
ಲೇಖನ: ನವೀನ ಗೋಪಾಲಸಾ ಹಬೀಬ (M.A., B.Ed.)
ಖ್ಯಾತ ಚಿಂತಕರು, ಪ್ರೇರಕ ಭಾಷಣಕಾರರು
ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂದು ನಾವು ನಮ್ಮ ದಿನಚರಿಯನ್ನಾಗಲಿ ಅಥವಾ ಮನಸ್ಥಿತಿಯನ್ನಾಗಲಿ ನಮ್ಮ ಹೆತ್ತವರ, ಆಪ್ತರ ಇಲ್ಲವೇ ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತೇವೋ ಇಲ್ಲವೋ ಗೊತ್ತಿಲ್ಲ; ಆದರೆ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್, ಇನ್‌ಸ್ಟಾಗ್ರಾಮ್‌ಗಳಂತಹ ಜಾಲತಾಣಗಳಲ್ಲಿ ನಿರಂತರವಾಗಿ ‘ಸ್ಟೇಟಸ್’ ಅಪ್ಡೇಟ್ ಮಾಡುತ್ತಲೇ ಇರುತ್ತೇವೆ. ಅಮ್ಮ, ಅಪ್ಪ, ತಮ್ಮ, ತಂಗಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರಿಂದ ಹಿಡಿದು, “ನಾವು ಕುಟುಂಬ ಸಮೇತರಾಗಿ ಪ್ರವಾಸ ಹೊರಟಿದ್ದೇವೆ” ಎನ್ನುವವರೆಗೂ ನಮ್ಮ ಮನೆಯ ಇಂಚಿಂಚೂ ಮಾಹಿತಿಯನ್ನು ಇಡೀ ಊರಿಗೆ, ರಾಜ್ಯಕ್ಕೆ ತಿಳಿಯುವಂತೆ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇವೆ.
ಇದೇ ಜಾಲತಾಣಗಳಿಂದ ಅದೆಷ್ಟೋ ಬಾಲ್ಯದ ಸ್ನೇಹಿತರು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ, ದೂರದ ಸಂಬಂಧಿಕರು ಮನೆಯಲ್ಲೇ ಕುಳಿತು ಪರಸ್ಪರ ಮುಖ ನೋಡಿ ಮಾತನಾಡುವಂತಾಗಿದೆ. ಇಂತಹ ಹತ್ತಾರು ಸಕಾರಾತ್ಮಕ ಉಪಯೋಗಗಳು ಇವುಗಳಿಂದ ಇವೆ ಎಂಬುದು ಸುಳ್ಳಲ್ಲ. ಆದರೆ, ಇವೆಲ್ಲವುಗಳ ನಡುವೆ ಕೆಲವು ಆತಂಕಕಾರಿ ಸಂಗತಿಗಳು ಸಹ ಇತ್ತೀಚೆಗೆ ಗೋಚರಿಸುತ್ತಿವೆ…
ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ವಿಜ್ಞಾನದ ಅದ್ಭುತ ಕೊಡುಗೆಗಳು ಎಂಬುದರಲ್ಲಿ ಸಂಶಯವಿಲ್ಲ. ಇಂದು ಜಾಲತಾಣಗಳ ಸಹಾಯದಿಂದ ಎಷ್ಟೋ ಹಳ್ಳಿಗಳ ಪ್ರತಿಭೆಗಳು ಇಡೀ ರಾಜ್ಯಕ್ಕೆ ಪರಿಚಿತರಾಗಿ, ಅಪಾರ ಜನಪ್ರಿಯತೆ ಗಳಿಸಿದ್ದಾರೆ. ನಮಗೆ ದಿನನಿತ್ಯ ದೇಶ-ವಿದೇಶಗಳ ಅಸಂಖ್ಯಾತ ಮಾಹಿತಿ, ಮನರಂಜನೆ ಇವುಗಳಿಂದ ಸಿಗುತ್ತದೆ. ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಇಂದಿನ ಸಮಾಜದಲ್ಲಿ ಇವುಗಳ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ನಾವು ಇವುಗಳನ್ನು ಬಳಸುವಾಗ ಒಮ್ಮೆಯಾದರೂ ಯೋಚಿಸುತ್ತಿದ್ದೇವಾ?

