ಸಂಸ್ಕೃತಿ ನಮ್ಮ ಗೌರವದ ಪ್ರತೀಕ: ಡಾ. ವೆಂಕಟರಾಮ್ ಭಟ್

ಉಡುಪಿ: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರಅತ್ಯಂತ ಮಹತ್ವದ್ದು. ಇಂದಿನ ಯುವಜನತೆಯೇ ನಾಳಿನ ಸಮಾಜದ ರೂವಾರಿಗಳು. ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರುಹೋಗದೆ, ನಮ್ಮ ಸನಾತನ ಮೌಲ್ಯಗಳಾದ ಹಿರಿಯರಿಗೆ ಗೌರವ ನೀಡುವುದು, ಸಹಿಷ್ಣುತೆ, ಕುಟುಂಬ ವ್ಯವಸ್ಥೆ ಹಾಗೂ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಮನೋಭಾವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ನಮ್ಮ ಸಂಸ್ಕೃತಿಯೇ ನಮ್ಮಗೌರವದ ಪ್ರತೀಕ ಎಂದು ಶಂಕರನಾರಾಯಣ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನಕೇಂದ್ರ ಶಂಕರನಾರಾಯಣ ಇವರ ಸಹಯೋಗದಲ್ಲಿ ಶಂಕರನಾರಾಯಣದ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿ ನಡೆದಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ದೇಶದ ಭವ್ಯಇತಿಹಾಸ, ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಪರಂಪರೆಯನ್ನು ಪರಿಚಯಿಸುವ ಮಾಧ್ಯಮವಾಗಬೇಕು. ಯುವ ಸಮುದಾಯವು ವೈಜ್ಞಾನಿಕ ಮನೋಭಾವದ ಜೊತೆಗೆ ತಮ್ಮ ಸಾಂಸ್ಕೃತಿಕ ಬೇರುಗಳ ಬಗ್ಗೆ ಹೆಮ್ಮೆ ತಳೆದು, ಆಚರಣೆಗಳ ಹಿಂದಿನ ಅರ್ಥಪೂರ್ಣ ತತ್ವಗಳನ್ನು ಅರಿತು ಆಚರಿಸಿದಾಗ ಮಾತ್ರ ಭಾರತೀಯ ಸಂಸ್ಕೃತಿ ಜೀವಂತವಾಗಿ ಹಾಗೂ ನಿರಂತರವಾಗಿ ಮುಂದಿನ ಪೀಳಿಗೆಗೆ ಹರಿದು ಬರಲು ಸಾಧ್ಯ ಎಂದರು.

ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಪ್ಪ ಪೂಜಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯಾ ಎಂ, ಕಾಲೇಜಿನ ಅಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ನಳಿನಾಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಗಂಗಾಧರ ಆರ್‍ ಎಚ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶ್ಯಾಮ್‍ ಜಿ.ಎಸ್ ಪೂಜಾರಿ ಗಂಗೊಳ್ಳಿ ಇವರಿಂದ ಕೊಳಲು ವಾದನ, ಅನಿಲ್ ಬಿರ್ತಿ ಮತ್ತು ತಂಡದಿಂದ ವೀರಗಾಸೆ, ಪ್ರಶಾಂತ್ ಬಿರ್ತಿ ಮತ್ತು ತಂಡದಿಂದ ಕಂಸಾಳೆ, ಚೈತನ್ಯ ಮತ್ತು ತಂಡದಿಂದ ಜಾನಪದ ಸಂಗೀತ, ಸಾವಿತ್ರಿ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ, ಕಾಲೇಜಿನ ಯಕ್ಷಗಾನ ತಂಡದಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *