ಉಡುಪಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅತಿ ವಂ| ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣ

ಉಡುಪಿ, ಏಪ್ರಿಲ್ 20: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ವಂ| ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಸೋಮವಾರ ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನಾಲಯದ ಕಾಲೇಜು ಮೈದಾನದಲ್ಲಿ ನಡೆದ ಪವಿತ್ರ ಸಮಾರಂಭದಲ್ಲಿ ಅಭಿಷಿಕ್ತಗೊಳಿಸಿ ಪೀಠಾರೋಹಣಗೊಳಿಸಲಾಯಿತು.

ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರು ಮುಖ್ಯ ಅಭಿಷೇಕಕರಾಗಿ ಧರ್ಮಾಧ್ಯಕ್ಷರ ಅಭಿಷೇಕದ ವಿಧಿ ವಿಧಾನ ನೆರವೇರಿಸಿದರು. ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿ ಭಾಗವಹಿಸಿದರು. ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ, 30ಕ್ಕೂ ಹೆಚ್ಚು ಧರ್ಮಾಧ್ಯಕ್ಷರು, 300 ಧರ್ಮಗುರುಗಳು, ಅಷ್ಟೇ ಸಂಖ್ಯೆಯ ಧರ್ಮಭಗಿನಿಯರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6,000 ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಧರ್ಮಾಧ್ಯಕ್ಷರ ಅಭಿಷೇಕ ವಿಧಿಯಲ್ಲಿ ಪೋಪ್ ಅವರ ಅಧಿಕೃತ ನೇಮಕಾತಿ ಪತ್ರವನ್ನು ವಾಚಿಸಲಾಯಿತು. ನಂತರ ಪವಿತ್ರ ಧಾರ್ಮಿಕ ವಿಧಿಗಳೊಂದಿಗೆ ಧರ್ಮಾಧ್ಯಕ್ಷರ ಅಭಿಷೇಕ ನೆರವೇರಿತು. ನೂತನ ಧರ್ಮಾಧ್ಯಕ್ಷರ ಶಿರವನ್ನು ಪವಿತ್ರ ತೈಲದಲ್ಲಿ ಅಭಿಷಿಕ್ತಗೊಳಿಸಿದ ಬಳಿಕ ಪವಿತ್ರ ಬೈಬಲ್ ಶಿರ ಮೇಲಿರಿಸಿ ಪ್ರಾರ್ಥಿಸಲಾಯಿತು. ಬಳಿಕ ಅಧಿಕಾರದ ಉಂಗುರ ಧಾರಣೆ, ಶಿರವಸ್ತ್ರ ದಂಡವನ್ನು ಹಸ್ತಾಂತರಿಸಿ ಅಧಿಕೃತ ಪೀಠದಲ್ಲಿ ಕುಳ್ಳಿರಿಸಲಾಯಿತು. ಇದರೊಂದಿಗೆ ನೂತನ ಧರ್ಮಾಧ್ಯಕ್ಷರನ್ನಾಗಿ ಪೀಠಾರೋಹಣ ನಡೆಸಿ ಘೋಷಣ ಮಾಡಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಸ್ಟೀವನ್ ಡಿ’ಸೋಜಾ ಅವರು ಪವಿತ್ರ ಕ್ಯಾಥೋಲಿಕ್ ಚರ್ಚ್ನ ಪವಿತ್ರ ತಂದೆಯವರ ಅಧಿಕೃತ ಪತ್ರವನ್ನು ವಾಚಿಸಿದರು.

ಮುಖ್ಯ ಅಭಿಷೇಕಕರರು, ಸಹ ಅಭಿಷೇಕಕರರು, ಇತರ ಧರ್ಮಾಧ್ಯಕ್ಷರು ಹಾಗೂ ಪ್ರತಿನಿಧಿಗಳು ಶಾಂತಿಯ ಸಂಕೇತವನ್ನು ವಿನಿಮಯ ಮಾಡಿಕೊಂಡರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾಲ್ ಸಲ್ಡಾನ್ಹಾ ತಮ್ಮ ಪ್ರವಚನದಲ್ಲಿ, “ತಂದೆಯ ಆಶೀರ್ವಾದ ಅಮೂಲ್ಯ. ಇಂದಿನ ಸಮಾಜದಲ್ಲಿ ಹಲವಾರು ಕುಟುಂಬಗಳಲ್ಲಿ ತಂದೆಯ ಉಪಸ್ಥಿತಿ ಕಾಣುವುದಿಲ್ಲ. ದೇವರ ಕುಟುಂಬದಲ್ಲಿ ಧರ್ಮಾಧ್ಯಕ್ಷರು ಪರಮಪಿತನ ಪ್ರತಿನಿಧಿಗಳು. ವಂ. ಲೆಸ್ಲಿ ಅವರ ಮೂಲಕ ದೇವರು ಉಡುಪಿ ಧರ್ಮಪ್ರಾಂತ್ಯಕ್ಕೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾರೆ. ಧರ್ಮಾಧ್ಯಕ್ಷರು ದೇವರ ವಾಕ್ಯವನ್ನು ಭಕ್ತರಲ್ಲಿ ಬಿತ್ತಬೇಕು ಹಾಗೂ ಎಲ್ಲರನ್ನು ಪ್ರೀತಿಯಿಂದ ನಡೆಸಬೇಕು. ಸುವಾರ್ತೆಯ ಸಾರವನ್ನು ಸಾರುವುದು ಪ್ರಮುಖ ಕರ್ತವ್ಯ” ಎಂದು ಹೇಳಿದರು.