ಸಾಮಾಜಿಕ ಜಾಲತಾಣ ಬಳಸುವ ಮುನ್ನ ಈ ಮೂರು ಪ್ರಶ್ನೆಗಳ ಬಗ್ಗೆ ತಪ್ಪದೇ ಯೋಚಿಸಿ:
1. ನನ್ನ ಖಾಸಗಿ ವಿಷಯಗಳ ಗೌಪ್ಯತೆ (Privacy) ಏನಾಗುತ್ತಿದೆ?
ಇದು ಅತ್ಯಂತ ಪ್ರಮುಖವಾದ ಪ್ರಶ್ನೆ. ನಾವು ಜಾಗೃತಿ ವಹಿಸದಿದ್ದರೆ ನಮ್ಮ ಪ್ರೊಫೈಲ್ ಮಾಹಿತಿ, ಫೋಟೋಗಳು, ವೈಯಕ್ತಿಕ ಸಂದೇಶಗಳು, ಫೋನ್ ನಂಬರ್, ವಾಸಸ್ಥಳ, ಕಚೇರಿ ಅಥವಾ ಶಾಲೆಯ ವಿವರಗಳು ಸೇರಿದಂತೆ ನಾವು ಮನೆಯಲ್ಲಿ ಯಾವ ಸಮಯದಲ್ಲಿ ಇರುತ್ತೇವೆ, ಯಾವ ಸಮಯದಲ್ಲಿ ಇರುವುದಿಲ್ಲ ಎಂಬ ವಿಷಯಗಳೂ ಬಹಿರಂಗವಾಗಿಬಿಡುತ್ತವೆ.
“ನಾವು ಇಷ್ಟು ದಿನಗಳ ಕಾಲ ಪ್ರವಾಸಕ್ಕೆ ಹೋಗುತ್ತಿದ್ದೇವೆ” ಎಂದು ನಿಮ್ಮ ವಿಳಾಸದೊಂದಿಗೆ ಪೋಸ್ಟ್ ಹಾಕುವುದು, ಪರೋಕ್ಷವಾಗಿ ಕಳ್ಳರಿಗೆ “ನಾವು ಮನೆಯಲ್ಲಿಲ್ಲ, ಬನ್ನಿ” ಎಂದು ಸ್ವತಃ ಆಮಂತ್ರಣ ನೀಡಿದಂತೆ!
ನಿಮ್ಮ ಜನ್ಮದಿನಾಂಕ, ಇಮೇಲ್, ಮೊಬೈಲ್ ನಂಬರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ, ಸೈಬರ್ ಅಪರಾಧಿಗಳು ನಿಮ್ಮ ಹೆಸರಲ್ಲೇ ನಕಲಿ ಖಾತೆ (Fake ID) ಸೃಷ್ಟಿಸಿ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದು ಅಥವಾ ಬ್ಲ್ಯಾಕ್‌ಮೇಲ್ ಮಾಡಬಹುದು. ಆದ್ದರಿಂದ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
2. ಜಾಲತಾಣಗಳಿಂದ ನಮಗೆ ಎಂತಹ ಮಿತ್ರರು ಸಿಗುತ್ತಿದ್ದಾರೆ?
“ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಸಹವಾಸಿ ಸಂಕಟಪಡುವನು” ಎಂಬ ಮಾತು ಅಕ್ಷರಶಃ ಸತ್ಯ. ಜಾಲತಾಣಗಳಲ್ಲಿ ಯಾರೊಟ್ಟಿಗೆ ಸ್ನೇಹ ಬೆಳೆಸಬೇಕು ಎನ್ನುವ ವಿವೇಚನೆ ನಮಗಿರಬೇಕು. ಫೇಸ್‌ಬುಕ್‌ನಲ್ಲಿ ಕೇವಲ ತಮ್ಮ ಫ್ರೆಂಡ್ ಲಿಸ್ಟ್ ಸಂಖ್ಯೆ ದೊಡ್ಡದಾಗಿಸಿಕೊಳ್ಳಲು ಮುಖ ಪರಿಚಯವೇ ಇಲ್ಲದ ನೂರಾರು ಅಪರಿಚಿತರ ರಿಕ್ವೆಸ್ಟ್‌ಗಳನ್ನು ಕನ್ಫರ್ಮ್ ಮಾಡುವ ಜನರಿದ್ದಾರೆ. ಆದರೆ ಬುದ್ಧಿವಂತರು ತಮಗೆ ಪರಿಚಿತರಾದವರ ರಿಕ್ವೆಸ್ಟ್‌ಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ.
ಅಪರಿಚಿತರ ಸ್ನೇಹ ಯಾವಾಗಲೂ ಅಪಾಯಕಾರಿ. ಜಾಲತಾಣಗಳಲ್ಲಿ ಭಾವನೆಗಳೊಂದಿಗೆ ಆಟವಾಡಿ ಮೋಸ ಮಾಡುವವರೇ ಹೆಚ್ಚು. ಕೆಲವರು ನಿಮ್ಮ ಪ್ರೊಫೈಲ್ ಹಾಗೂ ಪೋಸ್ಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ಆಸಕ್ತಿ-ಅಭಿರುಚಿಗಳನ್ನು ಅರಿತುಕೊಂಡು, ಸ್ನೇಹದ ನಾಟಕವಾಡಿ ವಂಚಿಸುತ್ತಾರೆ. ಆದ್ದರಿಂದ ನಿಮ್ಮ ಖಾತೆಯ ಸೆಟ್ಟಿಂಗ್ಸ್ ಅನ್ನು ‘ಪ್ರೈವೇಟ್’ (Private) ಆಗಿ ಇಟ್ಟುಕೊಳ್ಳಿ. ನಿಮ್ಮ ಪೋಸ್ಟ್‌ಗಳು ಕೇವಲ ನಿಮ್ಮ ಆಪ್ತ ಸ್ನೇಹಿತರಿಗೆ ಮಾತ್ರ ಕಾಣಿಸುವಂತೆ ಇರಲಿ.
3. ಸಾಮಾಜಿಕ ಜಾಲತಾಣದ ಬಳಕೆಯಿಂದ ನನ್ನ ಗೌರವಕ್ಕೆ ಧಕ್ಕೆಯಾಗುತ್ತಿದೆಯೇ?
ಕೆಲವೊಮ್ಮೆ ನಾವು ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳು ಕಲ್ಲಿನ ಮೇಲೆ ಕೆತ್ತಿದ ಬರಹದಂತಿರುತ್ತವೆ; ಅವುಗಳನ್ನು ಅಳಿಸಿಹಾಕುವುದು ಅಸಾಧ್ಯ. ಜನರು ಜಾಲತಾಣಗಳನ್ನು ಬಳಸುವಾಗ ವಿವೇಚನೆ ಕಳೆದುಕೊಂಡು ಅನಗತ್ಯ ವಿಷಯಗಳನ್ನು ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ವರ್ಷಗಳಿಂದ ಗಳಿಸಿದ ಹೆಸರನ್ನು ಒಂದೇ ಒಂದು ಪೋಸ್ಟ್‌ನಿಂದ ಹಾಳುಮಾಡಿಕೊಳ್ಳುತ್ತಾರೆ. ಫೇಸ್‌ಬುಕ್‌ನಲ್ಲಿ ಹಾಕಿದ ವಿವಾದಾತ್ಮಕ ಪೋಸ್ಟ್‌ನಿಂದಾಗಿ ವ್ಯಕ್ತಿಯೊಬ್ಬ ತನ್ನ ಕೆಲಸವನ್ನೇ ಕಳೆದುಕೊಂಡ ಉದಾಹರಣೆಯೂ ಇದೆ.
