ಉಡುಪಿ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಎಸ್. ಕೋಸಂಬೆ ಅವರು ಇಂದು ನಗರದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕ, ತಾಯಿ ಆರೈಕೆ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದರು.

ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕದಲ್ಲಿ ನವಜಾತ ಶಿಶುಗಳಿಗೆ ಆರೈಕೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದು ಈ ಘಟಕದಲ್ಲಿ ನಿರ್ವಹಿಸುತ್ತಿರುವ ರಿಜಿಸ್ಟರ್ಗಳನ್ನು ಹಾಗೂ ಕಡತಗಳನ್ನು ಪರಿಶೀಲಿಸಿದ ಅವರು, ಸರಕಾರದ ಮಾರ್ಗಸೂಚಿ ಅನ್ವಯ ರಿಜಿಸ್ಟರ್ಗಳನ್ನು ನಿರ್ವಹಿಸಬೇಕು ಎಂದು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು.
ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳ ಕೇಸ್- ಶೀಟ್ ಗಳಲ್ಲಿ ಮಕ್ಕಳ ಹೆಸರು ಅಥವಾ ಅವರ ತಂದೆ-ತಾಯಿಗಳ ಹೆಸರು ನಮೂದಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳ ನಿರ್ವಹಣೆಯನ್ನು ನಿಯಮಾನುಸಾರ ಮಾಡಬೇಕು ಎಂದು ಅಲ್ಲಿನ ವೈದ್ಯರುಗಳಿಗೆ ತಿಳಿಸಿದ ಅವರು, ಸರಿಯಾಗಿ ನಿರ್ವಹಿಸದೇ ಇರುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ಸಹ ಜಿಲ್ಲಾ ಸರ್ಜನ್ ಅವರಿಗೆ ತಿಳಿಸಿದರು.
ತಾಯಿ ಆರೈಕೆ ಘಟಕ ಹಾಗೂ ಹಾಲುಣಿಸುವ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವ್ಯವಸ್ಥೆ ವೈಜ್ಞಾನಿಕವಾಗಿ ಇಲ್ಲದೇ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಕಲ್ಪಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ತಾಯಂದಿರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ ಇಲ್ಲದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಇವೆ. ಸಂಜೆಯ ಒಳಗಾಗಿ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರವನ್ನು ತೆರೆಯಬೇಕೆಂದು ಇಲ್ಲಿನ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ಕೊಡುವುದರ ಜೊತೆಗೆ ದೂರವಾಣಿ ಮೂಲಕ ಎನ್.ಆರ್.ಸಿ ಕೆಂದ್ರದ ಉಪ ನಿರ್ದೇಶಕರಾದ ಕಬಾಡಿ ಅವರೊಂದಿಗೆ ಚರ್ಚಿಸಿದರು.
ಜಿಲ್ಲಾ ಕೇಂದ್ರದಲ್ಲಿ ಉತ್ತಮವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿ ವತಿಯಿಂದ ನಿರ್ಮಿಸಿದ್ದಾರೆ. ಅವರು ಮತ್ತು ಅವರ ಕುಟುಂಬದವರಿಗೆ ಧನ್ಯವಾದಗಳು, ಆದರೆ ಕಳೆದ 4 ವರ್ಷಗಳಿಂದ ಸರಕಾರದ ಸುಪರ್ದಿಗೆ ಈ ಆಸ್ಪತ್ರೆ ವಹಿಸಿದ್ದಾರೆ. ಇಲ್ಲಿನ ಆರೋಗ್ಯ ಸೇವೆಗಳು ಜನರಿಗೆ ಮತ್ತು ಮಕ್ಕಳಿಗೆ ಸದುಪಯೋಗ ಆಗಬೇಕು ಎಂದರು.
ನಗರದ ಆದರ್ಶ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿ, ಅಲ್ಲಿನ ಕಡತಗಳು, ನಿಗದಿತ ನಮೂನೆಯ ರಿಜಿಸ್ಟರ್ಗಳ ನಿರ್ವಹಣೆ, ಸೂಚನಾ ಫಲಕಗಳ ಅಳವಡಿಕೆ, ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದರ ಬಗ್ಗೆ ಪರಿಶೀಲಿಸಿದ ಅವರು, ಸರಕಾರದ ಮಾರ್ಗಸೂಚಿ ಅನ್ವಯ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್ ಮಾಡುವ ಮುನ್ನ ಸರಕಾರದ ಪೋರ್ಟಲ್ ಬಾಲಿಕಾ ಸಾಫ್ಟ್ವೇರ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದರು.
ನಂತರ ಬ್ರಹ್ಮಾವರ ಪೊಲೀಸ್ ಠಾಣೆ, ಹಂದಾಡಿಯ ಗ್ರಾಮ ಪಂಚಾಯತಿ ಕಚೇರಿಗೆ ಅಲ್ಲಿನ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿ, ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಎಲ್ಲಾ ಕಚೇರಿಗಳಲ್ಲಿಯೂ ನಮೂದಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆ ಹಾಗೂ ಶಿಕ್ಷಣ ಕಾರ್ಯಪಡೆಯ ಸಭೆಯನ್ನು ಆಗಿಂದಾಗ್ಗೆ ನಡೆಸಬೇಕೆಂದರು.
ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್, ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಆರ್.ಸಿ.ಎಚ್ ಅಧಿಕಾರಿ ಜ್ಯೋತ್ಸ್ನಾ ಬಿ ಕೆ, ನಿವಾಸಿ ವೈದ್ಯಾಧಿಕಾರಿ ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.
