ಬಂಟ್ವಾಳದ ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾಹಕ ಮಾಹಿತಿ ಶಿಬಿರ

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಫೆಬ್ರವರಿ 19ರಂದು ಗ್ರಾಹಕ ಮಾಹಿತಿ ಶಿಬಿರ ನಡೆಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮಾಹಿತಿದಾರರಾಗಿ ಆಗಮಿಸಿದ್ದರು. ಅವರು ತಮ್ಮ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಹಕ ಕ್ಲಬ್ ಗಳಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳು, ಪ್ರತಿಯೊಂದು ವಸ್ತುವನ್ನು ಪ್ಯಾಕೆಟಗಳಲ್ಲಿಯೇ ಏಕೆ ಪಡೆಯಬೇಕು, ಪ್ಯಾಕೆಟ್ನ ಮೇಲಿರುವ ವಿವಿಧ ಮಾಹಿತಿಗಳ ಉಪಯೋಗವನ್ನು ಹೇಗೆ ಮಾಡಿಕೊಳ್ಳಬೇಕು., ವಸ್ತುಗಳ ಗುಣಮಟ್ಟದ ಅಗತ್ಯತೆ, ಯಾವುದೇ ಲೋಪದೋಷಗಳು ವಸ್ತುವಿನಲ್ಲಾಗಲಿ, ಸೇವೆಯಲ್ಲಾಗಲೀ ಕಂಡು ಬಂದರೆ ಪರಿಹಾರ ಪಡೆದುಕೊಳ್ಳುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಜಿಲ್ಲಾ, ರಾಜ್ಯ, ರಾಷ್ಟ್ರೀಯ ಗ್ರಾಹಕ ವೇದಿಕೆಗಳಿಂದ ದೊರಕುವ ಸೌಲಭ್ಯಗಳು, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಯಾವುದೇ ಶುಲ್ಕವಿಲ್ಲದೆ ಪಡೆಯಬಹುದಾದ ಕೋಟಿಗಟ್ಟಲೆ ಪರಿಹಾರ, ಇತರರು ಕೇವಲ ನೂರು ರೂಪಾಯಿ ಶುಲ್ಕ ಪಾವತಿಸುವ ಮೂಲಕವಾಗಿ ಪಡೆಯಬಹುದಾದ ಕೋಟಿಗಟ್ಟಲೆ ಪರಿಹಾರದ ಮಾಹಿತಿಗಳನ್ನು ಹಂಚಿಕೊಂಡರು.
ಅದೇ ರೀತಿ ಪರಿಸರ ಹಾಗೂ ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ತಮ್ಮ ಮನೆ, ಶಾಲೆ, ಪ್ರತಿಯೊಂದು ಕಡೆಯಲ್ಲಿ ನಡೆಸಬೇಕೆಂದು ಕೇಳಿಕೊಂಡರು.
ಶಾಲಾ ಮುಖ್ಯೋಪಾಧ್ಯಾಯಿನಿ ಸೌಜನ್ಯ ಸ್ವಾಗತಿಸಿದರು. ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು.

Leave a Reply

Your email address will not be published. Required fields are marked *