ಶ್ರೀ ಕ್ಷೇತ್ರ ಅರ್ಕುಳದಲ್ಲಿ ಸಮೃದ್ಧಿ ಸಂಕಲ್ಪ ಸಭೆ

ದೈವಸ್ಥಾನಗಳ‌ ಪುನರ್ನವೀಕರಣ ಕೇವಲ ನಿರ್ಮಾಣ ಯೋಜನೆಗಳಲ್ಲ; ಅವು ನಮ್ಮ ಭಕ್ತಿ, ಪರಂಪರೆ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರತೀಕಗಳಾಗಿವೆ. ಇದುವರೆಗೆ ಹೇಗೆ ಭಕ್ತರ ಪ್ರೀತಿ, ವಿಶ್ವಾಸ ಮತ್ತು ಉದಾರ ಸಹಕಾರದಿಂದ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿ ಸಾಗಿದೆಯೋ, ಅದೇ ರೀತಿ ಮುಂದಿನ ಯೋಜನೆಗಳೂ ತಾವೆಲ್ಲರ ಸಹಭಾಗಿತ್ವದಿಂದ ಯಶಸ್ವಿಯಾಗಲಿವೆ ಎಂಬ ದೃಢ ವಿಶ್ವಾಸ ನಮ್ಮದಾಗಿದೆ ಎಂದು ಸಂಸ್ಕಾರ ಭಾರತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿಯವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ತಿಳಿಸಿದರು.

ಅರ್ಕುಳ ಬೀಡಿನಲ್ಲಿ ಇತ್ತೀಚೆಗೆ ನಡೆದ “ಕ್ಷೇತ್ರ ಸಮೃದ್ಧಿ ಸಂಕಲ್ಪ ಸಭೆ”ಯಲ್ಲಿ ಸಾಮೂಹಿಕ ಪ್ರಾರ್ಥನೆಯ‌ ನಂತರ ರಥ ಗೋಪುರ ಹಾಗೂ ಸುತ್ತು ಪೌಳಿಯ ವಿನ್ಯಾಸ ನಕ್ಷೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.

ನಮ್ಮ ಪೂರ್ವಜರು ಅಪಾರ ಶ್ರದ್ಧೆ, ತ್ಯಾಗ ಮತ್ತು ಸೇವಾಭಾವದಿಂದ ಈ ಪವಿತ್ರ ಕ್ಷೇತ್ರವನ್ನು ಉಳಿಸಿ ಬೆಳೆಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಇಂದು ನಾವು ಈ ದಿವ್ಯ ಸನ್ನಿಧಿಯಲ್ಲಿ ಒಂದಾಗುವ ಭಾಗ್ಯವನ್ನು ಪಡೆದಿದ್ದೇವೆ. ಈಗ ಈ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಪ್ರಾಸ್ತವಿಕವಾಗಿ ಡಾ. ಜಯಕುಮಾರ ಶೆಟ್ಟಿಯವರು ಮಾತನಾಡುತ್ತಾ ಅಭಿಪ್ರಾಯಪಟ್ಟರು.

ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದು ನಾವು ಕೈಗೊಳ್ಳುತ್ತಿರುವ ಸಂಕಲ್ಪ ಕೇವಲ ಭೌತಿಕ ಅಭಿವೃದ್ಧಿಯ ಸಂಕಲ್ಪವಲ್ಲ; ಇದು ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಪೂರ್ವಜರು ನಮಗೆ ನೀಡಿದ ಅಮೂಲ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟಿ ಡಾ. ಮಂಜಯ್ಯ ಶೆಟ್ಟಿ, ಕಂಪ ಸದಾನಂದ ಆಳ್ವ, ಶಿವಪ್ಪ ಸುವರ್ಣ, ಮೇರಮಜಲು‌ ಗುತ್ತು ನಾಗಪ್ಪ ಶೆಟ್ಟಿ, ಗೋವಿಂದ ಶೆಣೈ, ಕೃಷ್ಣಕುಮಾರ‌ ಪೂಂಜ, ಚಂದ್ರಶೇಖರ ಗಾಂಭೀರ, ಉಮೇಶ್ ಶೆಟ್ಟಿ ಬರ್ಕೆ, ಮನೋಜ್ ಉಳಿದೊಟ್ಟು, ಲೋಕಯ್ಯ ಪೂಜಾರಿ, ದಾಮೋದರ ಶೆಣೈ, ಅಬ್ಬೆಟ್ಟು ಗಂಗಾಧರ ಕೋಟ್ಯಾನ್, ಅಬ್ಬೆಟ್ಟು ಜಯರಾಮ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು.

ತುಪ್ಪೆಕಲ್ಲು ನಾಗರಾಜ ಶೆಟ್ಟಿ ಹಾಗೂ ಮಂಟಮೆ ದಿನಕರ ಕರ್ಕೇರ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮನೋಜ್‌ ಬಂಗೇರಾ ವಂದಿಸಿದರು.

Leave a Reply

Your email address will not be published. Required fields are marked *