ಕಾರ್ಕಳ: ಏ. 6 ರಂದು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಕಾರ್ಕಳ ರೋಟರಿ ಕ್ಲಬ್‌ಗೆ ಇದೇ ಬರುವ ಏಪ್ರಿಲ್ 6ರಂದು ಸೋಮವಾರ ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಪಾಲಾಕ್ಷ ಅವರ ಅಧಿಕೃತ ಭೇಟಿ ನಡೆಯಲಿದೆ ಎಂದು ರೋಟರಿ ಕ್ಲಬ್ ನ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಹೆಳಿದರು. ಅವರು ಕಾರ್ಕಳ ಪತ್ರಿಕಾಭವನದಲ್ಲಿ‌ ನಡೆದ ಸುದ್ದಿಗೋಷ್ಠಿಯನ್ನುದ್ದೇಸಿಸಿ ಮಾತನಾಡಿದರು.

ಸುಮಾರು 62 ವರ್ಷಗಳ ಇತಿಹಾಸ ಹೊಂದಿರುವ ಹಾಗೂ 130ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಈ ಕ್ಲಬ್ ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ರಸ್ತೆ ಸುರಕ್ಷತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿರುವ ರೋಟರಿ ಕ್ಲಬ್ ಕಾರ್ಕಳ, ಅಶಕ್ತರಿಗೆ ನೆರವಾಗುವ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಕಾರ್ಕಳದಲ್ಲಿರುವ ರೋಟರಿ ಹಾಸ್ಪಿಟಲ್ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ ಎಂದರು.
ಅವರು ಮುಂದುವರೆದು ಗ್ಲೋಬಲ್ ಗ್ರಾಂಟ್ ಮುಖಾಂತರ ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ರಕ್ತ ಬ್ಯಾಂಕ್ ಸ್ಥಾಪನೆಯ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಸರಕಾರದ ಅಂತಿಮ ಅನುಮತಿ ಮಾತ್ರ ಬಾಕಿಯಿದೆ. ಈ ಅನುಮತಿ ಇನ್ನೂ ಒಂದೆರಡು ತಿಂಗಳಲ್ಲಿ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ. ಕ್ಲಬ್ ವತಿಯಿಂದ ಹಲವಾರು ಮನೆಗಳ ನಿರ್ಮಾಣ, ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಸೇರಿದಂತೆ ಅನೇಕ ಸೇವಾ ಕಾರ್ಯಗಳು ಕೈಗೊಳ್ಳಲಾಗಿದೆ. ಇದುವರೆಗೆ ಸುಮಾರು 15 ಗ್ಲೋಬಲ್ ಗ್ರಾಂಟ್ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಈ ವರ್ಷ ನಿಟ್ಟೆ ಗಜರಿಯಾ ಆಸ್ಪತ್ರೆಗಾಗಿ ಮತ್ತೊಂದು ಗ್ಲೋಬಲ್ ಗ್ರಾಂಟ್ ಮೂಲಕ ಸುಮಾರು 45 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಕಾಟ್ರಾಕ್ಟ್ ಆಪರೇಟಿಂಗ್ ಯೂನಿಟ್ ನೀಡುವ ಯೋಜನೆ ಅಂತಿಮ ಹಂತದಲ್ಲಿದೆ.

ಜಿಲ್ಲಾ ಗವರ್ನರ್ ಅವರ ಭೇಟಿ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಇದರಡಿ ಕಾಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚು-ಡೆಸ್ಕ್, ಕಲಂಬಾಡಿ ಪದವು ಶಾಲೆಗೆ ಪ್ರೊಜೆಕ್ಟರ್, ಅಂಗನವಾಡಿಗಳಿಗೆ ಅಗತ್ಯ ಪರಿಕರಗಳು, ಬಜಗೋಳಿ ಶಾಲೆಗೆ ಮೇಲಾವಣಿ ವ್ಯವಸ್ಥೆ, ಶಿರ್ಲಾಲು ಶಾಲೆಗೆ ಸೌಂಡ್ ಬಾಕ್ಸ್, ಮುಂದ್ರಿ ಹಾಗೂ ದುರ್ಗಾ ತೆಳ್ಳಾರು ಶಾಲೆಗಳಿಗೆ ಕುಡಿಯುವ ನೀರಿನ ಘಟಕಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ವಿವಿಧ ಸ್ಥಳಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ ನಡೆಯಲಿದೆ.

ಇದರೊಂದಿಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ರೋಟರಿ ಪಾರ್ಕ್ ಉನ್ನತೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಕಲಂಬಾಡಿ ಪದವು ಶಾಲೆಗೆ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಚತುರ್ಮುಖ ಬಸದಿ ಸಮೀಪದ ನಾಗರಬಾವಿ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯೂ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ರೋಟರಿ‌ ಕ್ಲಬ್ ಅದ್ಯಕ್ಷ ಜಾನ್ ಡಿಸಿಲ್ವಾ, ಇಕ್ಬಲ್ ಅಹಮದ್, ಚೇತನ್ ನಾಯಕ್, ವಸಂತ ಎಂ, ವಿಜೆಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *