ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಶಿಕ್ಷಕರು ತೆರೆದುಕೊಳ್ಳಬೇಕು: ವಿವೇಕ್ ಆಳ್ವ

ಮೂಡುಬಿದಿರೆ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದ್ದು, ಶಿಕ್ಷಕರು ಎಐ ತಂತ್ರಜ್ಞಾನದ ಬಳಕೆಯಲ್ಲಿ ಪರಿಣತಿ ಬೆಳೆಸಿಕೊಂಡು, ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಮಾರ್ಗದರ್ಶನ ನೀಡುವ ಸಾಮಥ್ರ್ಯ ಹೊಂದಬೇಕು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು.

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಸಕ್ಷಮ- ಆಳ್ವಾಸ್‍ನ ಮಹಿಳಾ ಘಟಕದ ವತಿಯಿಂದ ‘’ಶಿಕ್ಷಕರಿಗಾಗಿ ಜನರೇಟಿವ್ ಎಐ’’ ವಿಷಯದಲ್ಲಿ ಆಯೋಜಿಸಲಾದ ಒಂದು ದಿನದ ಶಿಕ್ಷಕ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ನಡೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ಕೆಲಸಗಳನ್ನು ನಿರ್ವಹಿಸುವ ಮಾನವ ಸಂಪನ್ಮೂಲವನ್ನು ಸಂಸ್ಥೆಗಳು ನಿರೀಕ್ಷಿಸುತ್ತಿದ್ದು, ಹಲವು ಕಾರ್ಯಗಳನ್ನು ಎಐ ತಂತ್ರಜ್ಞಾನ ನಿರ್ವಹಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ ಹೊಂದಿರುವವರಿಗೆ ಹೆಚ್ಚಿನ ಮಹತ್ವ ದೊರೆಯಲಿದೆ. ಕಾಲಕ್ರಮೇಣ ಕೇವಲ ಅರ್ಹತೆಗಿಂತ ವ್ಯಕ್ತಿಯ ಸಾಮಥ್ರ್ಯ, ಕೌಶಲ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸಾಮಥ್ರ್ಯಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದರು.

ಇಂದಿನ ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ತರಗತಿಗಳು ರೂಪುಗೊಳ್ಳಬೇಕು. ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಬೋಧನಾ ವಿಧಾನಗಳನ್ನು ನವೀಕರಿಸಿಕೊಳ್ಳಬೇಕು. ತಂತ್ರಜ್ಞಾನವನ್ನು ಬಳಸುವುದಷ್ಟೇ ಮುಖ್ಯವಲ್ಲ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೋಧನೆ ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು ಅಗತ್ಯ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯುವ ವೇಗಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರಬೇಕು ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ತನಿಯಾ ಟೆಕ್ನಾಲಜೀಸ್‍ನ ಆಲ್ವಿನ್ ಎಡಿಸನ್ ಮೆಂಡೋನ್ಸಾ, ಕೃತಕ ಬುದ್ಧಿಮತ್ತೆಯ ವಿವಿಧ ವೇದಿಕೆಗಳಲ್ಲಿ ನಿಖರವಾದ, ಉಪಯುಕ್ತ ಹಾಗೂ ಗುಣಮಟ್ಟದ ಉತ್ತರಗಳನ್ನು ಪಡೆಯಲು ಪರಿಣಾಮಕಾರಿ ಸೂಚನೆಗಳನ್ನು ರೂಪಿಸುವ ‘ಆರ್‍ಟಿಸಿಎಫ್’ ಸೂತ್ರವನ್ನು ತಿಳಿಸಿದರು. ಪ್ರಶ್ನೆಗಳನ್ನು ಕೇಳುವಾಗ ನಿರ್ದಿಷ್ಟತೆ ಮತ್ತು ಸ್ಪಷ್ಟತೆ ಇರಬೇಕು. ಈಗಾಗಲೇ ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಬದಲಿಸುವ ಬದಲು, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಿ, ಹೆಚ್ಚುವರಿ ಮಾಹಿತಿ ಮತ್ತು ಸ್ಪಷ್ಟ ನಿರ್ದೇಶನಗಳನ್ನು ಸೇರಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದರು. ಈ ಹಿನ್ನೆಲೆಯಲ್ಲಿ ಚಾಟ್‍ಜಿಪಿಟಿ, ಜೆಮಿನಿ, ಪಪ್ರ್ಲೆಕ್ಸಿಟಿ ಮತ್ತು ಕ್ಲಾಡ್‍ನಂತಹ ಕೃತಕ ಬುದ್ಧಿಮತ್ತೆಯ ಸಾಧನಗಳಲ್ಲಿ ಶಿಕ್ಷಕರು ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಸಂಪನ್ಮೂಲಗಳನ್ನು ಸಿದ್ಧಪಡಿಸುವ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್, ಸಕ್ಷಮ ವೇದಿಕೆಯ ಸಂಚಾಲಕಿ ಡಾ ಗ್ರೀಷ್ಮಾ ವಿವೇಕ್ ಆಳ್ವ, ಕಾರ್ಯಕ್ರಮದ ಸಂಯೋಜಕಿ ಡಾ ಸಾಕ್ಷಿ ಎಸ್ ಕಾಮತ್ ಇದ್ದರು.
ಡಾ. ಅಪೂರ್ವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಡಾ. ಸಾಕ್ಷಿ ಎಸ್ ಕಾಮತ್ ಸ್ವಾಗತಿಸಿ, ಡಾ. ದೀಪಿಕಾ ಕಾಮತ್ ಅತಿಥಿಯನ್ನು ಪರಿಚಯಿಸಿದರು.

Leave a Reply

Your email address will not be published. Required fields are marked *