ಮುಂಬಯಿ: ನಮ್ಮ ದೇಶದ ಆರ್ಥಿಕ ರಾಜಧಾನಿ ಅನಿಸಿಕೊಂಡಿರುವ ಮುಂಬಯಿ ಸಾಂಸ್ಕೃತಿಕವಾಗಿಯೂ ಸಂಪತ್ ಭರಿತವಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇಲ್ಲಿ ಇತರ ಭಾಷೆಯ ಪ್ರಾಂತ್ಯದ ಜನರು ತಮ್ಮ ತಮ್ಮ ಹೊಟ್ಟೆಪಾಡಿಗಾಗಿ ಬಂದು ಬದುಕನ್ನು ಕಟ್ಟಿಕೊಂಡಿದ್ದಾರೆ. ಕನ್ನಡಿಗರೂ ಇದಕ್ಕೆ ಹೊರತೇನಲ್ಲ. ಆದರೆ ಈ ಬದುಕಿನ ಜೊತೆಗೆ ಸಾಂಸ್ಕೃತಿಕವಾಗಿಯೂ ನಾವು ಸಬಲರಾಗಬೇಕು ಎಂಬ ಮಹತ್ ಉದ್ದೇಶವನ್ನು ಇಟ್ಟುಕೊಂಡು ಇಲ್ಲಿ ನೂರಕ್ಕೂ ಹೆಚ್ಚು ನಾಟಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಆಯಾಯ ಕಾಲಘಟ್ಟದಲ್ಲಿ ಸರಾಸರಿ 15ರಷ್ಟು ನಾಟಕ ಸಂಘಟನೆಗಳು ಇಲ್ಲಿ ಕ್ರಿಯಾಶೀಲವಾಗಿದ್ದವು ಎನ್ನುವುದನ್ನು ನಾವು ಕಂಡುಕೊಳ್ಳಬಹುದು.

ನಾಟಕ ಸಂಸ್ಥೆಗಳ ಜೊತೆಗೆ ಅನೇಕ ಕನ್ನಡ, ಕರ್ನಾಟಕ ಸಂಸ್ಥೆಗಳು ಕಲಾ ವಿಭಾಗಗಳ ಮೂಲಕ ಕ್ರಿಯಾಶೀಲವಾಗಿವೆ. ಕನ್ನಡ ಕಲಾ ಕೇಂದ್ರದ ನಾಟಕೋತ್ಸವ ಪ್ರಾರಂಭದ ಜೊತೆಜೊತೆಗೆ ನಾಟಕಗಳು ಫೋರ್ಟ್ ಹಾಗೂ ಸುತ್ತು ಮುತ್ತಲ ಪರಿಸರವನ್ನು ದಾಟಿ ಮಾಟುಂಗ, ದಾದರ್ ಮುಂದೆ ಉಪನಗರಗಳ ಸಭಾಗ್ರಹಗಳತ್ತ ತಮ್ಮ ನಡೆಯನ್ನು ವಿಸ್ತರಿಸಿಕೊಂಡವು. ಈಗಂತೂ ಹೆಚ್ಚಿನ ಜಾತೀಯ ಸಂಘ ಸಂಸ್ಥೆಗಳು ಅವುಗಳದ್ದೇ ಆದ ಸಭಾಗ್ರಹಗಳನ್ನು ಹೊಂದಿವೆ.
