ಉಡುಪಿಯಲ್ಲಿ ಗ್ರೀನ್ ಟೈಗರ್ ಮೊಬಿಲಿಟಿಯ ನೂತನ ಇವಿ ರೆಟ್ರೋಫಿಟ್ಟಿಂಗ್ ಕೇಂದ್ರ ಉದ್ಘಾಟನೆ

ಉಡುಪಿ/ಮಂಗಳೂರು: ಪ್ರಸ್ತುತ ಚಾಲ್ತಿಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್-ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವಲ್ಲಿ ನಿರತವಾಗಿರುವ ಭಾರತದ ಪ್ರಮುಖ ಎಲೆಕ್ಟ್ರಿಕ್ ಮೊಬಿಲಿಟಿ ತಂತ್ರಜ್ಞಾನ ಸಂಸ್ಥೆ ಗ್ರೀನ್ ಟೈಗರ್ ಮೊಬಿಲಿಟಿ, ಉಡುಪಿಯಲ್ಲಿ ತನ್ನ ನೂತನ ರೆಟ್ರೋಫಿಟ್ಟಿಂಗ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದೆ.

ಉಡುಪಿಯ ಕೊರಂಗ್ರಪಾಡಿಯ 76 ಬಡಗುಬೆಟ್ಟುವಿನ ಕ್ರಿಸ್ತ ಜ್ಯೋತಿ ಚರ್ಚ್ ಎದುರಿನ ಐಬಿಸಿ ಟೆಕ್ನಾಲಜೀಸ್ ನಲ್ಲಿ (ಮನೆ ನಂ. 5-64-ಡಿ) ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಸನ್ಮಾನ್ಯ ರಿಜ್ವಾನ್ ಅರ್ಷದ್ ಹಾಗೂ ಉಡುಪಿ ಶಾಸಕರಾದ ಸನ್ಮಾನ್ಯ ಯಶ್ ಪಾಲ್ ಆನಂದ್ ಸುವರ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗ್ರೀನ್ ಟೈಗರ್ ಮೊಬಿಲಿಟಿಯು ಸಂಪೂರ್ಣ ಸ್ವದೇಶಿ ಹಾಗೂ ಪೇಟೆಂಟ್ ಪಡೆದ ವಿನೂತನ ಇವಿ ರೆಟ್ರೋಫಿಟ್ ತಂತ್ರಜ್ಞಾನ ಪ್ಲಾಟ್ಫಾರ್ಮ್ ಅನ್ನು ರೂಪಿಸಿದ್ದು, ಇದು ಗ್ರಾಹಕರು ಈಗಾಗಲೇ ಹೊಂದಿರುವ, ನಂಬಿಕಸ್ಥ ಹಾಗೂ ಚಾಲ್ತಿಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಎಲೆಕ್ಟ್ರಿಕ್ ವಾಹನಗಳನ್ನಾಗಿ ಮಾರ್ಪಡಿಸಿಕೊಳ್ಳಲು ನೆರವಾಗಲಿದೆ. ಇದರಿಂದಾಗಿ ಗ್ರಾಹಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಮಿತವ್ಯಯಕಾರಿಯಾಗಿ ಎಲೆಕ್ಟ್ರಿಕ್ ವಾಹನ ಸಂಚಾರಕ್ಕೆ ಬದಲಾಗಲು ಅನುಕೂಲವಾಗುತ್ತದೆ.

ಸಂಸ್ಥೆಯು ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ 2,000ಕ್ಕೂ ಹೆಚ್ಚು ಗ್ರಾಹಕರಿಗೆ ಯಶಸ್ವಿಯಾಗಿ ಸೇವೆ ನೀಡಿದ್ದು, ರೆಟ್ರೋಫಿಟ್-ಆಧಾರಿತ ಎಲೆಕ್ಟ್ರಿಕ್ ವಾಹನಗಳಿಗೆ ಸಾರ್ವಜನಿಕರಲ್ಲಿ ದಿನೇದಿನೆ ಬೇಡಿಕೆ ಹಾಗೂ ಸ್ವೀಕಾರಾರ್ಹತೆ ಹೆಚ್ಚುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಗ್ರೀನ್ ಟೈಗರ್ನ ಈ ಸೇವೆಯು ಎ ಆರ್ ಎಐ ಮತ್ತು ಆರ್ ಟಿ ಓ ನಿಯಮಾವಳಿಗಳ ಅಧಿಕೃತ ಅನುಮೋದನೆ, ಸುಲಭ ಸಾಲ ಸೌಲಭ್ಯ, ವಿಮೆ ಹಾಗೂ ತುರ್ತು ರಸ್ತೆ ಬದಿಯ ನೆರವು (ಆರ್ ಎಸ್ ಎ) ಸೌಲಭ್ಯಗಳನ್ನು ಒಳಗೊಂಡಿದೆ. ಇದರಿಂದಾಗಿ ಗ್ರಾಹಕರಿಗೆ ಇವಿ ಪರಿವರ್ತನೆ ಹೆಚ್ಚು ಸರಳ ಹಾಗೂ ಪ್ರಾಯೋಗಿಕವಾಗಲಿದ್ದು, ಕಡಿಮೆ ವೆಚ್ಚದಲ್ಲಿ ಹಳೆಯ ವಾಹನಗಳ ಕಾರ್ಯಾವಧಿಯನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗಲಿದೆ.

ಉಡುಪಿಯ ಈ ಕೇಂದ್ರವು ಕೇವಲ ಮತ್ತೊಂದು ಇವಿ ಘಟಕದ ಉದ್ಘಾಟನೆಯಷ್ಟೇ ಆಗಿರದೆ, ಈ ಭಾಗದಲ್ಲಿ ವಿಕೇಂದ್ರೀಕೃತ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಸ್ಥೆಯನ್ನು ಬಲಪಡಿಸುವ ಗ್ರೀನ್ ಟೈಗರ್ ಮೊಬಿಲಿಟಿಯ ಮಹತ್ವಾಕಾಂಕ್ಷೆಯ ಭಾಗವಾಗಿದೆ. ಇದು ಪರಿಸರಸ್ನೇಹಿ ಇವಿ ವಾಹನಗಳ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಉದ್ಯಮಶೀಲತೆ, ನವೋದ್ಯಮ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮಹತ್ವದ ಕೊಡುಗೆ ನೀಡಲಿದೆ.

ಇದರೊಂದಿಗೆ, ದಶಕಗಳಿಂದ ಪೆಟ್ರೋಲ್ ವಾಹನಗಳ ರಿಪೇರಿ ಮತ್ತು ಸರ್ವಿಸ್ ಮಾಡುತ್ತಿರುವ ಸಾಂಪ್ರದಾಯಿಕ ಮೆಕ್ಯಾನಿಕ್ಗಳಿಗೆ ನೂತನ ಕೌಶಲ್ಯ ತರಬೇತಿ ನೀಡುವುದು ಸಂಸ್ಥೆಯ ಮತ್ತೊಂದು ಪ್ರಮುಖ ಗುರಿಯಾಗಿದೆ. ತನ್ನ ವಿಸ್ತೃತ ಜಾಲದ ಮೂಲಕ ಈ ಮೆಕ್ಯಾನಿಕ್ ಗಳು ಮತ್ತು ತಂತ್ರಜ್ಞರ ಕೌಶಲ್ಯವನ್ನು ಉನ್ನತೀಕರಿಸಿ, ದೇಶದ ಸ್ಥಳೀಯ ವಾಹನ ಸೇವಾ ವಲಯವನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತದ ಇವಿ ಕ್ರಾಂತಿಯಲ್ಲಿ ಅವರೂ ಸಕ್ರಿಯವಾಗಿ ಭಾಗವಹಿಸಲು ಗ್ರೀನ್ ಟೈಗರ್ ವೇದಿಕೆ ಕಲ್ಪಿಸುತ್ತಿದೆ.

ಉಡುಪಿ ಕೇಂದ್ರದ ಉದ್ಘಾಟನೆ ಕುರಿತು ಮಾತನಾಡಿದ ಗ್ರೀನ್ ಟೈಗರ್ ಮೊಬಿಲಿಟಿಯ ಸಂಸ್ಥಾಪಕ ಹಾಗೂ ಸಿಇಒ ಆಶಿಶ್ ಡೊಕಾನಿಯಾ ಅವರು, “ಭಾರತದ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆ ಪರಿವರ್ತನೆಯು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ದ್ವಿಚಕ್ರ ವಾಹನ ಕ್ಷೇತ್ರದ ಪರಿಸರ ವ್ಯವಸ್ಥೆಯಲ್ಲಿರುವ ಲಕ್ಷಾಂತರ ಜನರಿಗೂ ಪ್ರಯೋಜನ ತರಬೇಕು. ರೆಟ್ರೋಫಿಟ್ಮೆಂಟ್ ವಿಧಾನವು ಇವಿ ಅಳವಡಿಕೆಯನ್ನು ಮಿತವ್ಯಯಕಾರಿಯಾಗಿಸುತ್ತದೆ ಹಾಗೂ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಪ್ರತಿಯೊಂದು ನೂತನ ಕೇಂದ್ರವೂ ಸ್ಥಳೀಯ ಉದ್ಯಮಿಗಳಿಗೆ ಅವಕಾಶ ನೀಡಲಿದ್ದು, ಮೆಕ್ಯಾನಿಕ್ಗಳು ತಮ್ಮ ಕೌಶಲ್ಯವನ್ನು ಇವಿ ತಂತ್ರಜ್ಞಾನಕ್ಕೆ ತಕ್ಕಂತೆ ನವೀಕರಿಸಿಕೊಳ್ಳಲು ನೆರವಾಗುತ್ತದೆ” ಎಂದು ವಿವರಿಸಿದರು.

ಗ್ರೀನ್ ಟೈಗರ್ ಮೊಬಿಲಿಟಿಯ ನಿರ್ದೇಶಕಿ ಸ್ವಾತಿ ಕೇಶನ್ ಡೊಕಾನಿಯಾ ಮಾತನಾಡಿ, “ಭಾರತದ ಇವಿ ಕ್ರಾಂತಿಯ ಪಯಣ ಕೇವಲ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವುದಕ್ಕೆ ಸೀಮಿತವಾಗಬಾರದು. ರಸ್ತೆಗಳಲ್ಲಿ ಸಂಚರಿಸುತ್ತಿರುವ ಲಕ್ಷಾಂತರ ಪೆಟ್ರೋಲ್ ದ್ವಿಚಕ್ರ ವಾಹನಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿದ್ದು, ಅಧಿಕೃತ ರೆಟ್ರೋಫಿಟ್ ತಂತ್ರಜ್ಞಾನದ ಮೂಲಕ ಅಂತಹ ಅರ್ಹ ವಾಹನಗಳಿಗೆ ಪರಿಸರಸ್ನೇಹಿ ಮತ್ತು ಕೈಗೆಟುಕುವ ದರದಲ್ಲಿ ಮರುಜೀವ ನೀಡುವುದು ನಮ್ಮ ಗುರಿಯಾಗಿದೆ” ಎಂದರು.

ಐಬಿಸಿ ಟೆಕ್ನಾಲಜೀಸ್ ನ ಮುಖ್ಯಸ್ಥರಾದ ಜೀತೇಶ್ ಜಾಯ್ಸ್ಟನ್ ಡಿಸೋಜಾ ಮಾತನಾಡಿ, “ಕನ್ನಡ ರಾಜ್ಯೋತ್ಸವದ ಶುಭದಿನದಂದು ಉಡುಪಿಯ ಐಬಿಸಿ ಟೆಕ್ನಾಲಜೀಸ್ ನಲ್ಲಿ ಗ್ರೀನ್ ಟೈಗರ್ ಸಂಸ್ಥೆಯ ಕೇಂದ್ರ ಆರಂಭವಾಗಿರುವುದು, ಇವಿ ವಾಹನಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ನಮ್ಮ ಪಯಣದ ಮಹತ್ವದ ಮೈಲಿಗಲ್ಲಾಗಿದೆ. ಗ್ರಾಹಕರು ತಮ್ಮ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಸ್ವಚ್ಛ, ಮಿತವ್ಯಯಕಾರಿ ವಾಹನಗಳನ್ನಾಗಿ ಪರಿವರ್ತಿಸಲು ಶಕ್ತಿ ತುಂಬುವ ಮೂಲಕ ಹಸಿರು ಭವಿಷ್ಯದತ್ತ ಮುನ್ನಡೆಯಲು ನಾವು ಬದ್ಧರಾಗಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.

ಉಡುಪಿಯ ಈ ಕೇಂದ್ರವು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತ್ವರಿತ ಇವಿ ಅಳವಡಿಕೆ, ಕೈಗೆಟುಕುವ ಸಂಚಾರ, ಸ್ಥಳೀಯ ಉದ್ಯಮಶೀಲತೆ, ಉದ್ಯೋಗಾವಕಾಶ ಮತ್ತು ತಂತ್ರಜ್ಞರ ಕೌಶಲ್ಯಾಭಿವೃದ್ಧಿಗೆ ಸಹಕಾರಿಯಾಗಲಿದೆ. ಸದ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 8 ಕೇಂದ್ರಗಳನ್ನು ಹೊಂದಿರುವ ಸಂಸ್ಥೆಯು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಇನ್ನೂ 10 ಹೊಸ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಿದೆ.

Leave a Reply

Your email address will not be published. Required fields are marked *