೇ ತಪ್ಪು ಮಾಡಿದೆವು ಎಂದು ಅಂದುಕೊಂಡು ನಮ್ಮನ್ನು ನಾವೇ ಶಪಿಸಿಕೊಳ್ಳಬಾರದು, ಅಪರಾಧಿ ಪಟ್ಟ ಕಟ್ಟಿಕೊಳ್ಳಬಾರದು.
ಯಾರಿಗೆ ಗೊತ್ತು, ಆ ಘಟನೆಗಳ ಹಿಂದೆ ಯಾವ ವಿಧಿ ಲಿಖಿತವಿತ್ತೋ, ಯಾವ ಕರ್ಮಫಲವಿತ್ತೋ? ವಿಧಿ ತನ್ನ ಕಾರ್ಯವನ್ನು ಪೂರ್ಣಗೊಳಿಸಲು ಆ ಮನೆಯ ಯಾವ ಸದಸ್ಯರನ್ನಾದರೂ ಒಂದು ನಿಮಿತ್ತವನ್ನಾಗಿ (ಪಾತ್ರವನ್ನಾಗಿ) ಬಳಸಿಕೊಳ್ಳಬಹುದು. ನಡೆದ ಘಟನೆಗಳನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ, ಗತಕಾಲದ ಆ ಅನಾಹುತಗಳ ಹೊಣೆಯನ್ನು ನಮ್ಮ ತಲೆಗೆ ಹೊತ್ತುಕೊಂಡು ಒಳಗೋಳಗೇ ನರಳುವುದನ್ನು ಇಂದೇ ಬಿಟ್ಟುಬಿಡಿ.
ಆಗಿರೋದರಲ್ಲಿ ನಿಮ್ಮ ತಪ್ಪಿಲ್ಲದಿರಬಹುದು; ಅದು ವಿಧಿಯ ಲಿಖಿತವಿರಬಹುದು. ಇಂದಿನಿಂದ ಆ ಅಪರಾಧಿ ಪ್ರಜ್ಞೆಯ ಸೆರೆಯಿಂದ ಹೊರಬನ್ನಿ. ಹಳೆಯ ನೋವುಗಳನ್ನು ಮರೆತು, ಮುಕ್ತವಾಗಿ, ನೆಮ್ಮದಿಯಿಂದ ವರ್ತಮಾನದಲ್ಲಿ ಬದುಕುವುದನ್ನು ಕಲಿಯೋಣ.
“”ವಿಧಿಯ ಈ ಆಟದಲ್ಲಿ ನಾವೆಲ್ಲರೂ ಒಂದು ಪಾತ್ರವಷ್ಟೇ ಹೊರತು, ಆ ಇಡೀ ದುರಂತದ ಸೃಷ್ಟಿಕರ್ತರಲ್ಲ””
ಲೇಖನದ ಕುರಿತು ನಿಮ್ಮ ಅನುಭವ ಓದಲು ಕಾಯುತ್ತಿದ್ದೇನೆ… ಬೇಗ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನುಭವ ಹಂಚಿಕೊಳ್ಳಿ…ಪ್ರೋತ್ಸಾಹಿಸಿ.