1954 ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಕಲಾ ಕೇಂದ್ರ ಇಂದು 66ಕ್ಕಿಂತಲೂ ಹೆಚ್ಚು ನಾಟಕೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕನ್ನಡ ಕಲಾ ಕೇಂದ್ರಕ್ಕೆ ಈಗ 70ರ ಹರಯ. ಮುಂಬೈಯಲ್ಲಿ ಇದ್ದುಕೊಂಡು ಕನ್ನಡ, ತುಳು, ಕೊಂಕಣಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ, ಈಗಲೂ ತೊಡಗಿಸಿಕೊಂಡಿರುವ ಎಲ್ಲಾ ಶ್ರೇಷ್ಠ ರಂಗ ನಿರ್ದೇಶಕರು, ರಂಗ ಕರ್ಮಿಗಳು ಎಲ್ಲರೂ ಕನ್ನಡ ಕಲಾ ಕೇಂದ್ರದ ನಾಟಕೋತ್ಸವಗಳಲ್ಲಿ, ರಂಗ ಚಟುವಟಿಕೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿದವರೇ ಆಗಿದ್ದಾರೆ. ವೈವಿಧ್ಯಪೂರ್ಣ ನಾಟಕ ಕೃತಿಗಳು ಇತರ ಭಾಷೆಗಳಿಂದ ಕನ್ನಡಕ್ಕೆ ಬರುವಲ್ಲೂ ಕನ್ನಡ ಕಲಾ ಕೇಂದ್ರ ಕಾರಣವಾಗಿದೆ. ಕೇವಲ ವಸ್ತು ಮಾತ್ರವಲ್ಲದೆ ರಂಗತಂತ್ರ, ಶೈಲಿ, ಪ್ರಯೋಗದ ದೃಷ್ಟಿಯಿಂದಲೂ ಮುಂಬಯಿ ರಂಗಭೂಮಿ ವಿಸ್ತಾರಗೊಳ್ಳಲು ಬೆಳೆಯಲು ಸಹಕಾರಿಯಾದದ್ದು ಒಂದು ಇತಿಹಾಸ.
ಉಡುಪಿ ಜಯರಾಮ ರಾವ್, ಕೆ ಜೆ ರಾವ್, ಕಡಬ ವ್ಯಾಸರಾವ್, ಶಂಕರನಾರಾಯಣ ರಾವ್, ಸೂರ್ಯನಾರಾಯಣ ರಾವ್, ಶುಂಠಿ ಪಾಡಿ ಭುಜಂಗರಾವ್, ಎಂಎಲ್ ರಾವ್, ಅಡೂರು ಕೃಷ್ಣರಾವ್, ಕೆ ರಘುರಾಮರಾವ್ ಇವರೇ ಮೊದಲಾದವರು 1954 ರಲ್ಲಿ ಕನ್ನಡ ಕಲಾ ಕೇಂದ್ರದ ಹುಟ್ಟಿಗೆ ಕಾರಣಕರ್ತರಾದವರು. ಧೀಮಂತ ವ್ಯಕ್ತಿತ್ವದ ಡಾ.ಲಲಿತಾರಾವ್ ಅವರನ್ನು ಕೇಂದ್ರದ ಅಧ್ಯಕ್ಷರನ್ನಾಗಿ ಆರಿಸುವ ಮೂಲಕ ಕನ್ನಡ ಕಲಾ ಕೇಂದಕ್ಕೆ ಭದ್ರ ಬುನಾದಿ ಯನ್ನು ಹಾಕಿಕೊಟ್ಟವರು ಇವರೇ. ಆ ದಿನಗಳಲ್ಲಿ ಟಿ ಪಿ ಕೈಲಾಸಂ ಅವರ ಹೋಮ್ ರೋಲ್ ನಾಟಕವನ್ನು ತುಳುವಿನಲ್ಲಿ ತರಲಾಗಿತ್ತು ಎಂದರೆ ನಂಬುತ್ತೀರಾ. ದಾಶರತಿ ದೀಕ್ಷಿತ್ ಅವರ ಅಳಿಯ ದೇವರು ನಾಟಕವನ್ನು ಕನ್ನಡದಲ್ಲಿ ತನ್ನ ಪ್ರಥಮ ನಾಟಕಗಳಾಗಿ ರಂಗಕ್ಕೆ ತಂದಿದ್ದು ಕನ್ನಡ ಕಲಾ ಕೇಂದ್ರ. ಪ್ರಥಮ ವಾರ್ಷಿಕೋತ್ಸವದಂದೇ ನೃತ್ಯ, ಮಿಮಿಕ್ರಿ, ನಾಟಕ ಹೀಗೆ ವೈವಿಧ್ಯತೆಯೊಂದಿಗೆ ತನ್ನನ್ನು ತಾನು ತೆರೆದುಕೊಂಡಂತಹ ಸಂಸ್ಥೆ ಇದು.
ಹಾಗೆಂದು ಕನ್ನಡ ಕಲಾ ಕೇಂದ್ರವು ಕಲೆಯನ್ನು ಪ್ರೊತ್ಸಾಹಿಸುವುದು ಮಾತ್ರವೇ ತನ್ನ ಗುರಿ ಅಲ್ಲ ಎಂಬುದನ್ನು ಮನಗಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಕ್ರತಿ ವಿಕೋಪ ಮೊದಲಾದ ಸಂದರ್ಭಗಳಲ್ಲಿ ತನ್ನ ಮಿತಿಯಲ್ಲಿ ಸ್ಪಂದಿಸಿರುವುದನ್ನು ನಾವು ಕಾಣಬಹುದು. ಕನ್ನಡ ಕಲಾಕೇಂದ್ರ ಕೆ ಜೆ ರಾವ್ ಅವರ ‘ಸತ್ಯಂ ವದ ಧರ್ಮ ಚರ’ ಕಪ್ಪು ದ್ವೀಪ ಕೆಂಪು ದೀಪ ಸದಾನಂದ ಸುವರ್ಣರ ಗುಡ್ಡದ ಭೂತ, ಯಾರು ನನ್ನವರು , ಚಕ್ರವ್ಯೂಹ ಇಂತಹ ನಾಟಕಗಳು 30ಕ್ಕೂ ಹೆಚ್ಚಿನ ಪ್ರಯೋಗ ಕಂಡಿರುವುದನ್ನು ಗಮನಿಸಬಹುದು. ಡೊಂಕುಬಾಲದ ನಾಯಕರು, 40ರ ನಲುಗು ಮತ್ತು ಇತರ ನಾಟಕಗಳನ್ನು ಕನ್ನಡ ಕಲಾಕೇಂದ್ರ ರಂಗಕ್ಕೆ ನೀಡಿದೆ. ಕನ್ನಡ ಕಲಾ ಕೇಂದ್ರವು ಹೊಸ ಪೀಳಿಗೆಯನ್ನು ರಂಗಭೂಮಿಯತ್ತ ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಮಕ್ಕಳ ನಾಟಕೋತ್ಸವಗಳನ್ನು, ರಂಗ ತರಬೇತಿ ಶಿಬಿರಗಳನ್ನು, ತೆಂಕು ಬಡಗು ಎರಡೂ ತಿಟ್ಟುಗಳ ಯಕ್ಷಗಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವುದನ್ನು ನಾವು ಗಮನಿಸಬೇಕಾಗಿದೆ. ಕಲಾವಿದರನ್ನು ಗುರುತಿಸಿ ಗೌರವಿಸುತ್ತಾ ಬಂದಿರುವ ಕಲಾ ಕೇಂದ್ರ ಇತ್ತೀಚಿನ ವರ್ಷಗಳಲ್ಲಿ ನಾಟಕ, ಯಕ್ಷಗಾನ, ನೃತ್ಯ, ಸಂಗೀತ ಕ್ಷೇತ್ರಗಳಲ್ಲಿ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಂಪರೆಯನ್ನು ರೂಢಿಸಿಕೊಂಡು ಬರುತ್ತಿದೆ. ಈ ಪ್ರಶಸ್ತಿ ಕನ್ನಡ ಕಲಾ ಕೇಂದ್ರದ ಹೆಮ್ಮೆ ಎಂದು ಕರೆಸಿಕೊಳ್ಳಲು ಸೂಕ್ತವಾಗಿದೆ.
ನಾಟಕ ರಂಗದ ಸಾಧಕರಿಗೆ ದಿವಂಗತ ಸದಾನಂದ ಸುವರ್ಣರ ಹೆಸರಿನಲ್ಲಿ ಸುವರ್ಣ ಶ್ರೀ ಎಂಬ ಪ್ರಶಸ್ತಿಯನ್ನು, ಸಂಗೀತ ಕ್ಷೇತ್ರದ ಸಾಧಕರಿಗೆ ದಿವಂಗತ ಲಲಿತಾ ರಾವ್ ಸ್ಮರಣಾರ್ಥ ಲಲಿತ ಕಲಾ ಶ್ರೀ ಪ್ರಶಸ್ತಿ, ನೃತ್ಯರಂಗದ ಸಾಧಕರಿಗೆ ದಿವಂಗತ ತಾರಾ ಸುಬ್ರಮಣ್ಯ ರಾವ್ ಬಾಳ ಸ್ಮರಣಾರ್ಥ ತಾರಾಶ್ರೀ ಪ್ರಶಸ್ತಿಯನ್ನು, ಯಕ್ಷರಂಗದ ಸಾಧಕರಿಗೆ ದಿವಂಗತ ಸತ್ಯಮ್ಮ ಹಾಗೂ ದಿವಂಗತ ರಾಮರಾವ್ ಸ್ಮರಣಾರ್ಥ ಕೆ ಜೆ ರಾವ್ ಅವರಿಂದ ಕೊಡಮಾಡುವ ಸತ್ಯರಾಮ ಪ್ರಶಸ್ತಿ ಪ್ರತಿ ವರ್ಷ ನಗರದ ಈ ನಾಲ್ಕು ಕಲೆಗಳಿಗಾಗಿ ಮತ್ತು ಕಲೆಗಳ ಉನ್ನತಿಗಾಗಿ ಹೋರಾಟ ನಡೆಸಿದ ವ್ಯಕ್ತಿಗಳಿಗೆ ಆಯ್ಕ ಸಮಿತಿಯ ಆಯ್ಕೆಯಂತೆ ನೀಡಲಾಗುತ್ತಿದೆ ಕನ್ನಡ ಕಲಾಕೇಂದ್ರ ಯಾವತ್ತೂ ಭಾಷೆ -ಭಾಷೆಗಳ ನಡುವೆ ಸಾಮರಸ್ಯವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಕನ್ನಡ, ತುಳು, ಕೊಂಕಣಿ, ಹಿಂದಿ ಮರಾಠಿ ಇಂಗ್ಲಿಷ್ ಇತ್ಯಾದಿ ಭಾಷೆಯ ನಾಟಕಗಳು ಕೇಂದ್ರದ ವೇದಿಕೆಯಲ್ಲಿ ಪ್ರಸ್ತುತಗೊಂಡಿರುವುದೇ ಇದಕ್ಕೆ ನಿದರ್ಶನ. ಕೇಂದ್ರದ ಸ್ಥಾಪಕ ಅಧ್ಯಕ್ಷರು ಆಗಿದ್ದ ಡಾ.ಲಲಿತಾ ರಾವ್ ಮುಂದೆ ಸುಮಾರು ಐದು ದಶಕಗಳ ಕಾಲ ಅಧ್ಯಕ್ಷರಾಗಿ ಕನ್ನಡ ಕಲಾ ಕೇಂದ್ರಕ್ಕೆ ನೀಡಿದ ಮಾರ್ಗದರ್ಶನವನ್ನು ಎಂದು ಮರೆಯಲಾಗದು ಇತ್ತೀಚಿಗಷ್ಟೇ ನಮ್ಮನಗಲಿದ ಡಾ. ವ್ಯಾಸರಾವ್ ನಿಂಜೂರ ಅವರೂ ಕನ್ನಡ ಕಲಾ ಕೇಂದ್ರದ ಅಲ್ಪಕಾಲದ ಅಧ್ಯಕ್ಷರಾಗಿದ್ದರೂ ಕೇಂದ್ರದ ಮುನ್ನಡೆಯಲ್ಲಿ ಕಾಳಜಿ ತೋರಿಸುತ್ತಿದ್ದರೂ ಎನ್ನುವುದು ಸತ್ಯ. ನಂತರ ಅಧ್ಯಕ್ಷರಾದ ಬಿ ಬಾಲಚಂದ್ರ ರಾವ್ ಅವರ ಮಾರ್ಗದರ್ಶನ ಕನ್ನಡ ಕಲಾ ಕೇಂದ್ರ ಎಂದು ಮರೆಯುವುದಿಲ್ಲ ಹಲವು ಹಿರಿಯರ ಪ್ರೊತ್ಸಾಹ ಮತ್ತು ಹಿತ ನುಡಿಗಳು ಕೇಂದ್ರದ ಬೆಂಗಾವಲಾಗಿ ನಿಂತಿವೆ.
ಈ ಬಾರಿಯ ನಾಟಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರ ಉಪನಗರಗಳ ವಿವಿಧಡೆ ನಡೆಸುವ ಸಿದ್ಧತೆಯನ್ನು ಕನ್ನಡಕಲಾ ಕೇಂದ್ರ ಮಾಡಿಕೊಂಡಿದೆ.
ಅದರಂತೆ ದಿನಾಂಕ 22. 11. 2026, ಭಾನುವಾರ ಸಂಜೆ 3 ರಿಂದ ಕನ್ನಡ ಕಲಾ ಕೇಂದ್ರದ 67ನೇ ನಾಟಕೋತ್ಸವ ಉದ್ಘಾಟನೆ ಮತ್ತು ಕಿರು ಹೊತ್ತಗೆ ‘ಕಲಾಸಂಪದ 2026’ ಬಿಡುಗಡೆ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ನವೀ ಮುಂಬೈ ಕನ್ನಡ ಸಂಘ ವಾಶಿ, ಇಲ್ಲಿ ಕನ್ಡಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಜಂಟಿ ಸಹಕಾರದಲ್ಲಿ ಆಚರಿಸಲಾಗುವುದು. ಈ ಕಾರ್ಯಕ್ರಮವನ್ನು ಪ್ರಸಿದ್ಧ ಸಾಹಿತಿ ಪೇತ್ರಿ ವಿಶ್ವನಾಥ್ ಶೆಟ್ಟಿ ಅವರು ಉದ್ಘಾಟಿಸಲಿದ್ದು ನವಿ ಮುಂಬಯಿ ಕನ್ನಡ ಸಂಘ ವಾಶಿ ಇದರ ಅಧ್ಯಕ್ಷರಾದ ಗೋಪಾಲ್ ವೈ ಶೆಟ್ಟಿ ಮತ್ತು ಗೌರವಾಧ್ಯಕ್ಷರಾದ ಬಿ ಎಚ್ ಕಟ್ಟಿ ಅವರು ಕಲಾಸಂಪದ 2026 ಅನ್ನು ಬಿಡುಗಡೆಗೊಳಿಸಲಿದ್ದಾರೆ ಅಂದಿನ ಸಭಾಧ್ಯಕ್ಷತೆಯನ್ನು ಕನ್ನಡ ಕಲಾ ಕೇಂದ್ರ ಮುಂಬೈ ಇದರ ಅಧ್ಯಕ್ಷರಾದ ಮಧುಸೂಧನ ಟಿಆರ್ ವಹಿಸಿಕೊಳ್ಳಲಿದ್ದಾರೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಮಂಟಪ ಮುಂಬೈ ಪ್ರಸ್ತುತಿಯಲ್ಲಿ ‘ಸುಯೋಧನ’ ನಾಟಕದ ರಂಗ ಪ್ರಯೋಗ ಹಾಗೂ ಸಾಗರದ ಉದಯ ಕಲಾವಿದರಿಂದ ‘ಕುಂಟಾ ಕುಂಟಾ ಕುರುವತ್ತಿ’ ನಾಟಕವನ್ನು ಪ್ರಸ್ತುತಿ ಪಡಿಸಲಾಗುವುದು. ಕನ್ನಡಕಲಾ ಕೇಂದ್ರದ ನಾಟಕೋತ್ಸವಕ್ಕೆ ಕರ್ಣಾಟಕ ಬ್ಯಾಂಕ್, ಮೈಸೂರು ಅಸೋಸಿಯೇಷನ್ ಮಾಟುಂಗಾ, ಮುಂಬೈ, ಜ್ಞಾನ ವಿಕಾಸ ಮಂಡಳ, ಐರೋಲಿ, ಕರ್ನಾಟಕ ಸಂಘ ಅಂಧೇರಿ, ಮುಂಬೈ, ಕರುನಾಡಸಿರಿ ಮುಂಬೈ, ಸಹಯೋಗ ನೀಡಲಿದ್ದು ಅಭಿನಯ ಮಂಟಪ, ಮುಂಬೈ, , ಕೋಡ್ಯಡ್ಕ ಕ್ರಿಯೇಶನ್ಸ್ ಮುಂಬೈ, ಉದಯ ಕಲಾವಿದರು ಸಾಗರ ಹಾಗೂ ಮುಂಬೈಯ ಸರ್ವ ಕಲಾವಿದರ ಸಹಕಾರ ಇರುತ್ತದೆ.
ನಾಟಕೋತ್ಸವದ ಎರಡನೇ ಕಾರ್ಯಕ್ರಮ ದಿನಾಂಕ 29.11.2026ರಂದು ಜ್ಞಾನ ವಿಕಾಸ ಮಂಡಳ ಮೆಹತಾ ಕಾಲೇಜ್ ಐರೋಲಿ ನವೀ ಮುಂಬೈ ಇಲ್ಲಿ ಮಧ್ಯಾಹ್ನ ಮೂರರಿಂದ ನಡೆಯಲಿದೆ ಅಂದಿನ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ ಟಿ ಆರ್, ಅತಿಥಿಗಳಾಗಿ, ವೆಂಕಟರಮಣ ಹೆಗಡೆ (ಅಧ್ಯಕ್ಷರು ಜ್ಞಾನವಿಕಾಸ ಶಿಕ್ಷಣ ಮಂಡಳಿ) ಆರ್ ಎಲ್ ಭಟ್ (ಪ್ರಸಿದ್ಧ ಜ್ಯೋತಿಷಿ ಹಾಗೂ ಹಸ್ತಶಾಸ್ತ್ರಜ್ಞ) ಹರೀಶ್ ಶೆಟ್ಟಿ ಪಡುಬಿದ್ರಿ (ಕಾರ್ಯಾಧ್ಯಕ್ಷರು ಬಂಟರ ಸಂಘ ನವಿ ಮುಂಬೈ ಪ್ರಾದೇಶಿಕ ಸಮಿತಿ) ಮೋಹನ್ ಕುಮಾರ್ (ಗೌರವ ಅಧ್ಯಕ್ಷ ಗೌಡರ ಉನ್ನತೀಕರಣ ಸಂಸ್ಥ ಮಹಾರಾಷ್ಟ್ರ) ಜೈ ರಾಮಶೆಟ್ಟಿ ಇಡೂರು (ಸಮಾಜ ಸೇವಕ), ಸುಬ್ರಹ್ಮಣ್ಯರಾವ್ ಬಾಳ (ಉದಾರ ದಾನಿಗಳು) ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿ ಮನೆ ಉಪಸ್ಥಿತರಿರಲಿದ್ದಾರೆ.
ಅಂದು ಸಂಗೀತ ಕ್ಷೇತ್ರದ ಸಾಧಕರಿಗೆ ಕನ್ನಡ ಕಲಾ ಕೇಂದ್ರವು ದಿವಂಗತ ಲಲಿತ ರಾವ್ ಸ್ಮರಣಾರ್ಥ ನೀಡಲಾಗುವ ಲಲಿತ ಕಲಾ ಶ್ರೀ ಪ್ರಶಸ್ತಿಯನ್ನು ಪದ್ಮನಾಭ ಸಸಿಹಿತ್ಲು ಅವರಿಗೆ ಪ್ರದಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಪಂದನ ನಾಟ್ಯಾಲಯದ ಸದಸ್ಯರಿಂದ ನೃತ್ಯ, ಶ್ರಾವ್ಯ ಲಹರಿ ಹಾಗೂ ಸನಾತನ ತಾಮಣ್ಕರ್ ಅವರಿಂದ ಸಂಗೀತ , ಕನ್ನಡ ಕಲಾ ಕೇಂದ್ರ ಪ್ರಸ್ತುತಿಯಲ್ಲಿ ಅಂಗುಲಿಮಾಲ ನಾಟಕದ ರಂಗ ಪ್ರಯೋಗ ನಡೆಯಲಿದೆ.
ಮೂರನೇ ಕಾರ್ಯಕ್ರಮ ದಿನಾಂಕ 27.12.2026ರಂದು ಮೈಸೂರ್ ಎಸೋಸಿಯೇಷನ್ ಸಭಾಗ್ರಹದಲ್ಲಿ ಮಧ್ಯಾಹ್ನ 2:30 ರಿಂದ ರಿಂದ ಕನ್ನಡ ಕಲಾ ಕೇಂದ್ರದ ನಾಟಕೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಸಮಾರಂಭ ನಡೆಯಲಿದ್ದು ಅಂದಿನ ಸಭಾಧ್ಯಕ್ಷತೆಯನ್ನು ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂಧನ ಟಿಆರ್ ವಹಿಸಲಿದ್ದು ಅತಿಥಿಗಳಾಗಿ ಡಾ ಮಂಜುನಾಥ್ ಹಾಗೂ ಮಂಜುನಾಥಯ್ಯ, ಕರ್ಣಾಟಕ ಬ್ಯಾಂಕನ ಡಿಜಿಎಂ ಡ್ಯಾನಿಶ್, ಶ್ರೀನಿವಾಸ ಸಾಫಲ್ಯ (ಗೌರವ ಅಧ್ಯಕ್ಷ ರು, ಸಾಫಲ್ಯ ಸೇವಾ ಸಂಘ) ಹರೀಶ್ ಶೆಟ್ಟಿ, ಪಡುಬಿದ್ರಿ (ಕಾರ್ಯಾಧ್ಯಕ್ಷರು ನವಿ ಮುಂಬೈ ಪ್ರಾದೇಶಿಕ ಸಮಿತಿ) ಜಗಜೀವನ್ ಪೂಜಾರಿ (ಅಧ್ಯಕ್ಷರು ಕರ್ನಾಟಕ ಸಂಘ ಅಂಧೇರಿ) ವಿಶ್ವನಾಥ್ ಎಂ ಶೆಟ್ಟರ್ ( ಅಧ್ಯಕ್ಷರು ಎಂಜಿಎಂ ಫೌಂಡೇಶನ್) ಎಸ್ಎನ್ ಉಡುಪ (ಅರ್ಚಕರು ) ಎ ಕೆ ಹರೀಶ್ ( ಸಂಚಾಲಕರು ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾಬಾಯಿಂದರ್) ಜಗನ್ನಾಥ್ ಡಿ ಶೆಟ್ಟಿ ಪಳ್ಳಿ (ಕಾರ್ಯದರ್ಶಿಗಳು ತುಳುಕೂಟ ಮತ್ತು ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ) ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಟಕ ರಂಗದ ಸಾಧಕರಿಗೆ ದಿವಂಗತ ಸದಾನಂದ ಸುವರ್ಣರ ಹೆಸರಿನಲ್ಲಿ ನೀಡಲಾಗುವ ಸುವರ್ಣ ಶ್ರೀ ಪ್ರಶಸ್ತಿಯನ್ನು ವಿಕೆ ಸುವರ್ಣ ಅವರಿಗೆ, ನೃತ್ಯರಂಗದ ಸಾಧಕರಿಗೆ ದಿವಂಗತ ತಾರಾ ಸುಬ್ರಹ್ಮಣ್ಯ ರಾವ್ ಬಾಳ ಸ್ಮರಣಾರ್ಥ ನೀಡಲಾಗುವ ತಾರಾಶ್ರೀ ಪ್ರಶಸ್ತಿಯನ್ನು ವಿದುಷಿ ಸೀಮಾ ಪ್ರಶಾಂತ್ ಅವರಿಗೆ, ಯಕ್ಷ ರಂಗದ ಸಾಧಕರಿಗೆ ದಿವಂಗತ ಸತ್ಯಮ್ಮ ಹಾಗೂ ದಿವಂಗತ ರಾಮರಾವ್ ಸ್ಮರಣಾರ್ಥ ಡಾ. ಕೆಜೆ ರಾವ್ ಅವರಿಂದ ನೀಡಲಾಗುವ ಸತ್ಯರಾಮ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಡ್ಯಡ್ಕ ಕ್ರಿಯೇಶನ್ಸ್ ಮುಂಬೈ ಪ್ರಸ್ತುತಿಯಲ್ಲಿ ಕೌನ್ಸಿಲರ್ ಕೊಗ್ಗಣ್ಣ ಎಂಬ ನಾಟಕದ ರಂಗ ಪ್ರಯೋಗ ನಡೆಯಲಿದೆ.
ನಗರ ಉಪನಗರಗಳ ರಂಗ ಕಲಾಸಕ್ತರು ಈ ಮೂರು ಉಚಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕನ್ನಡ ಕಲಾ ಕೇಂದ್ರದ ಪರವಾಗಿ ಅಧ್ಯಕ್ಷ ಮಧುಸೂದನ್ ಟಿ ಆರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.
