ಕವಿತೆ — ಶಾಸ್ತ್ರಿಜೀ : ಸರಳತೆಯ ಶಿಖರ – ದೇಶ ಪ್ರೇಮದ ಅಕ್ಷರ

– ✍️ ಚಿಮಕ
ಚಿದಾನಂದ ಮಲ್ಲಿಕಾರ್ಜುನ ಕಲ್ಯಾಣಿ

ಮೂರ್ತಿ ಚಿಕ್ಕದಾದರೂ ಕೀರ್ತಿ ಆಕಾಶದಷ್ಟು,
ಬಡತನವಿದ್ದರೂ ಪ್ರಾಮಾಣಿಕತೆ ಸಾಗರದಷ್ಟು;
ಸರಳ ಬದುಕಾದರೂ ಆದರ್ಶ ಹಿಮಾಲಯದಷ್ಟು,
ಲಾಲ್ ಬಹದ್ದೂರ್ ಶಾಸ್ತ್ರಿಜೀ ಎಂದರೆ ಸ್ಫೂರ್ತಿ ಅನಂತದಷ್ಟು! || ೧ ||

ಮುಗಲ್ಸರಾಯಿಯ ಮಣ್ಣಿನಲಿ ಜನಿಸಿದ ಬಾಲಕನು,
ಬಾಲ್ಯದಲ್ಲೇ ಕಳೆದುಕೊಂಡರು ತಂದೆಯ ನೆರಳನು;
ಬರಿಗಾಲಲಿ ಬಿಸಿಲು ದಾಟಿ ಗಂಗೆಯನು ಈಜಿ ನಡೆದು,
ಸ್ವಾಭಿಮಾನದ ಬದುಕಿನಲಿ ಮುನ್ನಡೆದ ಮಹನೀಯನು! || ೨ ||

ಯೌವನದಲಿ ದೇಶದ ಕರೆಗೆ ಓಗೊಟ್ಟು,
ತನ್ನ ವಿದ್ಯೆಯ ಹಾದಿಯನು ದೇಶಸೇವೆಗೆ ತಿರುಗಿಸಿ;
ಸ್ವಾತಂತ್ರ್ಯದ ಹೋರಾಟದಲಿ ಧೀರನಾಗಿ ಮುನ್ನುಗ್ಗಿ,
ಭಾರತಮಾತೆಯ ಮುಕ್ತಿಗಾಗಿ ಬದುಕನ್ನೇ ಮುಡಿಪಾಗಿಟ್ಟರು! || ೩ ||

ಕಾಶಿ ವಿದ್ಯಾಪೀಠದ ಜ್ಞಾನದ ದೀಪವನು ಪಡೆದು,
‘ಶಾಸ್ತ್ರಿ’ ಎಂಬ ಗೌರವದ ಪದವಿಯನು ಮುಡಿದು;
ಪದವಿಗಿಂತ ದೇಶಸೇವೆಯೇ ಶ್ರೇಷ್ಠವೆಂದು ಸಾರಿದರು,
ಸರಳತೆಯ ಬದುಕಿನಲಿ ಆದರ್ಶವನು ತೋರಿದರು! ||೪||

ರೈಲ್ವೆ ಸಚಿವರಾಗಿದ್ದಾಗ ಕರ್ತವ್ಯವನು ಮೆರೆದರು,
ದುರಂತದ ನೋವಿಗೆ ನೈತಿಕ ಹೊಣೆ ಹೊತ್ತರು;
ಹುದ್ದೆಗಿಂತ ನೀತಿಯೇ ಎತ್ತರವೆಂದು ಸಾರುತ್ತಾ,
ರಾಜೀನಾಮೆಯ ಮೂಲಕ ನಿಷ್ಠೆಯ ದಾರಿ ತೋರಿದರು! || ೫ ||

ದೇಶದ ಪ್ರಧಾನಿಯಾಗಿ ಹೊಣೆಗಾರಿಕೆ ಹೊತ್ತಾಗ,
ಯುದ್ಧದ ಬಿಸಿಯ ಜೊತೆಗೆ ಅನ್ನದ ಸಂಕಷ್ಟ ಎದುರಾದಾಗ;
ತಮ್ಮ ಬದುಕಿನಲ್ಲೇ ತ್ಯಾಗದ ಮಾದರಿ ತೋರಿಸಿ,
‘ಜೈ ಜವಾನ್ — ಜೈ ಕಿಸಾನ್’ ಮಂತ್ರವನು ಮೊಳಗಿಸಿದರು! || ೬ ||

ತಾಷ್ಕೆಂಟ್ ನೆಲದಲಿ ಶಾಂತಿಯ ಮಾತುಕತೆ ನಡೆಸಿ,
ದೇಶದ ಹಿತಕ್ಕಾಗಿ ಒಪ್ಪಂದದ ಹಾದಿಯನು ಹಿಡಿದು;
ಹಠಾತ್ ಮರಣದ ಸುದ್ದಿ ಭಾರತವನು ದುಃಖದಲಿ ಮುಳುಗಿಸಿತು,
ಅವರ ಅಮರ ಸೇವೆಗೆ ಇತಿಹಾಸವೇ ಶಿರಬಾಗಿ ನಿಂತಿತು! || ೭ ||

ಮರಣದ ಬಳಿಕವೂ ಗೌರವ ಅವರ ಬಾಗಿಲಿಗೆ ಬಂತು,
ಭಾರತ ರತ್ನವಾಗಿ ಅವರ ಕೀರ್ತಿ ಮತ್ತಷ್ಟು ಹೊಳೆಯಿತು;
ಕೀರ್ತಿಗಾಗಿ ಬದುಕಲಿಲ್ಲ—ದೇಶಕ್ಕಾಗಿ ಬದುಕಿದರು,
ಪದವಿಗಾಗಿ ನಿಲ್ಲಲಿಲ್ಲ—ಸತ್ಯಕ್ಕಾಗಿ ನಿಂತರು! || ೮ ||

ಅವರ ಬದುಕು ಹೇಳುವುದು — ಮಕ್ಕಳೇ ಕೇಳಿರಿ,
ಕಷ್ಟ ಬಂದರೂ ಸತ್ಯದ ದಾರಿಯಲಿ ನಡೆಯಿರಿ;
ಹುದ್ದೆ ಬಂದರೂ ವಿನಯವನು ಎಂದಿಗೂ ಕೈಬಿಡದಿರಿ,
ದೇಶದ ಹಿತವೇ ಮೊದಲು ಎಂದು ಎಂದಿಗೂ ಮರೆಯದಿರಿ! || ೯ ||

ಲಾಲ್ ಬಹದ್ದೂರ್ ಶಾಸ್ತ್ರಿಜೀ ಎಂದರೆ ಸತ್ಯದ ನುಡಿ,
ಲಾಲ್ ಬಹದ್ದೂರ್ ಶಾಸ್ತ್ರಿಜೀ ಎಂದರೆ ನೀತಿಯ ನಡೆ;
ಅವರ ಬದುಕಿನ ಬೆಳಕು ಪೀಳಿಗೆಗಳಲಿ ಬೆಳಗಲಿ,
ಭಾರತದ ಮಕ್ಕಳ ಹೃದಯದಲಿ ದೇಶಪ್ರೇಮ ಮೊಳಗಲಿ! || ೧೦ ||

Leave a Reply

Your email address will not be published. Required fields are marked *