ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರಾದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಸಿರಿ ಸಂಸ್ಥೆಯ ಸಂಸ್ಥಾಪಕರಾದ ಹೇಮಾವತಿ ವಿ. ಹೆಗ್ಗಡೆಯವರು ಜೂನ್ 24 ಬುಧವಾರದಂದು ಬೆಳ್ತಂಗಡಿಯಲ್ಲಿರುವ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವಿವಿಧ ಉತ್ಪಾದನಾ ವಿಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಿದ ಶ್ರೀ ಹೆಗ್ಗಡೆ ದಂಪತಿಗಳು, ಸಿಬ್ಬಂದಿಗಳ ಕಾರ್ಯನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ಜನಾರ್ಧನ ಅವರು ಶ್ರೀ ಹೆಗ್ಗಡೆ ದಂಪತಿಗಳನ್ನು ಹಾಗೂ ಶ್ರೀ ಹೆಗ್ಗಡೆಯವರ ಮೊಮ್ಮಗಳಾದ ಮಾನ್ಯರವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಡ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದ ಮಹೋದ್ದೇಶದಿಂದ ಸಿರಿ ಸಂಸ್ಥೆಗೆ ಸುಸಜ್ಜಿತ ಹಾಗೂ ಭವ್ಯ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟು, ಸಿಬ್ಬಂದಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಶ್ರೀ ಹೆಗ್ಗಡೆ ದಂಪತಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಸಿರಿ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸೇಲಂನಲ್ಲಿರುವ ಇಸ್ಕಾನ್ ದೇವಾಲಯದ ಶ್ರೀರಾಮಪ್ರಭು ಚಂದನದಾಸ ಸ್ವಾಮೀಜಿಯವರು, ರಾಜೇಶ್ ಪೈ, ಡಾ. ಹರೀಶ್ ಕೃಷ್ಣಸ್ವಾಮಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
