ಕ್ರೈಸ್ಟ್ ಕಿಂಗ್ ಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಾಲಿಬಾಲ್ ಆಟಗಾರ್ತಿಯರ ವಿಜಯೋತ್ಸವ ಮೆರವಣಿಗೆ ಮತ್ತು ಸನ್ಮಾನ ಕಾರ್ಯಕ್ರಮ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 14ರ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮಿಂಚಿದ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾಲಿಬಾಲ್ ಆಟಗಾರ್ತಿಯರನ್ನು ಕಾರ್ಕಳದ ಅನಂತಶಯನದಿಂದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯವರೆಗೆ ಭವ್ಯ ಮೆರವಣಿಗೆಯ ಮೂಲಕ ಕರೆತಂದು ಸ್ವಾಗತಿಸಲಾಯಿತು.

ನಂತರ ಸಂಸ್ಥೆಯ ಸಭಾಂಗಣದಲ್ಲಿ ಆಟಗಾರ್ತಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಾಲಿಬಾಲ್ ತಂಡದ ಆಟಗಾರ್ತಿಯರಾದ ಏಳನೇ ತರಗತಿಯ ತ್ರಿಷ್ಮ, ಸೃಷ್ಟಿ ಎಸ್ ಪೂಜಾರಿ, ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸ ರುಬೇಲ್ ಡಿಸೋಜ, ಪ್ರನ್ವಿ ಎಸ್ ದೇವಾಡಿಗ ಹಾಗೂ ಆರನೇ ತರಗತಿಯ ನಿಶಾ ಡಿಸೋಜ ಮತ್ತು ಅಲಿಶಾ ಡಿಸೋಜ ಅವರಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಕಳದ ಸಹಾಯಕ ಪೋಲಿಸ್ ಅಧೀಕ್ಷಕರಾದ ಐಪಿಎಸ್ ಅಧಿಕಾರಿ ಇಶಿತಾ ಗುಪ್ತ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಸಮರ್ಥವಾಗಿ ಉಪಯೋಗಿಸಿ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಇಂದು ಸಾಧನೆ ಮಾಡಿದ ವಾಲಿಬಾಲ್ ಆಟಗಾರ್ತಿಯರು ಸಾಧನೆಯ ಹಾದಿಯಲ್ಲಿ ಕ್ರಮಿಸಲು ಎಲ್ಲರಿಗೂ ಸ್ಪೂರ್ತಿ” ಎಂದು ಹೇಳಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಅತಿಥಿಗಳಾಗಿದ್ದ ಕಾರ್ಕಳ ಪುರಸಭೆಯ ಸದಸ್ಯರಾದ ಶುಭದ್‍ರಾವ್‍ರವರು ಮಾತನಾಡಿ “ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ತರಬೇತುದಾರರ ನಿರಂತರ ಶ್ರಮ ಈ ಸಾಧನೆಗೆ ಕಾರಣ, ಕಾರ್ಕಳದ ಕೀರ್ತಿ ಬೆಳಗಿದ ಈ ಸಾಧಕರು ನಮಗೆಲ್ಲ ಸ್ಪೂರ್ತಿ” ಎಂದು ಹೇಳಿದರು. ಇನ್ನೋರ್ವ ಅತಿಥಿ ಕಾರ್ಕಳ ಸಾಣೂರು ವಲಯದ ಶಿಕ್ಷಣ ಸಂಯೋಜಕರಾದ, ಜ್ಯೋತಿ ಅವರು ಮಾತನಾಡಿ “ತಮ್ಮ ಅವಿರತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಅದ್ಭುತ ಪ್ರತಿಭೆಯ ಮೂಲಕ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ವಿದ್ಯಾರ್ಥಿಗಳು ನಮಗೆ ಹೆಮ್ಮೆಯ ಮಾದರಿಗಳು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನ ಸದಸ್ಯರಾದ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ವಿದ್ಯಾರ್ಥಿಗಳ ನಿರಂತರ ಶ್ರಮ, ತರಬೇತುದಾರರ ಪ್ರೋತ್ಸಾಹದ ಫಲವಾಗಿ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಮ್ಮ ಹೆಮ್ಮೆಯ ವಿದ್ಯಾರ್ಥಿನಿಯರ ಈ ಸಾಧನೆಯ ಹಿಂದೆ ಅವಿರತ ಶ್ರಮವಿದೆ. ಈ ಸಾಧಕರು ಮುಂದೆ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಚರಿತ್ರಾರ್ಹ ಸಾಧನೆ ಮಾಡಿ ಈ ಮಣ್ಣಿನ ಕೀರ್ತಿಯನ್ನು ದೇಶದಗಲ ಬೆಳಗಲಿ” ಎಂದು ಹೇಳಿದರು. ನಂತರ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಹಾಗೂ ಸಾಧನೆಗೆ ಕಾರಣಿಕರ್ತರಾದ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಪ್ರಕಾಶ್ ನಾಯ್ಕ್ , ಕೃಷ್ಣಪ್ರಸಾದ್ ಮತ್ತು ಕೀರ್ತನ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅವೆಲಿನ್ ಲೂಯಿಸ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಜೆ ಜಾಲಿ ಜೇಕಬ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯೋತ್ಸವ ಮೆರವಣಿಗೆಯಲ್ಲಿ ಸಾಧಕ ವಿದ್ಯಾರ್ಥಿಗಳ ಹೆತ್ತವರು, ಪೋಷಕರು, ಕ್ರೀಡಾಭಿಮಾನಿಗಳು ಭಾಗವಹಿಸಿ ಅಭಿನಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಐ ಕ್ರಿಸ್ಟೋಫರ್ ಕೋಟ್ಯಾನ್‍ರವರು ವಂದಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಶೈಲಿ ಹೆಗ್ಡೆ ನಿರೂಪಿಸಿದರು.

Leave a Reply

Your email address will not be published. Required fields are marked *