ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಅಂಬೇಡ್ಕರ್ ಭವನ ಮತ್ತು ಕಿಸಾನ್ ಸಭಾಂಗಣ ಉದ್ಘಾಟನೆ

ಕಾರ್ಕಳ, ಫೆ. 25:, : ಪ್ರತಿಷ್ಠಿತ ವಿದ್ಯಾಸಂಸ್ಥೆಯ 35ನೇ ವರ್ಷದ ವಾರ್ಷಿಕೋತ್ಸವ ಹಾಗೂ 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಮತ್ತು ಕಿಸಾನ್ ಸಭಾಂಗಣದ ಉದ್ಘಾಟನಾ ಸಮಾರಂಭವು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಿತು.

ಬಡವರ ಬದುಕಿಗೆ ಚೈತನ್ಯ ತುಂಬಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿಯ ಮೂಲಕ ವಾರ್ಷಿಕ 52 ಸಾವಿರ ಕೋಟಿ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಯೋಜನೆಗಳಿಗೂ ನಮ್ಮ ಸರ್ಕಾರ ಅನುದಾನ ನೀಡುವ ಮೂಲಕ ಜನಪರ ಆಡಳಿತ ನೀಡುತ್ತಿದ್ದೇವೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು, ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆ ನಡೆದು ಬಂದ ಕುರಿತು ವೀರಪ್ಪ ಮೊಯ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ ಅನಗತ್ಯ ದುಂದು ವೆಚ್ಚಕ್ಕೆ ಅವಕಾಶವಿಲ್ಲ. ಬಡವರ ಮಕ್ಕಳನ್ನು ಬೆಳೆಸುವುದೇ ನಮ್ಮ ಏಕೈಕ ಗುರಿ. ಇಲ್ಲಿ ದಾಖಲಾಗುವ ಮಕ್ಕಳು ನಿರ್ಗತಿಕರಾಗಿರಬೇಕು ಮತ್ತು ಯಾವುದೇ ಡೊನೇಷನ್ ಪಡೆಯುವ ಕ್ರಮ ನಮ್ಮಲ್ಲಿಲ್ಲ. ಕನಿಷ್ಠ 35 ಅಂಕ ಪಡೆದ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಅಂತಹ ಮಕ್ಕಳನ್ನು 90 ಅಂಕ ಪಡೆಯುವಂತೆ ಸಿದ್ಧಪಡಿಸುವುದು ನಮ್ಮ ಸಂಸ್ಥೆಯ ಶ್ರಮ ಹಾಗೂ ಬಡ ಮಕ್ಕಳ ಏಳಿಗೆಯೇ ನಮ್ಮ ಗುರಿ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, “ಎಲ್ಲಾ ಇಲಾಖೆಗಳಿಗೆ ಒಂದು ವ್ಯಾಪ್ತಿ ಇರುತ್ತದೆ, ಆದರೆ ಶಿಕ್ಷಣ ಇಲಾಖೆಗೆ ಯಾವುದೇ ಮಿತಿಯಿಲ್ಲ. ಕಟ್ಟಕಡೆಯ ಮಗುವಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ,” ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, “ವೀರಪ್ಪ ಮೊಯ್ಲಿ ಅವರ ಜೀವನದ ಯಶೋಗಾಥೆ ನಮಗೆಲ್ಲರಿಗೂ ಸ್ಫೂರ್ತಿ. ಅಭಿವೃದ್ಧಿ ಎಂದರೆ ಕೇವಲ ರಸ್ತೆಯಲ್ಲ, ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲ; ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣವೇ ನಿಜವಾದ ಅಭಿವೃದ್ಧಿ,” ಎಂದರು. ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳಕ್ಕೆ ಸುಸಜ್ಜಿತ ಅಂಬೇಡ್ಕರ್ ಭವನ ಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಮಂಜೂರಾಗಿತ್ತು. ಇದು ಉಡುಪಿ ಜಿಲ್ಲೆಯಲ್ಲೇ ಮಾದರಿ ಅಂಬೇಡ್ಕರ್ ಸಭಾ ಭವನವಾಗಿದೆ ಎಂದರು. ಮುಂದಿನ ವರ್ಷ ಕಾರ್ಕಳದಲ್ಲಿ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಿಎಂ ಗೆ ಮನವಿ ಮಾಡಿದರು. ಇದರ ಜೊತೆಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ನರ್ಸಿಂಗ್‌ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ಕ್ರಮ ವಹಿಸಬೇಕು.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ಪ್ರವಾಸೋದ್ಯಮ ಹಾಗೂ ಬಾಹುಬಲಿ ಮಸ್ತಕಾಭಿಷೇಕ ಗಮನದಲ್ಲಿಟ್ಟುಕೊಂಡು 100 ಕೋ.ರೂ ಅನುದಾನ ಬಿಡುಗಡೆ ಮಾಡಬೇಕು. ಆಗುಂಬೆ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಸಿಎಂಗೆ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, “ನಮ್ಮದು ನುಡಿದಂತೆ ನಡೆದ ಸರ್ಕಾರ. ಉದಯ ಕುಮಾರ್ ಶೆಟ್ಟಿ ಹಾಗೂ ಸುನಿಲ್ ಕುಮಾರ್ ಅವರು ನೀಡಿದ ಮನವಿಗಳನ್ನು ಒಮ್ಮೆಗೆ ಈಡೇರಿಸಲು ಸಾಧ್ಯವಾಗದಿದ್ದರೂ, ಹಂತ ಹಂತವಾಗಿ ಖಂಡಿತವಾಗಿ ಪೂರೈಸಲಾಗುವುದು. ಮಸ್ತಕಾಭಿಷೇಕಕ್ಕೆ ಸರ್ಕಾರದ ಸಂಪೂರ್ಣ ಸಹಕಾರವಿರುತ್ತದೆ,” ಎಂದರು. ಮೊಯ್ಲಿ ಅವರ ಕಷ್ಟದ ಜೀವನ ಮತ್ತು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಇತರರಿಗೆ ಮಾದರಿ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ, ಜಯಪ್ರಕಾಶ್ ಹೆಗ್ಡೆ, ಎಂಎಲ್‌ಸಿ ಐವನ್ ಡಿಸೋಜ, ಎಂ.ಎನ್ ರಾಜೇಂದ್ರ ಕುಮಾರ್, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ರಮಾನಾಥ ರೈ, ವಿನಯಕುಮಾರ್ ಸೊರಕೆ, ನಿಟ್ಟೆ ವಿವಿ ಕುಲಪತಿ ಯೋಗೀಶ್ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಿಸಾನ್‌ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ ಸ್ವಾಗತಿಸಿದರು. ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ ಟ್ರಸ್ಟಿ ಕೃಷ್ಣಮೂರ್ತಿ ವಂದಿಸಿದರು.

Leave a Reply

Your email address will not be published. Required fields are marked *