ಹಿರ್ಗಾನ: ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ

ಹಿರ್ಗಾನ, ಕಾರ್ಕಳ: ನ. 21 ರಂದು ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ನಡೆಯಿತು.

ಶಾಸಕ ಸುನಿಲ್ ಕುಮಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಭೆ ಕೇವಲ ಮನವಿಗೆ ಮಾತ್ರ ಸೀಮಿತವಾದರೆ ಏನು ಪ್ರಯೋಜನ ಇಲ್ಲ, ಹಕ್ಕುಪತ್ರ, 94 ಸಿ ಗಳಂತಹ ಸಮಸ್ಯೆಗಳು ನೇರವಾಗಿ ಸರಕಾರದಿಂದಲೇ ಪರಿಹಾರವಾಗಬೇಕಾಗಿದೆ ಎಂದು ಹೇಳಿದರು. ಈ ಬಗ್ಗೆ ವಿಧಾನಸಭಾ ಅದಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ ಸರಕಾರದ ಕೆಲವೊಂದು ನಿಯಮಗಳಿಂದಾಗಿ ಜನ ಸಾಮಾನ್ಯರು ಹಲವು ಸಮಸ್ಯೆಗಳಿಂದ ಬಳಲುವಂತಾಗಿದೆ. ಕುಡಿಯುವ ನೀರು, ವಸತಿ, 9/11, ಸಮಸ್ಯೆ ಪರಿಹರಿಸುವಲ್ಲಿ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ಪ್ರಜಾ ಸೇವಾ ಆಂದೋಲನ ಪ್ರತಿ ವಾರದ ಬದಲು ತಿಂಗಳಿಗೆ ಒಮ್ಮೆ ನಡೆದರೆ ಉತ್ತಮ ಈ ಬಗ್ಗೆ ಶಾಸಕರು ಸರಕಾರದ ಗಮನ ಸೆಳೆಯಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು. ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಪಿಂಟೋ ಸ್ವಾಗತಿಸಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಧನ್ಯವಾದ ಸಲ್ಲಿಸಿದರು. ಶಿರಸ್ತೆದಾರರಾದ ನಳೀನಿ ರೈ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *