ಕಾರ್ಕಳ: ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಜೋಡುರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂಧೂರ” ಏ. 26 ರಂದು ಭಾನುವಾರ ಲೋಕಾರ್ಪಣೆಗೊಂಡಿತು. ಹಾಗೂ ಸೊಸೈಟಿಯ ತ್ರಿಂಶತಿ ಸಂಭ್ರಮ ಕಾರ್ಯಕ್ರಮವು ಜರುಗಿತು.



ಗೋವಾದ ಕೈವಲ್ಯ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಯವರು ನೂತನ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ಕೈಜೋಡಿಸಿರುವುದು ಶ್ಲಾಘನೀಯವಾಗಿದ್ದು ಹಾಗೂ ಹೊಸ ಕಟ್ಟಡದ ಲೋಕಾರ್ಪಣೆ ಸಮಾಜಕ್ಕೆ ಅತ್ಯಂತ ಆನಂದದ ಕ್ಷಣವಾಗಿದೆ ಎಂದರು. ಇದು ಸಮಾಜದ ಬೆಳವಣಿಗೆಗೆ ಬುನಾದಿಯಾಗಿದ್ದು, ಸಹಯೋಗವೇ ಸಮಾಜದ ಶಕ್ತಿ ಹಾಗೂ ಸೇವೆಯ ಮೂಲವಾಗಿದೆ. ಸಮಾಜದ ಸೇವೆಯೇ ಮುಖ್ಯ ಉದ್ದೇಶವಾಗಿರಬೇಕು ಎಂದರು.
ರಾಜಾಪುರ ಸೊಸೈಟಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದ್ದು, ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿದರು. ಸಹಕಾರ ತತ್ವದ ಮೂಲಕ ಸೊಸೈಟಿಯ ಸರ್ವತೋಮುಖ ಬೆಳವಣಿಗೆಗೆ ಸಮಾಜದ ಬೆಂಬಲ ಸ್ಪಷ್ಟವಾಗಿದ್ದು, ಈ ಕಟ್ಟಡವೇ ಅದಕ್ಕೆ ಸಾಕ್ಷಿಯಾಗಿದೆ. ಸಂಸ್ಥೆ ಇನ್ನಷ್ಟು ಬೆಳೆಯಲಿ, ಕೃಷ್ಣನ ಪ್ರೇರಣೆ ದೊರೆಯಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು ಅವರು 1996ರಲ್ಲಿ ಕಡ್ತಲ ರವೀಂದ್ರ ನಾಯಕ್ ಅವರೊಂದಿಗೆ ಭದ್ರ ಬುನಾದಿ ಹಾಕಿ ಆರಂಭಿಸಿದ ಸಂಸ್ಥೆ ಇಂದು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು. ಕೇಂದ್ರ ಕಚೇರಿ ಕಟ್ಟಡ, 2016ರ ಸಭಾಭವನ ಹಾಗೂ 2026 ರ “ಸಹಕಾರ ಸಿಂಧೂರ” ಸಂಕೀರ್ಣ ನಿರ್ಮಾಣ ಸಾಧನೆಗಳನ್ನು ವಿವರಿಸಿದರು. ಕಟ್ಟಡದ ಸುಮಾರು 97% ಭಾಗ ಈಗಾಗಲೇ ಬಾಡಿಗೆಗೆ ನೀಡಲಾಗಿದ್ದು, ಆದಷ್ಟು ಬೇಗ ಭಾರತ್ ಸಿನೆಮಾ ಕೂಡ ಆರಂಭವಾಗಲಿದೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರು ಹೇಳಿದರು. ಏಳು ಶಾಖೆಗಳ ಮೂಲಕ ಕೋಟ್ಯಾಂತರ ವ್ಯವಹಾರ ನಡೆಸುತ್ತಿರುವ ಸಂಸ್ಥೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಹೇಳಿದರು. ಮುಂದಿನ ಮಹಿಳೆಯರಿಗೆ ನೀಡಿದ ಸಾಲಗಳಲ್ಲಿ 99.9% ಮರುಪಾವತಿ ಕಂಡುಬರುತ್ತದೆ ಹಾಗೂ ಸಂಸ್ಥೆಗೆ ಅನುದಾನ ನೀಡಲು ಸಹಕರಿಸುವುದಾಗಿ ಭರವಸೆ ನೀಡಿದರು.
30 ವರ್ಷಗಳಲ್ಲಿ ಸೊಸೈಟಿ ಉತ್ತಮ ಹೆಸರು ಗಳಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸಹಕಾರಿ ಸಂಸ್ಥೆಗಳು ಆರ್ಥಿಕ ಕ್ಷೇತ್ರದಲ್ಲಿ ಶಕ್ತಿಯುತವಾಗುತ್ತಿದ್ದು, 254 ಕೋಟಿ ಠೇವಣಿ ಸಂಗ್ರಹಿಸಿರುವುದು ಸಾಧನೆ ಎಂದು ಹೇಳಿದರು.
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸೊಸೈಟಿ ನಿರಂತರವಾಗಿ ಹೊಸ ಸಾಧನೆಗಳನ್ನು ಸಾಧಿಸುತ್ತಿದ್ದು, ಜೋಡುರಸ್ತೆ ಭಾಗದ ಅಭಿವೃದ್ಧಿಗೂ ಪೂರಕವಾಗಿದೆ ಎಂದರು. ಕೊರೊನಾ ಕಾಲದಲ್ಲೂ ಮಾಡಿದ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, “ಸಹಕಾರ ಸಿಂಧೂರ” ಸಂಕೀರ್ಣ ಹೊಸ ಹೆಜ್ಜೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ರವೀಂದ್ರ ಆಚಾರ್ಯ, ನಾಗರಾಜ ಆಚಾರ್ಯ, ಸತೀಶ್ ಪ್ರಭು, ಅನೀಶ್ ತೆಂಡುಲ್ಕರ್, ದಾಮೋದರ ಆಚಾರ್ಯ, ವಿಕ್ರಂ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ, ಸಮಾಜ ಸೇವಕ ಮುನಿಯಾಲು ಉದಯ ಕುಮಾರ್ ಶೆಟ್ಟಿ,ಉಡುಪಿ ಜಿಲ್ಲೆಯ ಸಹಕಾರಿ ಯೂನಿಯನ್ ನ ಅಧ್ಯಕ್ಷರು ಇಂದ್ರಾಳಿ ಜಯಕರ್ ಶೆಟ್ಟಿ, ಮಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಉದ್ಯಮಿ ಸಂತೋಷ್ ವಾಗ್ಳೆ, ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಕುಂದಾಪುರ ವಿಭಾಗದ ಸಹಕಾರಿ ಸಂಘಗಳ ನಿಬಂಧಕ ಸುಧೀರ್ ಕುಮಾರ್, ಅಡಪಾಡಿ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತಸರ ಚೇತನ್ ನಾಯಕ್, ಸಿಇಒ ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.
ಕೀರ್ತಿ ಶೆಣೈ ಪ್ರಾರ್ಥಿಸಿದರು. ನೀರೆ ರವೀಂದ್ರ ನಾಯಕ್ ಸ್ವಾಗತಿಸಿದರು. ಸಿಇಒ ಸುರೇಂದ್ರ ನಾಯಕ್ ಧನ್ಯವಾದ ಸಲ್ಲಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
