ಧಾರ್ಮಿಕ ವಿಧಿವಿಧಾನಗಳೊಂದಿಗೆ ಸರ್ವಜೀವ ದಯಾ ಅಷ್ಟಮಿ ಆಚರಣೆ
ಮೂಡುಬಿದಿರೆ: ಶ್ರೀ ಜೈನ ಮಠ ಹಾಗೂ ಮೂಡುಬಿದಿರೆಯ ಪ್ರಸಿದ್ಧ 18 ಬಸದಿ ದರ್ಶನಕ್ಕಾಗಿ ಪ್ರತಿವರ್ಷದಂತೆ ಈ ಬಾರಿಯೂ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಜೈನ ಯಾತ್ರಾರ್ಥಿಗಳು ಸೋಮವಾರ ಮೂಡುಬಿದಿರೆಗೆ ಆಗಮಿಸಿ, ಜಿನೇಂದ್ರ ಭಗವಂತನ ಜಿನವಾಣಿ ಸ್ವರೂಪವಾದ ಮೂಲ ಷಟ್ಖಂಡ ಆಗಮ ದರ್ಶನ ಹಾಗೂ ಗುರು ಬಸದಿ ಸೇರಿದಂತೆ ವಿವಿಧ ಬಸದಿ ದರ್ಶನ ಮಾಡಿ ಪುಣ್ಯಭಾಗಿಗಳಾದರು.
ಬೆಳಿಗ್ಗೆ 5.30ರಿಂದ 8 ಗಂಟೆಯವರೆಗೆ ಶ್ರೀ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತವೃಂದದೊಂದಿಗೆ 18 ಬಸದಿ ದರ್ಶನ ನೆರವೇರಿತು. ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ವಯನಾಡು, ಗುಜರಾತ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕದ ವಿವಿಧ ಭಾಗಗಳು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ ಶ್ರಾವಕ-ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸದಿ ದರ್ಶನ ಮಾಡಿದರು.


ಬೆಳಿಗ್ಗೆ 10.30ಕ್ಕೆ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರಿಂದ ಮೂಡುಬಿದಿರೆ ಕ್ಷೇತ್ರದ ಪರಿಚಯ, ಪೂಜಾ ಕಾರ್ಯಕ್ರಮ ಹಾಗೂ ಶಾಸ್ತ್ರದಾನ ಪುಸ್ತಕ ಬಿಡುಗಡೆ ನೆರವೇರಿತು. ಪ್ರತಿವರ್ಷದ ಪರಂಪರೆಯಂತೆ ಈ ಬಾರಿಯೂ ಧಾರ್ಮಿಕ ವಿಧಿವಿಧಾನಗಳಿಗೆ ವಿಶೇಷ ಒತ್ತು ನೀಡಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಟಾರಕ ಸ್ವಾಮೀಜಿಯವರು, “ಸರ್ವರಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವನ್ನು ಸಾರುವ ಸರ್ವಜೀವ ದಯಾಪರ ಆಶಯವೇ ಸರ್ವಜೀವ ದಯಾ ಅಷ್ಟಮಿಯ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು. ಬೆಟ್ಕೇರಿ ಸುಧೀಶ್ ಬಸದಿ ಮುಕ್ತೇಸರರು ಶಾಸ್ತ್ರದಾನವಾಗಿ ನೀಡಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಶೆಟ್ಟಿ ಸುದೇಶ್ ಹಾಗೂ ಆದರ್ಶ್ ಕೊಂಡೆ ಮನೆತನದ ಬಸದಿ ಮುಕ್ತೇಸರರು ಉಪಸ್ಥಿತರಿದ್ದರು.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಹಾವೀರ ಭವನದಲ್ಲಿ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಜಿತ್ ಅಳಿಯೂರು ಬಳಗದವರು ಹಾಗೂ ಸ್ಥಳೀಯ ಜೈನ ಬಾಂಧವರ ಸಹಕಾರದೊಂದಿಗೆ ಅನ್ನಸಂತರ್ಪಣೆ ನೆರವೇರಿತು.
ಅಪರಾಹ್ನ 3 ಗಂಟೆಯಿಂದ ಸಿದ್ಧಕೂಟದಲ್ಲಿ ಸರ್ವಪೂಜೆ ನಡೆಯಿತು. ಸಂಜೆ 4 ಗಂಟೆಗೆ ಗುರು ಬಸದಿ, ಲೆಪ್ಪದ ಬಸದಿ ಹಾಗೂ ಬೆಂಕಿ ಬಸದಿ ಗಳಲ್ಲಿ ಕ್ಷೀರಾಭಿಷೇಕ ಮತ್ತು ನವರಾತ್ರಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ವರದಿ–ಸಂಗ್ರಹ: ಸಂಜಯಂತ ಕುಮಾರ್ ಶೆಟ್ಟಿ
