ಮೂರು ಗಂಟೆಗಳಲ್ಲಿ ಬದಲಾಯ್ತು ಚಿತ್ರಣ: ಕಸದ ಕೊಂಪೆಯಾಗಿದ್ದ ಎರಡು ಬಸ್ ನಿಲ್ದಾಣಗಳಿಗೆ “ಮೀಡಿಯಾ ಮನಸು”ಗಳಿಂದ ಸಿಕ್ಕಿತು ಮರುಜೀವ!

ಸುರತ್ಕಲ್: ನಿತ್ಯ ನೂರಾರು ಪ್ರಯಾಣಿಕರು ಬಂದು ಹೋಗುವ ಬಸ್ ನಿಲ್ದಾಣ. ಅತ್ತ ದಿನದ ಹಿಂದಷ್ಟೇ ನಗರಪಾಲಿಕೆ ಸ್ವಚ್ಛತಾ ಕಾರ್ಮಿಕರು ಸುತ್ತಲೂ ಬೆಳೆದಿದ್ದ ಹುಲ್ಲನ್ನೇನೋ ಕತ್ತರಿಸಿ ತಮ್ಮ ಜವಾಬ್ದಾರಿ ಮುಗಿಸಿದ್ದರು. ಆದರೆ, ಬಸ್ಸಿಗಾಗಿ ಕಾಯುವ ಸಾರ್ವಜನಿಕರು ನಿಲ್ದಾಣದೊಳಗೆ ಕಾಲಿಟ್ಟರೆ ಒಂದೆರಡು ನಿಮಿಷ ಕುಳಿತುಕೊಳ್ಳಲೂ ಸಾಧ್ಯವಾಗದಷ್ಟು ಅಸಹ್ಯಕರ ವಾತಾವರಣ ಅಲ್ಲಿಸಿತ್ತು. ಇಂತಹ ಸ್ಥಿತಿಯನ್ನು ಕಂಡು ಸುಮ್ಮನೆ ಮುಖ ತಿರುಗಿಸಿ ಹೋಗದೆ, ಜವಾಬ್ದಾರಿಯುತ ನಾಗರಿಕನೊಬ್ಬ ಈ ಸಮಸ್ಯೆಯನ್ನು ‘ಮೀಡಿಯಾ ಮನಸುಗಳು’ ತಂಡದ ಗಮನಕ್ಕೆ ತಂದರು. ಅಲ್ಲಿಂದ ಶುರುವಾಗಿದ್ದೇ ನೋಡಿ ನಿಜವಾದ ಬದಲಾವಣೆಯ ಪರ್ವ.

ಶನಿವಾರದ ಮುಂಜಾನೆ 6:30ರ ಸಮಯ. ಸುತ್ತಲಿನ ಪರಿಸರ ಇನ್ನೂ ಪೂರ್ತಿ ಎಚ್ಚರಗೊಳ್ಳುವಷ್ಟರಲ್ಲೇ ಕೈಯಲ್ಲಿ ಪೊರಕೆ, ನೀರು ಮತ್ತು ಸ್ವಚ್ಛತಾ ಸಾಮಗ್ರಿಗಳೊಂದಿಗೆ ರಂಗಕ್ಕಿಳಿದಿದ್ದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ‘ಮೀಡಿಯಾ ಮನಸುಗಳು’ ತಂಡ. ಯಾವುದೇ ಹಮ್ಮು- ಬಿಮ್ಮಿಲ್ಲದೆ ನಿರಂತರ ಮೂರು ಗಂಟೆಗಳ ಕಾಲ ಬೆವರು ಹರಿಸಿ ಶ್ರಮದಾನ ಮಾಡಿದ ತಂಡ, ಕುಳಾಯಿ ಹೊನ್ನಕಟ್ಟೆ ಮತ್ತು ಹೊಸಬೆಟ್ಟು ಬಸ್ ನಿಲ್ದಾಣಗಳ ಮುಖಪುಟವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು! ಎರಡು ಬಸ್ ನಿಲ್ದಾಣಗಳಲ್ಲಿ ಸಂಗ್ರಹವಾದ ಮೂಟೆಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ಗುಟ್ಕಾ ಪ್ಯಾಕೆಟ್, ಬಾಟಲಿಗಳನ್ನು ಮನಪಾ ವಾಹನದಲ್ಲಿ ಸಾಗಿಸಲಾಯಿತು.

ಸುದ್ದಿ ವರದಿ ಮಾಡುವುದಕ್ಕಷ್ಟೇ ತಮ್ಮ ಜವಾಬ್ದಾರಿ ಸೀಮಿತವಲ್ಲ, ಸಾಮಾಜಿಕ ಕಾಳಜಿಯಲ್ಲೂ ತಾವು ಮುಂಚೂಣಿಯಲ್ಲಿರುತ್ತೇವೆ ಎಂಬುದನ್ನು ಪತ್ರಕರ್ತರ ಪಡೆಯು ಈ ಮೂಲಕ ಮತ್ತೆ ಸಾಬೀತುಪಡಿಸಿದೆ. ಈ ಮಾದರಿ ಕಾರ್ಯಕ್ಕೆ ಸಂತೋಷ್ ಹೊಸಬೆಟ್ಟು ಹಾಗೂ ಹೊನ್ನಕಟ್ಟೆ ಅಭಿನಂದನ್ ಹೋಟೆಲ್‌ ನವೀನ್ ದೇವಾಡಿಗ ಅವರು ಸಾಥ್ ನೀಡುವ ಮೂಲಕ ಸಾರ್ವಜನಿಕ ಸಹಭಾಗಿತ್ವಕ್ಕೆ ಅತ್ಯುತ್ತಮ ನಿದರ್ಶನವಾದರು.
ಈ ಪ್ರಶಂಸನೀಯ ಅಭಿಯಾನದಲ್ಲಿ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಗಿರೀಶ್ ಮಣೇಲ್, ರಾಕೇಶ್ ಎಕ್ಕಾರ್ ಹಾಗೂ ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು.
ಕೇವಲ ಭಾಷಣ, ಟೀಕೆಗಳಿಗೆ ಸೀಮಿತವಾಗದೆ ಕ್ರಿಯಾಶೀಲವಾಗಿ ರಂಗಕ್ಕಿಳಿದು ಸಾರ್ವಜನಿಕ ಆಸ್ತಿಯನ್ನು ಸ್ವಚ್ಛಗೊಳಿಸಿದ “ಮಾಧ್ಯಮ ಮನಸ್ಸುಗಳ” ಸಮಾಜಮುಖಿ ಕಳಕಳಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *