ಅ.11 ರಿಂದ ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ; ಅ.12 ರಂದು ಮುಖ್ಯಮಂತ್ರಿಗಳಿಂದ ಅದ್ದೂರಿ ಚಾಲನೆ

ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11 ರಿಂದ 22ರ ವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದ್ದು, ಭಕ್ತಿಸಾಗರಕ್ಕೆ ಸಕಲ ಸಿದ್ಧತೆಗಳು ನಡೆದಿವೆ.

ಕ್ಷೇತ್ರದ ಭವ್ಯ ದರ್ಬಾರ್ ಹಾಲ್‌ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ, ಭಕ್ತಿಪೂರ್ಣ ಭಜನೆ, ನೃತ್ಯ-ಸಂಗೀತ ವೈಭವ, ಕ್ರೀಡಾಕೂಟಗಳು ಮತ್ತು ಸಮೃದ್ಧ ಜಾನಪದ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ.

ಅ. 11ರಂದು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ. 12ರಂದು ಸಂಜೆ 6.30 ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅ.21ರಂದು ಸಂಜೆ 4:00 ಗಂಟೆಗೆ ಮಂಗಳೂರು ದಸರಾ ಮಹೋತ್ಸವದ ಐತಿಹಾಸಿಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ.

ಪ್ರತಿದಿನ ಚಂಡಿಕಾಹೋಮ
ಅ. 12ರಿಂದ 20ರ ವರೆಗೆ ಪ್ರತಿದಿನವೂ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನೆರವೇರಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಜರುಗಲಿದ್ದು, ಬೆಳಗ್ಗೆ 11.30 ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೆ ಚಂಡಿಕಾಹೋಮ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.

‘ದಸರಾ ಕಲಾಝೇಂಕಾರ’
ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ. 11 ರಿಂದ 20ರ ವರೆಗೆ ನಿತ್ಯ ಮಧ್ಯಾಹ್ನ 2.30 ರಿಂದ ರಾತ್ರಿ 11.30ರ ವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ರಸದೌತಣ ಇರಲಿದೆ. ಇದೇ ವೇದಿಕೆಯಲ್ಲಿ ಪ್ರತಿದಿನವೂ ಸಮಾಜದ ಸಾಧಕ ಮಹಿಳೆಯರಿಗೆ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ವಿವಿಧ ಸ್ಪರ್ಧೆ, ಕವಿಗೋಷ್ಠಿ
ಈ ಬಾರಿಯ ದಸರಾ ಮಹೋತ್ಸವದಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆ, 13ರಂದು ಸಂಜೆ 7.30ರಿಂದ ’ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ನಡೆಯಲಿದೆ.
15ರಂದು ಮಕ್ಕಳಿಗಾಗಿ ’ಮಕ್ಕಳ ದಸರಾ’ ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. ಅ.16ರಂದು ’ಮುದ್ದು ಶಾರದೆ’ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4, ’ಕಿನ್ನಿಪಿಲಿ’ ಸೀಸನ್-2 ಜರುಗಲಿವೆ.
19ರಂದು ಮಹಿಳೆಯರಿಗಾಗಿಯೇ ’ಮಹಿಳಾ ದಸರಾ’ ನಡೆಯಲಿದ್ದು, ಭರತನಾಟ್ಯ ಸ್ಪರ್ಧೆ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ, ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ ದಾಂಡಿಯಾ ನೃತ್ಯ ನಡೆಯಲಿದೆ. 20ರಂದು ’ದಸರಾ ರಂಗಾಂತರಂಗ’ ಸಾಂಸ್ಕೃತಿಕ ವೈವಿಧ್ಯಮಯ ಸ್ಪರ್ಧೆಗಳು ಜರುಗಲಿವೆ.

ಅಕ್ಷರಾಭ್ಯಾಸ
ಅ. 20 ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.

ಪ್ಯಾಲೇಸ್ ಮಾದರಿ ದರ್ಬಾರ್ ಮಂಟಪ
ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಈ ಬಾರಿ ಅರಮನೆ ಶೈಲಿಯಲ್ಲಿ ಮನಮೋಹಕವಾಗಿ ವಿನ್ಯಾಸಗೊಳಿಸಲಾಗಿದೆ.

Leave a Reply

Your email address will not be published. Required fields are marked *