ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಉಡುಪಿ ಇದರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್‍ನ ಡಾ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.


ಕರ್ನಾಟಕ ರಾಜ್ಯ ಮಕ್ಕಳ ಘಟಕಗಳ ರಕ್ಷಣಾ ಆಯೋಗದ ನಿಕಟ ಪೂರ್ವ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ ಟಿ ಕಾರ್ಯಾಗಾರ ನಡೆಸಿಕೊಟ್ಟು ಮಾತನಾಡಿ, ಮಕ್ಕಳ ರಕ್ಷಣೆ ಕೇವಲ ಒಂದು ಇಲಾಖೆಗೆ ಸಂಬಂಧಪಟ್ಟ ವಿಚಾರ ಅಲ್ಲ, ಮಕ್ಕಳ ರಕ್ಷಣೆಯ ವಿಚಾರ ಬಂದಾಗ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಿರಂತರ ತರಬೇತಿ ಕಾರ್ಯಕ್ರಮಗಳನ್ನು ನಡೆಸ ಬೇಕಾಗುತ್ತದೆ ಎಂದರು.
ಅಪರಾಧ ಘಟಿಸಿದಾಗ ಮಕ್ಕಳ ಮನಸ್ಥಿತಿಯ ಬಗ್ಗೆ ಯೋಚಿಸ ಬೇಕಾಗುತ್ತದೆ. ಅಪರಾಧಕ್ಕೆ ಕಾರಣವಾದ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳ ಬೇಕಾಗುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪದೇ ಪದೇ ಬದಲಾಗುವು ದರಿಂದಾಗಿ ಪುನರಾವರ್ತಿ ತರಬೇತಿಯ ಅವಶ್ಯಕತೆ ಹಿನ್ನೆಲೆಯಲ್ಲಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಮೇಲೆ ಅಥವಾ ಮಕ್ಕಳಿಂದ ಅಪರಾಧ ನಡೆದಾಗ ಸಕಾಲದಲ್ಲಿ ಸಕಾರಾತ್ಮಕ ಸ್ಪಂದನೆ ನೀಡಿ ಕಾನೂನಿನ ಸಂಘರ್ಷ ತಪ್ಪಿಸಬೇಕು ಎಂದರು.
ಮಕ್ಕಳ ಘಟಕಗಳ ರಕ್ಷಣಾ ಆಯೋಗದ ಸದಸ್ಯತ್ವದ ಅವಧಿಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ತಾನು ಸರಕಾರಕ್ಕೆ ಸಲ್ಲಿಸಿದ ಶಿಫಾರಸುಗಳಲ್ಲಿ ರಾಜ್ಯ ಸರಕಾರವು 106 ಸುತ್ತೋಲೆಗಳನ್ನು ಹೊರಡಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರೇಮ ಮೂರ್ತಿ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ. ಸುಮಾರು 47 ಇಲಾಖೆಗಳು ನೇರ ಅಥವಾ ಪರೋಕ್ಷವಾಗಿ ಮಕ್ಕಳ ರಕ್ಷಣೆ ಸಂಬಂಧಿಸಿ ಜವಾಬ್ದಾರರಾಗಿರುತ್ತದೆ. ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಎಂದೇ 30 ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಗಳ ಸಮರ್ಪಕ ಜಾರಿಗಾಗಿ ಎಲ್ಲ ಇಲಾಖೆಗಳು ಕೈ ಜೋಡಿಸಬೇಕು. ಮಕ್ಕಳ ಹಿತರಕ್ಷಣೆ ಬಗ್ಗೆ ಮುಕ್ತ ಚರ್ಚೆ ನಡೆಯಲಿ ಎನ್ನುವ ಉದ್ದೇಶದಿಂದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರ ಡಿ.ವೈ.ಎಸ್.ಪಿ ಹೆಚ್.ಡಿ ಕುಲಕರ್ಣಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಅಶ್ವಿತಾ ಶಾಲೆಟ್, ಪಡಿ ಸಂಸ್ಥೆ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರೆನಿ ಪೀಟರ್ ಡಿ’ಸೋಜ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಸಿ, ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕಿ ಜ್ಯೋತಿ ನಿರೂಪಿಸಿ ವಂದಿಸಿದರು.
