ಉಡುಪಿ: ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳ ಸದಸ್ಯತ್ವದ ನೋಂದಣಿ ಪ್ರಕ್ರಿಯೆ ಹಾಗೂ ಸಮಿತಿಗಳನ್ನು ರಚಿಸಿ, ಯುವಜನರನ್ನು ಸಬಲೀಕರಣಗೊಳಿಸಲು ತಳಮಟ್ಟದ ಆಡಳಿತದಲ್ಲಿ ಸಕ್ರೀಯಪಾಲುದಾರರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಕರೆ ನೀಡಿದರು.


ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಇವರ ವತಿಯಿಂದ ಭಾರತ್ ಜೋಡೊ ಯುವ ಸಂಘದ ಮಾರ್ಗದರ್ಶಕರಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು, ಗ್ರಾಮ ಪಂಚಾಯತ್ ಹಾಗೂ ನಗರದ ವಾರ್ಡ್ಗಳ ವ್ಯಾಪ್ತಿಯಲ್ಲಿ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯುವಜನರಲ್ಲಿ ನಾಯಕತ್ವದ ಗುಣ ಬೆಳಿಸಿ, ಅವರುಗಳನ್ನು ಸಬಲೀಕರಣಗೊಳಿಸಿ, ನಾಳಿನ ಸತ್ಪ್ರಜೆಗಳಾಗಿ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಹಾಗೂ ನಗರದ ವಾರ್ಡ್ಗಳ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಘ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಸಂಘಗಳ ನೋಂದಣಿ ಮಾಡುವಲ್ಲಿ ಮಾರ್ಗದರ್ಶಕರ ಜವಾಬ್ದಾರಿ ಹೆಚ್ಚಿದೆ. ಪ್ರತಿ ಯುವ ಸಂಘವೂ ಸರ್ಕಾರದ ಮಾರ್ಗಸೂಚಿ ಅನ್ವಯ ನೋಂದಣಿ ಆಗುವಂತೆ ಅಗತ್ಯ ಕ್ರಮ ವಹಿಸಬೇಕು ಎಂದ ಅವರು, ಈ ಎಲ್ಲಾ ಕಾರ್ಯಗಳನ್ನು ತಹಶೀಲ್ದಾರ್ ಗಳು ಮೇಲ್ವಿಚಾರಣೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ನೋಂದಣಿಯದ ಎಲ್ಲಾ ಭಾರತ್ ಜೋಡೊ ಸಂಘಗಳನ್ನು ಕ್ಯೂ ಅರ್ ಕೋಡ್ ನಲ್ಲಿ ಅಪ್ಲೋಡ್ ಮಾಡಬೇಕು. ಪ್ರತಿ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಜನ ಸದಸ್ಯರನ್ನು ಒಳಗೊಂಡ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರಲಿದ್ದು, ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಜಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರು ಇರಲಿದ್ದಾರೆ ಎಂದ ಅವರು, ಮೀಸಲಾತಿಗೆ ಅನುಗುಣವಾಗಿ ಸಮಿತಿಗಳನ್ನು ರಚಿಸಲು ಮುಂದಾಗಬೇಕು ಎಂದರು.
ನಿಯಮನುಸಾರ ನೋಂದಣಿಯಾದ ಭಾರತ್ ಜೋಡೊ ಸಂಘಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ. ಗಳಂತೆ ಸರಕಾರ ಅನುದಾನ ನೀಡಲಿದ್ದು, ಈ ಅನುದಾನದಲ್ಲಿ ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ ಹಾಗೂ ಯುವ ಸಬಲೀಕರಣದಂತಹ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಹ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದ ಅವರು, ಸಂಘಗಳ ನೋಂದಣಿ ಮಾಡಿಸುವುದರೊಂದಿಗೆ ಆ ಸಂಘಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳ ರಚನೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ, ಮಾರ್ಗದರ್ಶಕರು, ಮಾಸ್ಟರ್ ತರಬೇತುದಾರರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸುವುದರೊಂದಿಗೆ ಯುವ ಸಂಘಗಳ ಸ್ಥಾಪನೆ ಹಾಗೂ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾ ಕೋ ಆರ್ಡಿನೇಟರ್ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಮಾತನಾಡಿ, ಯಾವುದೇ ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಆ ಸಂಘಟನೆಗಳ ಕಾರ್ಯ ವೈಖರಿಯನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಭಾರತ್ ಜೋಡೊ ಯುವ ಸಂಘ ಸ್ಥಾಪನೆಯಲ್ಲಿ ಮಾರ್ಗದರ್ಶಕರೇ ಅಡಿಪಾಯದ ಸ್ಥಂಭ ಗಳಿದ್ದಂತೆ. ಅವರುಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಗ್ರಾಮೀಣ ಮತ್ತು ನಗರದ 16-35 ವರ್ಷ ದೊಳಗಿನ ಯುವಜನರಲ್ಲಿ ಕ್ರೀಡೆ, ಆರೋಗ್ಯಕರ ಜೀವನ ಶೈಲಿ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು ಸೇರಿದಂತೆ ಮತ್ತಿತರ ಸಮಾಜಮುಖಿ ಚಟುವಟಿಕೆ ಕೈಗೊಳ್ಳಲು ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ತಹಶೀಲ್ದಾರ್ ಗಳಾದ ಅನಂತ ಶಂಕರ್ ಬಿ, ರಾಕೇಶ್ ಫ್ರಾನ್ಸಿಸ್ ವಿಕ್ಟರ್ ಹಾಗೂ ಅಶೋಕ್ ಭಟ್, ಮಾಸ್ಟರ್ ಟ್ರೈನರ್ ಗಳು ಹಾಗೂ ಮೆಂಟರ್ ಗಳು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
