ಅಜೆಕಾರು,ಪದ್ಮನಗರ: ದೇಶಸುಧಾ ನಾಲ್ಕನೇ ಮಾಲಿಕೆ: ಭಾರತದ ವಿಘ್ನ ಕಳೆದ ವಿನಾಯಕ – ವಿನಾಯಕ ದಾಮೋದರ ಸಾವರ್ಕರ್

ಅಜೆಕಾರು ಜ್ಞಾನಸುಧಾ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದ್ಮನಗರದಲ್ಲಿ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರ “ದೇಶಪ್ರೇಮಿಗೆ ಉಸಿರಿಗಿಂತ ದೇಶ ದೊಡ್ಡದು” ಎಂಬ ದೇಶಭಕ್ತಿಯ ಚಿಂತನೆಯೊಂದಿಗೆ ರೂಪುಗೊಂಡಿರುವ ಈ‘ದೇಶಸುಧಾ’ ಕಾರ್ಯಕ್ರಮದ ನಾಲ್ಕನೇ ಮಾಲಿಕೆ “ಭಾರತದ ವಿಘ್ನ ಕಳೆದ ವಿನಾಯಕ – ವಿನಾಯಕ ದಾಮೋದರ ಸಾವರ್ಕರ್” ಎಂಬ ವಿಷಯದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಕಾಶ್ ಮಲ್ಪೆ ಅವರು ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ, ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಗಳ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಉಪನ್ಯಾಸ ನೀಡಿದರು. ಸಾವರ್ಕರ್ ಅವರ ಅಚಲ ದೇಶನಿಷ್ಠೆ, ಧೈರ್ಯ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರು ಕೈಗೊಂಡ ಹೋರಾಟದ ವಿವಿಧ ಆಯಾಮಗಳನ್ನು ಪರಿಚಯಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಜೀವನದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದು, ದೇಶದ ಬಗ್ಗೆ ಗೌರವ, ಕರ್ತವ್ಯಪ್ರಜ್ಞೆ ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಉಪನ್ಯಾಸಕರು ನೀಡಿದರು.

ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು , ಟ್ರಸ್ಟಿಯವರು ,ಶ್ರೀ ಮಹಾಗಣಪತಿ ದೇವಸ್ಥಾನ ಪದ್ಮನಗರ ಅಜೆಕಾರು ಇಲ್ಲಿನ ನಿರ್ದೇಶಕ ಸದಸ್ಯರು,ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯವರು, ಉಪಸ್ಥಿತರಿದ್ದರು.

ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ದೇಶಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು. ಶಿಕ್ಷಕಿ ಸುಲತಾ ಹೆಗ್ಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ‘ದೇಶಸುಧಾ’ ನಾಲ್ಕನೇ ಮಾಲಿಕೆಯು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರಾಭಿಮಾನದ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

Leave a Reply

Your email address will not be published. Required fields are marked *