ಧರ್ಮಸ್ಥಳದಲ್ಲಿ 54ನೇ ಉಚಿತ ಸಾಮೂಹಿಕ ವಿವಾಹ ವೈಭವ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ನಾಳೆ ಬುಧವಾರ ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಐವತ್ತನಾಲ್ಕನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.

ಈಗಾಗಲೆ 105 ಜೊತೆ ವಧು-ವರರು ವಿವಾಹಕ್ಕಾಗಿ ಹೆಸರು ನೋಂದಾಯಿಸಿದ್ದು, ಅವರು ಕೊಟ್ಟ ದಾಖಲೆಗಳ ಮೂಲ ಪ್ರತಿಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುವುದು.
ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳಸೂತ್ರ ಮತ್ತು ಹೂವಿನಹಾರ ನೀಡಲಾಗುವುದು. ಮದುವೆಯ ಎಲ್ಲಾ ವೆಚ್ಚವನ್ನು ಧರ್ಮಾಧಿಕಾಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಟ್ರಸ್ಟ್ ನ ಕಾರ್ಯದರ್ಶಿ ಎ.ವಿ. ಶೆಟ್ಟಿ  ತಿಳಿಸಿದ್ದಾರೆ.

ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972 ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸುತ್ತಿದ್ದು, ಕಳೆದ ವರ್ಷದ ವರೆಗೆ ಹದಿಮೂರು ಸಾವಿರ ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿದ್ದಾರೆ.
ಬುಧವಾರ ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಡಿ. ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ ಮತ್ತು ಮೆಸ್ಕಾಂ ಅಧ್ಯಕ್ಷ ಹರೀಶ್‌ಕುಮಾರ್ ನೂತನ ದಂಪತಿಗಳಿಗೆ ಶುಭಾಶಂಸನೆ ಮಾಡುವರು.

Leave a Reply

Your email address will not be published. Required fields are marked *