ಪವಿತ್ರ ವಿಧಿವಿಧಾನದ ಬಳಿಕ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಧರ್ಮಪ್ರಾಂತ್ಯದ ಪರವಾಗಿ ಅಧಿಕೃತವಾಗಿ ಪ್ರೇಷಿತ ಆಡಳಿತಾಧಿಕಾರಿ ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ಧರ್ಮಾಧ್ಯಕ್ಷರನ್ನು ಗೌರವಿಸಿದರು.

ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನದಲ್ಲಿ ಧರ್ಮಾಧ್ಯಕ್ಷರು ಭಕ್ತರನ್ನು ಮಾರ್ಗದರ್ಶನ ಮಾಡುವುದಕ್ಕೂ ಅವರ ಪೋಷಣೆಗಾಗಿ ವಿಶೇಷವಾಗಿ ಆಯ್ಕೆಗೊಂಡವರು. ಧರ್ಮಸಭೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು , ಧರ್ಮಗುರುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ನೂತನ ಧರ್ಮಾಧ್ಯಕ್ಷರು ಇಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಹೊಣೆಗಾರಿಕೆ ಇದ್ದು ಉಡುಪಿ ಧರ್ಮಕ್ಷೇತ್ರ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿ ಎಂದು ಶುಭಹಾರೈಸಿದರು.

ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ತಮ್ಮ ಸಂದೇಶದಲ್ಲಿ ಅಪೋಸ್ತಲರ ಉತ್ತರಾಧಿಕಾರಿಗಳಾಗಿ ಹೊತ್ತಿರುವ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಾಧ್ಯಕ್ಷ ಲೆಸ್ಲಿ ಅವರ ಸಮೃದ್ಧ ಶೈಕ್ಷಣಿಕ ಹಿನ್ನೆಲೆ, ಪಾಸ್ಟರಲ್ ಅನುಭವ ಹಾಗೂ ಸರಳ ಜೀವನಶೈಲಿ ಧರ್ಮಪ್ರಾಂತ್ಯವನ್ನು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಏಕತೆಯ ದಿಕ್ಕಿನಲ್ಲಿ ಮುನ್ನಡೆಸಲಿದೆ ಎಂದು ತಿಳಿಸಿದರು.
ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ನೂತನ ಧರ್ಮಾಧ್ಯಕ್ಷ ಅತೀ ವಂ|ಡಾ|ಲೆಸ್ಲಿ ಡಿಸೋಜಾ ಮಾತನಾಡಿ ದೇವರಿಗೆ, ತಮ್ಮ ಕುಟುಂಬಕ್ಕೆ, ಗುರುಗಳಿಗೆ ಹಾಗೂ ಭಕ್ತರಿಗೆ ಆಳವಾದ ಕೃತಜ್ಞತೆ ಸಲ್ಲಿಸಿದರು. ಮುಂದಿರುವ ಸವಾಲುಗಳನ್ನು ವಿನಯದಿಂದ ಒಪ್ಪಿಕೊಂಡ ಅವರು ದೈವಿಕ ಕೃಪೆಯ ಮೇಲೆ ನಂಬಿಕೆ ವ್ಯಕ್ತಪಡಿಸಿದರು.

ನಾನು ನನ್ನ ಶಕ್ತಿಯಿಂದ ಅಲ್ಲ, ಕರೆಯುವ ಮತ್ತು ನಿಲ್ಲಿಸುವ ದೇವರ ಮೇಲಿನ ನಂಬಿಕೆಯಿಂದ ಬರುತ್ತಿದ್ದೇನೆ. ನಾವು ಎಲ್ಲರೂ ಸೇರಿ ಪ್ರೀತಿ, ಸೇವೆ ಮತ್ತು ಸತ್ಯದ ಮೇಲೆ ನೆಲೆಗೊಂಡ ಚರ್ಚ್ನ್ನು ನಿರ್ಮಿಸೋಣ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಸ್ಪರ ಒಂದೇ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗೋಣ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಧರ್ಮಪ್ರಾಂತ್ಯಕ್ಕೆ ನೀಡಿದ ಸೇವೆಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ ಸುವರ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಮಾಜಿ ಶಾಸಕರಾದ ರಘುಪತಿ ಭಟ್, ಜೆ ಆರ್ ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಮ್ ಎ ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಸಹಿತ ಹಲವು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ವಂ| ರೋಶನ್ ಡಿಸೋಜಾ ವಂದಿಸಿದರು. ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮದ ನಿರ್ವಹಣೆಯನ್ನು ವಂ| ವಿಲ್ಸನ್ ಡಿಸೋಜಾ, ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ವಂ| ಡೆನಿಸ್ ಡೆಸಾ ನೆರವೇರಿಸಿದರು.

Leave a Reply

Your email address will not be published. Required fields are marked *