ಕಾರ್ಕಳ: ಜುಲೈ 19 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕ ಧಾರೆ 2026; ನಾಡಿನ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಭಾಗಿ

ಕಾರ್ಕಳ, ಜು 15: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ, ಈಗಾಗಲೇ ಪುಸ್ತಕ ಮನೆ ಮೂಲಕ ಸಾವಿರಾರು ಹೊಸ ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿರುತ್ತದೆ. ಕನ್ನಡ ಭಾಷೆ, ಸಾಹಿತ್ಯದ ಓದು ಮತ್ತು ಅಭಿವೃದ್ಧಿಯನ್ನು ಧೈಯವನ್ನಾಗಿಟ್ಟುಕೊಂಡು ನಾಡಿನ ಶ್ರೇಷ್ಠ ಲೇಖಕರ ಕೃತಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶದಿಂದ ಕ್ರಿಯೇಟಿವ್ ಪುಸ್ತಕ ಮನೆ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಾಹಿತ್ಯ ಪರಂಪರೆಯ ಮುಂದುವರಿದ ಭಾಗವಾಗಿ ಕ್ರಿಯೇಟಿವ್ ಪುಸ್ತಕಧಾರೆ ಎಂಬ ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತದೆ.

ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಜುಲೈ 19 ಭಾನುವಾರದಂದು ಸಮಯ 10.30 ಕ್ಕೆ ಸರಿಯಾಗಿ ಕ್ರಿಯೇಟಿವ್ ಸಪ್ತಸ್ವರ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಪುಸ್ತಕ ಮನೆಯ ರುವಾರಿ ಅಶ್ವತ್ ಎಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರು ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ “ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ 2026″ ಶಶಿಧರ್ ಹಾಲಾಡಿಯವರ ಕೃತಿ ನದಿ ದಾಟಿ ಬಂದವರು ಪಡೆದುಕೊಂಡಿದೆ. ಇದರೊಂದಿಗೆ ಇತರೆ 10 ಆಯ್ದ ಕೃತಿಗಳಿಗೂ ಗೌರವ ನೀಡಲಿದ್ದೇವೆ ಎಂದರು.

ಈ ಸಾಹಿತ್ಯ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಹಿತ್ಯ, ಓದು, ಸಂಸ್ಕೃತಿ ಹಾಗೂ ಸಮಕಾಲಿನ ಸಾಮಾಜಿಕ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಹಿರಿಯ ಅಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್ ಸೇರಿದಂತೆ ನಾಡಿನ ಹಲವಾರು ಸಾಹಿತಿಗಳು ಬರಹಗಾರರು ಸಾಹಿತ್ಯಾಸಕ್ತರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ, ಚರ್ಚೆ, ಪುಸ್ತಕ ಪರಿಚಯ, ಲೇಖಕರೊಂದಿಗೆ ಸಂವಾದ ಹಾಗೂ ಕನ್ನಡ ಸಾಹಿತ್ಯದ ಸಮಕಾಲಿನ ಬೆಳವಣಿಗೆಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದರು.

ಸಂವಾದ ಕಾರ್ಯಕ್ರಮ:
‘ಯುವಶಕ್ತಿ, ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು’ ಎಂಬ ವಿಷಯದ ಕುರಿತು ವಿಶೇಷ ಸಂವಾದವನ್ನು ಅಜಿತ್ ಹನುಮಕ್ಕನವರ್ ವಿದ್ಯಾರ್ಥಿಗಳೊಂದಿಗೆ ನಡೆಸಲಿದ್ದಾರೆ.

ಭಾವ ನಮನ:
ನಾಡಿನ ಖ್ಯಾತ ಕವಿಗಳು ರಚಿಸಿರುವ ಭಾವಗೀತೆಗಳ ಅಮರ ಗೀತೆಗಳ ಸಂಗೀತ ಯಾನ ಕಾರ್ಯಕ್ರಮವು ರಾಜ್ಯದ ಶ್ರೇಷ್ಠ ಗಾಯಕರಿಂದ
ಈ ಎಲ್ಲಾ ಕಾರ್ಯಕ್ರಮಕ್ಕೆ ಸಾಹಿತ್ಯ ಅಭಿಮಾನಿಗಳಿಗೆ ಉಚಿತ ಪ್ರವೇಶದ ಜೊತೆಗೆ ಪ್ರೀತಿಯ ಆಮಂತ್ರಣವನ್ನು ನೀಡಲಿದ್ದೇವೆ ಎಂದು ಹೇಳಿದರು. ವಿದ್ಯಾರ್ಥಿಗಳು, ಶಿಕ್ಷಕರು, ಓದುಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಪುಸ್ತಕ ಮನೆಯ ರುವಾರಿ ಅಶ್ವತ್ ಎಲ್ ಸಕ್ರೆಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಖ್ಯಾತ ಕಾದಂಬರಿಕಾರ ಅನುಬೆಳ್ಳೆ, ಉಪನ್ಯಾಸಕರಾದ ಚಂದ್ರಕಾಂತ್ ಆಚಾರ್ಯ, ನವೀನ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *