ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ವಿಭಾಗ, ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರ ಮಂಗಳೂರು (DEIC) ವತಿಯಿಂದ ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರದಲ್ಲಿ ಗುರುವಾರ ವಿಶ್ವ ಶ್ರವಣ ದೋಷ ದಿನಾಚರಣೆ 2026 ಕಾರ್ಯಕ್ರಮವನ್ನು ನಡೆಯಿತು.

ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿ, ಶ್ರವಣ ದೋಷದ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಆರೋಗ್ಯ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ಕಿವಿ, ಮೂಗು ಮತ್ತು ಗಂಟಲು ತಜ್ಞೆ ಡಾ. ರತ್ನಾವತಿ ಅವರು ಶ್ರವಣದ ಮಹತ್ವ ಹಾಗೂ ಶ್ರವಣ ದೋಷಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಮಕ್ಕಳಲ್ಲಿ ಶ್ರವಣದ ಸಮಸ್ಯೆ ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವ ಅಗತ್ಯವನ್ನು ಅವರು ತಿಳಿಸಿದರು.
ಮಕ್ಕಳ ತಜ್ಞಡಾ. ಲಿಫಾಮ್ ಅವರು ಮಕ್ಕಳಲ್ಲಿ ಶ್ರವಣದ ಮಹತ್ವದ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಆರಂಭಿಕ ಶ್ರವಣ ತಪಾಸಣೆ (Early Hearing Screening) ಮಾಡುವುದರಿಂದ ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆರಂಭಿಕವಾಗಿ ಸಮಸ್ಯೆಯನ್ನು ಗುರುತಿಸಿದಲ್ಲಿ ಸೂಕ್ತ ಚಿಕಿತ್ಸೆ, ಶ್ರವಣ ಸಾಧನಗಳು, ವಾಕ್ ಮತ್ತು ಭಾಷೆ ಚಿಕಿತ್ಸೆ ಹಾಗೂ ಇತರ ಅಗತ್ಯ ಪುನರ್ವಸತಿ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬಹುದು ಎಂದು ತಿಳಿಸಿದರು.
ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ. ವಿಶ್ವವಿಜೇತ್ ಅವರುಶ್ರವಣ ದೋಷ ಉಳ್ಳವರ ಮಾನವಹಕ್ಕುಗಳನ್ನು ಘೋಷಿಸುವುದು, ಅಂತರಾಷ್ಟ್ರೀಯ ಶ್ರವಣ ದೋಷ ದಿನಾಚರಣೆ 2026ರ ಧ್ಯೇಯವಾಕ್ಯದೊಂದಿಗೆ ಆಚರಿಸುವ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪುಟ್ಟರಾಜು, ಮೆಟ್ರನ್ ಟ್ರೇಸಿಯಮ್ಮ, ಮೆಟ್ರನ್ ಎಲಿಯಮ್ಮ, ಶ್ರವಣ ತಜ್ಞಹಾಗೂ ವಾಕ್ ಚಿಕಿತ್ಸಕ ಅಮೀಷಾ, ಪೋಷಕರು, ಮಕ್ಕಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿ.ಇ.ಐ.ಸಿ. ಸೈಕಾಲಜಿಸ್ಟ್ ರಶ್ಮಿ ರೈ ಕಾರ್ಯಕ್ರಮ ನಿರೂಪಿಸಿದರು.
