ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ” ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ – ಮುಂದಿನ ದಾರಿ ” ಪರಿಣಾಮಕಾರಿ ಅನುಷ್ಠಾನ ಕುರಿತು ಚಿಂತನ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ” ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆಯ ಅನುಷ್ಠಾನದ ಕುರಿತು ಚಿಂತನ ಸಭೆಯು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತಾ 6.10.2026 ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ದೇವತಾಶಾಸ್ತ್ರ ಕಾಲೇಜಿನ ಪತ್ರಾಗಾರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ತುಳು ಹಾಗೂ ಕನ್ನಡ ಸಾಹಿತಿ ಬೆನೆಟ್ ಅಮಣ್ಣ ಅವರು, ತುಳು ಭಾಷೆ ಶತಮಾನಗಳ ಹಿನ್ನೆಲೆಯುಳ್ಳ ಭಾಷೆಯಾಗಿದ್ದು, ತುಳು ಭಾಷೆಗೆ ಜಾತಿ ಭೇದವಿಲ್ಲ. ತುಳುನಾಡಿನ ಸರ್ವರೂ ಮಾತನಾಡುವ ಭಾಷೆ ಇದಾಗಿದ್ದು, ಇದು ಈಗ ರಾಜ್ಯದ ಅಧಿಕೃತ ಭಾಷೆಯಾಗಿ ಗುರುತಿಸಿಕೊಂಡಿದೆ. ತುಳುನಾಡಿನ ಮೊದಲ ಭಾಷೆ ತುಳುವಾಗಿದ್ದು, ಅನೇಕ ಸಾಹಿತ್ಯಗಳೂ ತುಳುವಿನಲ್ಲಿಯೇ ಇದೆ. ಜಿಲ್ಲೆಯಲ್ಲಿ ಸುಮಾರು 38 ಶಾಲೆಗಳಲ್ಲಿ ತುಳು ಪಾಠ ಈಗಾಗಲೇ ಇದೆ. ಹಲವು ಮ್ಯೂಸಿಯಂ ಗಳೂ ಜಿಲ್ಲೆಯಲ್ಲಿ ಇದೆ. ಜಿಲ್ಲೆಯಲ್ಲಿ ತುಳು ಭಾಷೆ ಸರಕಾರ ಕಚೇರಿಯಲ್ಲೂ ಜಾರಿಯಾಗಲು ಜನರ ಸಹಕಾರ ಬೇಕು ಎಂದರು.

ಇನ್ನೊರ್ವ ವಿದ್ವಾಂಸರು, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವರಾದ ಶ್ರೀ ಡಾ. ಪ್ರಭಾಕರ್ ನೀರುಮಾರ್ಗ ಅವರು, ತುಳು ಭಾಷೆಗೆ ಸರಕಾರದ ಮಾನ್ಯತೆ ಸಿಕ್ಕಿರುವುದು ತುಳುವರಿಗೆ ಖುಷಿಯ ವಿಚಾರ. ಇದು ಕರ್ನಾಟಕ ಸರಕಾರದ ಐತಿಹಾಸಿಕ ನಿರ್ಧಾರ. ತುಳು ಭಾಷೆ, ತುಳು ಸಂಸ್ಕೃತಿಯ ಮೂಲ ಕೃಷಿಯಿಂದಾಗಿ. ದೈವಾರಾಧನೆ, ತಾಳಮದ್ದಳೆ, ಯಕ್ಷಗಾನ ತುಳು ಭಾಷೆಯ ಸಂಸ್ಕೃತಿ. ಇದನ್ನೆಲ್ಲವನ್ನು ಬೆಳೆಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ . ತುಳು ಭಾಷೆಯಲ್ಲಿ ಊರಿಗೊಂದು ಆಚಾರ, ವಿಚಾರ ಇದೆ. ಮಂಗಳೂರು, ಉಡುಪಿ, ಪುತ್ತೂರು, ಸುಳ್ಯ ದಲ್ಲಿ ಆಚಾರ, ವಿಚಾರ ಬೇರೆ ಬೇರೆ ಇದೆ. ಇದೆಲ್ಲಾ ಒಂದಾಗಬೇಕು.ತುಳುನಾಡಿನ ಇತಿಹಾಸ ತುಳು ಭಾಷೆಯೊಂದಿಗೆ ಮುಂದೆ ಬರಬೇಕು. ಈಗಿನ ಯುವಕರಿಗೆ ತುಳು ಭಾಷೆಯ ಮೇಲೆ ಅಭಿಮಾನವಿದೆ. ಅವರಿಗೆ ಅದರ ಬಗ್ಗೆ ಮಾಹಿತಿ ಕೊಡುವಂತಹ ಕೆಲಸ ಕಾರ್ಯ ಆಗಬೇಕು ಎಂದರು.

ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ, ರಾಜ್ಯದಲ್ಲಿ ತುಳು ಭಾಷೆಗೆ ಸಂಸ್ಕೃತಿ ಇದೆ. ಶತಮಾನದ ಹಿನ್ನೆಲೆಯುಳ್ಳ ಭಾಷೆಯಾಗಿದೆ. ಆದ್ದರಿಂದಲೇ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಮಾನ್ಯತೆ ದೊರಕಿಸಿ ಕೊಟ್ಟಿದ್ದಾರೆ. ತುಳು ಭಾಷೆಯ ವೇದಿಕೆಯನ್ನು ಕಲ್ಪಿಸಿ, ಇದರ ಮೂಲಕ ಸಂಶೋಧನೆಗೆ ಒತ್ತು ಕೊಡಬೇಕು. ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ತುಳು ಮಕ್ಕಳಿಗೆ ಕೆಲಸ ಕೊಡಬೇಕು. ಜಿಲ್ಲೆಯ ವಿವಿಧ ಅಕಾಡೆಮಿಗಳ ಜೊತೆಗೆ ತುಳು ಭಾಷೆಯನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಅಪ್ಪಿ, ಗಣೇಶ ಪೂಜಾರಿ, ಮೊಹಮ್ಮದ್ ನವಾಜ್, ಹೊನ್ನಯ್ಯ, ಸಾರಿಕಾ ಪೂಜಾರಿ, ಬಶೀರ್ ಬೈಕಂಪಡಿ, ಉದಯ ಆಚಾರ್ಯ, ಚಂದ್ರಕಲಾ ರಾವ್ ರವರು ತಮ್ಮ ಅಭಿಪ್ರಾಯ ಮಂದಿಸಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ರಮಾನಂದ ಪೂಜಾರಿ, ಉದಯ ಕುಂದರ್, ಟಿ. ಕೆ. ಸುಧೀರ್, ಸಂತೋಷ ಡಿಕೋಸ್ತಾ, ಭಾರತೇಶ್ ಅಮೀನ್, ಅಶೋಕ್ ಕುಮಾರ್, ಕವಿತಾ ವಾಸು, ವಿಜಯಲಕ್ಷ್ಮಿ, ಶರತ್, ಪದ್ಮನಾಭ ಅಮೀನ್, ಚೇತನ್ ಉರ್ವಾ, ನಾನ್ಸಿ ಡಿಸೋಜಾ, ಹರ್ಬಟ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *