ಉಡುಪಿ: ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನ ರಾಮ್ ಅವರ 119 ನೇ ಜಯಂತಿ ಹಾಗೂ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿ ಹಾಗು ಸುಸಂಘಟಿತವಾಗಿ ಆಚರಿಸಲು ಅಗತ್ಯವಿರುವ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 119 ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ 5 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಆಚರಿಸಲಾಗುವುದು. ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ 14 ರಂದು ಬೆಳಗ್ಗೆ 10 ಕ್ಕೆ ನಗರದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ಅಥವಾ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುತ್ತಿದ್ದು, ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದರು.
ಬಾಬು ಜಗಜೀವನರಾಂ ಮತ್ತು ಅಂಬೇಡ್ಕರ್ ಜಯಂತಿ ಆಚರಣೆಯ ದಿನಗಳಂದು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ನಿಯೋಜಿಸಬೇಕು. ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಾಗ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ, ಕಾರ್ಯಕ್ರಮಕ್ಕೆ ಅತಿಥಿ ಗಣ್ಯರನ್ನು, ಸಮುದಾಯದವರನ್ನು ಆಹ್ವಾನಿಸಬೇಕು. ಕಾರ್ಯಕ್ರಮಗಳಿಗೆ ಅನುಗುಣವಾಗುವಂತೆ ವೇದಿಕೆಯನ್ನೂ ಸಹ ಸಿದ್ದತೆ ಮಾಡಿಕೊಳ್ಳಬೇಕು ಎಂದ ಅವರು, ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅರ್ಹ ಚರ್ಮ ಕುಶಲಕರ್ಮಿಗಳನ್ನು ಗುರುತಿಸಿ, ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ದಿನಾಚರಣೆಯ ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಬುದ್ಧ ವಂದನೆ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಗರಸಭೆಯ ಇಬ್ಬರು ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಜೊತೆಗೆ ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ನಿಲಯಾರ್ಥಿಗಳನ್ನು ಹಾಗೂ ಕೊರಗ ಸಮುದಾಯದ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಯನ್ನು ಕಡ್ಡಾಯವಾಗಿ ಆಚರಿಸಬೇಕು ಎಂದ ಅವರು, ಆದಿ ಉಡುಪಿಯಲ್ಲಿ ನಿರ್ಮಾಣ ಮಾಡಲಾಗಲಿರುವ ನೂತನ ಡಾ.ಅಂಬೇಡ್ಕರ್ ಭವನದ ಶಂಕುಸ್ಥಾಪನೆ ನೆರವೇರಿಸಲು ಅಗತ್ಯವಿರುವ ವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರು ವಿಶ್ವ ಮಾನ್ಯರಾಗಿದ್ದು, ಒಂದೇ ಸಮುದಾಯದವರಿಗೆ ಸೀಮಿತವಾದ ವ್ಯಕ್ತಿ ಅಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಸಮಾನತೆಯಿಂದ ಬದುಕಲು ಅಡಿಪಾಯ ಹಾಕಿದ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಮುದಾಯದ ಮುಖಂಡರುಗಳು, ಸಾರ್ವಜನಿಕರು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದರೊಂದಿಗೆ ಎರಡೂ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಇಲಾಖಾವಾರು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಹಂಚಿಕೆ ಮಾಡಲಾಯಿತು.
ಸಭೆಯಲ್ಲಿ ಎ.ಎಸ್.ಪಿ ಸುಧಾಕರ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಎಂ., ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