ಯಾವುದೇ ಪೋಸ್ಟ್ ಅಥವಾ ಫೋಟೋ ಹಾಕುವ ಮುನ್ನ ನಿಮಗೇ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:
‘ನನ್ನ ಹೆತ್ತವರು, ಶಿಕ್ಷಕರು ಅಥವಾ ಗೌರವಾನ್ವಿತ ವ್ಯಕ್ತಿಗಳು ಈ ಪೋಸ್ಟ್ ನೋಡಿದರೆ ನನ್ನ ಬಗ್ಗೆ ಏನೆಂದುಕೊಳ್ಳಬಹುದು?’
‘ಈ ಪೋಸ್ಟ್ ನನ್ನ ನೈಜ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆಯೇ?’
‘ಜನರು ನನ್ನ ಗುಣದ ಬಗ್ಗೆ ಯಾವ ರೀತಿಯ ಅಭಿಪ್ರಾಯ ತಳೆಯಬಹುದು?’
ಲೇಖಕರ ವೈಯಕ್ತಿಕ ಅನುಭವ ಮತ್ತು ಇಂದಿನ ವಿಪರ್ಯಾಸ:
ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟಿದೆಯೆಂದರೆ, ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಸೀದಾ ಇರುವುದನ್ನು ಉಲ್ಟಾ ಮಾಡಬಲ್ಲದು, ಉಲ್ಟಾ ಇರುವುದನ್ನು ಸೀದಾ ಮಾಡಬಲ್ಲದು! ಎಷ್ಟೋ ಬಾರಿ ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಅಥವಾ ಕೇವಲ ಮನರಂಜನೆಗಾಗಿ ಹಂಚಿಕೊಳ್ಳುವ ವಿಡಿಯೋ/ಫೋಟೋಗಳನ್ನು ನೋಡಿ ಜನರು ನಮ್ಮನ್ನು ಅಳೆಯುವ ದೃಷ್ಟಿಕೋನವೇ ಬದಲಾಗಿಬಿಡುತ್ತದೆ.
ಇದು ಸ್ವತಃ ನನ್ನ ಜೀವನದಲ್ಲೂ ನಡೆದಿದೆ. ನನಗೆ ಭಾವನಾತ್ಮಕ ಗೀತೆಗಳು (Sad Songs) ಮತ್ತು ಹಳೆಯ ಪ್ರೇಮಗೀತೆಗಳು (Old Love Songs) ಎಂದರೆ ತುಂಬಾ ಇಷ್ಟ. ನಾನು ಕೆಲವೊಮ್ಮೆ ಸ್ಯಾಡ್ ಸಾಂಗ್ ಸ್ಟೇಟಸ್ ಇಟ್ಟಾಗ ನನ್ನ ಸ್ನೇಹಿತರು, ಸಂಬಂಧಿಕರು ಕರೆ ಮಾಡಿ, “ಯಾಕೆ ನವೀನ್ ಏನಾಯ್ತು? ಇಷ್ಟೊಂದು ದುಃಖದ ಹಾಡು ಇಟ್ಟಿದ್ದೀಯಾ?” ಎಂದು ಕೇಳಿದ್ದಾರೆ! ಇನ್ನು ಲವ್ ಸಾಂಗ್ ಇಟ್ಟರಂತೂ, “ಏನಪ್ಪಾ ಇವತ್ತು ಹಾಡು ಜೋರಾಗಿದೆ, ಯಾರು ಆ ಹುಡುಗಿ?” ಎಂದು ಕಾಲೆಳೆದ ಉದಾಹರಣೆಗಳೂ ಇವೆ (ಹಾ ಹಾ ಹಾ…)
ಇಂದಿನ ಜನರು ಕಣ್ಣಿಗೆ ಕಾಣಿಸುವ ಸ್ಟೇಟಸ್‌ಗಳನ್ನು ನೋಡಿ ವ್ಯಕ್ತಿಯ ಮನಸ್ಥಿತಿಯನ್ನು ನಿರ್ಧರಿಸಿಬಿಡುತ್ತಾರೆ. ಅದರ ಹಿಂದಿರುವ ನಿಜವಾದ ಒಳಾರ್ಥವನ್ನು ಯೋಚಿಸುವ ತಾಳ್ಮೆ ಯಾರಿಗೂ ಇಲ್ಲ. ಇದು ಇಂದಿನ ಸಮಾಜದ ದೊಡ್ಡ ವಿಪರ್ಯಾಸ.
ಅಂತಿಮ ಮುನ್ನೆಚ್ಚರಿಕೆಗಳು:
ಅಪರಿಚಿತರ ‘ಫ್ರೆಂಡ್ ರಿಕ್ವೆಸ್ಟ್’ಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬೇಡಿ.
ಮನೆಯ ಹೆಣ್ಣುಮಕ್ಕಳ ವೈಯಕ್ತಿಕ ಫೋಟೋಗಳನ್ನು (ಹುಟ್ಟುಹಬ್ಬ ಅಥವಾ ಯಾವುದೇ ಸಂದರ್ಭ ಇರಲಿ) ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ.
ಜನ್ಮದಿನಾಂಕ, ಮೊಬೈಲ್ ನಂಬರ್, ವಿಳಾಸದಂತಹ ಖಾಸಗಿ ಮಾಹಿತಿಯನ್ನು ಪ್ರೊಫೈಲ್‌ನಲ್ಲಿ ಮುಕ್ತವಾಗಿ ಇಡಬೇಡಿ.
ಇತ್ತೀಚೆಗೆ ಸೈಬರ್ ಅಪರಾಧಿಗಳು ನಿಮ್ಮ ಆಪ್ತರ ಹೆಸರಲ್ಲೇ ನಕಲಿ ಐಡಿ ಸೃಷ್ಟಿಸಿ ಮೆಸೆಂಜರ್‌ನಲ್ಲಿ ಹಣ ಕೇಳುವ ವಂಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಎಚ್ಚರದಿಂದಿರಿ, ಹಣ ಕಳುಹಿಸುವ ಮುನ್ನ ಅವರಿಗೆ ನೇರವಾಗಿ ಕರೆ ಮಾಡಿ ಖಚಿತಪಡಿಸಿಕೊಳ್ಳಿ.
ಮೆಸೆಂಜರ್ ಖಾತೆಗಳಲ್ಲಿ ಅತ್ಯಂತ ವೈಯಕ್ತಿಕ ವಿಚಾರಗಳು ಅಥವಾ ಫೋಟೋಗಳನ್ನು ಹಂಚಿಕೊಳ್ಳಬೇಡಿ.
ಓದುಗರೇ, ಸಾಮಾಜಿಕ ಜಾಲತಾಣ ಎಂಬ ಈ ಮಾಯಾಜಾಲದಲ್ಲಿ ಸದಾ ಜಾಗರೂಕರಾಗಿರಿ. ನಮ್ಮ ಒಂದು ಸಣ್ಣ ನಿರ್ಲಕ್ಷ್ಯ ಅಥವಾ ತಪ್ಪು, ನಮ್ಮ ಇಡೀ ಜೀವನದ ಒಳ್ಳೆಯ ಹೆಸರು, ಪ್ರತಿಷ್ಠೆ ಮತ್ತು ನೆಮ್ಮದಿಯನ್ನೇ ನುಂಗಿಬಿಡಬಹುದು!
