ಮಂಗಳೂರು ನ. 19: ಎಐ ಕಾಲಘಟ್ಟದಲ್ಲಿ ಬದುಕುವ ಇಂದಿನ ವಿದ್ಯಾರ್ಥಿಗಳು ಎಐಯನ್ನು ಬಳಸಿಕೊಂಡು ಜೀವಿಸುವುದು ಅನಿವಾರ್ಯವಾದರೂ ತಮ್ಮ ಕೌಶಲ ಮತ್ತು ಬುದ್ದಿವಂತಿಕೆಯನ್ನು ಕಳೆದುಕೊಳ್ಳದಂತೆ ಎಚ್ಚರವಾಗಿರುವುದು ಅತೀ ಅಗತ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಆಧುನಿಕ ತಂತ್ರಜ್ಞಾನದ ಜೊತೆಗೆ ನಾವೆಲ್ಲರೂ ಬದುಕೋಣ ಎಂದು ಎಸ್. ಡಿ. ಎಂ. ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕಿ ಡಾ. ಸೀಮಾ ಶೆಣೈ ಹೇಳಿದರು. ಅವರು ನವೆಂಬರ್ 18ರಂದು ರೇಶ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.















ಸೋಲು ಗೆಲುವು ಬದುಕಿನಲ್ಲಿ ಸಹಜವಾದದ್ದು. ಗೆದ್ದಾಗ ನಮ್ಮ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳೋಣ. ಸೋತಾಗ ಕುಗ್ಗದೆ ಧೈರ್ಯದಿಂದ ಮತ್ತೆ ಪ್ರಯತ್ನಿಸೋಣ. ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಪದವಿಯನ್ನೇ ಕಲಿಯದೇ ಇದ್ದ ಕಾಲದಲ್ಲಿ ಸುಧಾ ಮೂರ್ತಿಯವರು ಕಲಿತು ಉದ್ಯೋಗವನ್ನು ಗಿಟ್ಟಿಸಿಕೊಂಡು ಇವತ್ತು ಸ್ವತಃತಾವೇ ಒಂದು ಕಂಪನಿಯ ನಿರ್ಮಾತೃವಾಗಿರುವುದು ಅವರ ಎದೆ ಗುಂದದ ಧೈರ್ಯದಿಂದ. ಹಾಗೆಯೇ ನಾವೂ ಧೈರ್ಯದಿಂದ ಮತ್ತೆ ಮತ್ತೆ ಮುನ್ನುಗ್ಗುತ್ತಾ, ಕಾಲಧರ್ಮಕ್ಕೆ ಅಧೀನರಾಗಿರುತ್ತ ನಮ್ಮ ನೈತಿಕ, ಮಾನವೀಯ, ಸಾಂಸ್ಕೃಾತಿಕ ಮೌಲ್ಯಗಳನ್ನು ಮರೆಯದೆ ಬದುಕೋಣ. ಶಾಲಾ ವಿದ್ಯೆಯಿಂದ ಪಡೆಯುವ ಅಂಕಗಳು ಕೇವಲ ನಿಮ್ಮಉದ್ಯೋಗಕ್ಕಾಗಿ ತೆರೆದುಕೊಳ್ಳುವ ಬಾಗಿಲುಗಳಷ್ಟೇ ಆಗಿವೆ. ಆದರೆ ಮುಂದಿನ ನಿಮ್ಮ ವೃತ್ತಿಯಲ್ಲಿ ನಿಮ್ಮನ್ನು ಮೇಲ್ದರ್ಜೆಗೆಕೊಂಡು ಹೋಗುವುದು ನಿಮ್ಮ ವಿದ್ಯಾರ್ಥಿ ಜೀವನದ ಸಂಸ್ಕಾರ ಮತ್ತು ಮೌಲ್ಯಗಳು. ಅಂತಹ ವ್ಯಕ್ತಿತ್ವ ವಿಕಸನದ ಮತ್ತು ರಾಷ್ಟ್ರವನ್ನು ಉದ್ದೀಪನಗೊಳಿಸುವ ಯುವಜನತೆಯನ್ನು ಕಟ್ಟುವ ಸಂಸ್ಕಾರಯುತ ಶಿಕ್ಷಣವನ್ನು ಶಕ್ತಿ ಶಿಕ್ಷಣ ಸಂಸ್ಥೆ ನೀಡುತ್ತಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವು ನಿಜವಾಗಿಯೂ ಧನ್ಯರು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ಕಾರ್ಯದರ್ಶಿ ಸಂಜಿತ್ ನಾಯಕ್ ಮಾತನಾಡಿ ಸಂಸ್ಥೆಯು 9 ವರ್ಷಗಳನ್ನು ಪೂರೈಸಿ ಮುಂದಿನ ವರ್ಷ10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ದಶಕದಲ್ಲಿ ಶಿಕ್ಷಣ ಸಂಸ್ಥೆಯು ಕ್ರಮಿಸಿದ ದೂರ, ಬೆಳೆದ ಎತ್ತರ ಇದೆಲ್ಲವೂ ನಮ್ಮ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ಸವಲತ್ತುಗಳನ್ನು ನಮ್ಮ ಸಂಸ್ಥೆ ಒದಗಿಸಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಅದನ್ನು ಉಪಯೋಗಿಸಿಕೊಂಡು ಬೆಳೆಯಬೇಕಾದದ್ದು ಅವರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿಗಳ ಏಳಿಗೆಗೆ ಶಕ್ತಿ ಶಿಕ್ಷಣ ಸಂಸ್ಥೆ ಸದಾ ಶ್ರಮಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಪ್ರತಿ ವರ್ಷದ ಸಾಧನೆಗಳನ್ನು ಮೆಲುಕು ಹಾಕುವಾಗ ಶಕ್ತಿ ಶಿಕ್ಷಣ ಸಂಸ್ಥೆ ಉತ್ತಮವಾದ ಬೆಳವಣಿಗೆಯನ್ನು ಹೊಂದುತ್ತಿದೆ. ಈ ಸಂಸ್ಥೆಯಲ್ಲಿಕಲಿತ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದುಅದು ಈ ಸಂಸ್ಥೆಯ ಸಾರ್ಥಕ್ಯದ ಹೆಜ್ಜೆಗಳಿಗೆ ಸಾಕ್ಷಿಯಾಗಿದೆಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ಕುಮಾರ್ ಶೆಟ್ಟಿ 2026-27ನೇ ಶೈಕ್ಷಣಿಕ ಸಾಲಿನ ವರದಿಯನ್ನು ವಾಚಿಸಿದರು.
ಆ ಬಳಿಕ 2025 – 26 ನೇ ಸಾಲಿನ ಜೆಇಇ, ನೀಟ್ ಸಾಧಕರನ್ನು, ಶೈಕ್ಷಣಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧಕರನ್ನು ಮತ್ತು ಸಾಧಕ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಡಾ. ಸುರೇಖಾ ಭಟ್, ವಿದ್ಯಾರ್ಥಿ ಪ್ರತಿನಿಧಿಗಳಾದ ರುಷ್ಮಿತಾ ಮತ್ತು ಕೆ.ವಿ. ಜಿತಿನ್ ಗೌಡ ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ್ ಚಾವಡಿ ಸ್ವಾಗತಿಸಿದರು. ವಿದ್ಯಾರ್ಥಿ ಜಿತಿನ್ ಕೆ. ಗೌಡ ವಂದಿಸಿದರು. ಉಪನ್ಯಾಸಕಿ ಯಶಸ್ವಿನಿಯವರು ಪ್ರಶಸ್ತಿ ವಿಜೇತರ ಹೆಸರನ್ನು ವಾಚಿಸಿದರು. ಉಪನ್ಯಾಸಕಿ ಅಶ್ವಿನಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
