ಅಕಸ್ಮಾತ್ ವಾಯು ದಾಳಿ – ದಾಳಿಯಿಂದ ತತ್ತರಿಸಿ ಮೂರ್ಛೆ ಬಿದ್ದ ವಿದ್ಯಾರ್ಥಿಗಳು: ತೆಂಕನಿಡಿಯೂರು ಕಾಲೇಜಿನಲ್ಲಿ ಅಣುಕು ಪ್ರದರ್ಶನ

ಅಕಸ್ಮಾತ್ ಆಗಿ ನಡೆದ ವಾಯು ದಾಳಿಯಿಂದ ತತ್ತರಿಸಿ ಮೂರ್ಛೆ ಬಿದ್ದ ವಿದ್ಯಾರ್ಥಿಗಳು, ಸುತ್ತಮುತ್ತ ಅವಾಕ್ಕಾಗಿ ನಿಂತು ನೋಡುತ್ತಿರುವ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮೂಹ, ದಾಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಗಾಯಾಳು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ಗೃಹ ರಕ್ಷಕರು, ಬೆಂಕಿ ಆರಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು…ಇದು ನಗರದ ತೆಂಕನಿಡಿಯೂರು ಕಾಲೇಜಿನಲ್ಲಿ ಕಂಡು ಬಂದ ದೃಶ್ಯಾವಳಿಗಳು….

ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಹೊರಟು ತಮ್ಮ ಪಾಡಿಗೆ ತಾವು ಓದಿಕೊಂಡಿರಬೇಕಾದರೆ ಹಠಾತ್ತಾಗಿ ವಾಯುದಾಳಿ ನಡೆದರೆ ಮಕ್ಕಳ ಪರಿಸ್ಥಿತಿ ಹೇಗಾಗಿರಬೇಡ?
ಒಂದು ತುರ್ತು ಸಂದರ್ಭದ ಸಮಯದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ನಡೆದ ಅಣಕು ಕಾರ್ಯಾಚರಣೆಯ ದೃಶ್ಯಾವಳಿಗಳು ಇವು….

ಜಿಲ್ಲೆಯ ಅಗ್ನಿಶಾಮಕ ಇಲಾಖೆ ಗೃಹರಕ್ಷಕ ದಳ ಪೊಲೀಸ್ ಇಲಾಖೆ ಕರಾವಳಿ ಕಾವಲು ಪಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಪೌರರಕ್ಷಕ ದಳ ಲಯನ್ಸ್ ಕ್ಲಬ್ ಉಡುಪಿ ರೆಡ್ ಕ್ರಾಸ್ ಘಟಕ ಹಳೆ ವಿದ್ಯಾರ್ಥಿ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇವರೆಲ್ಲರ ಜಂಟಿ ಆಶ್ರಯದಲ್ಲಿ ನಗರದ ತೆಂಕ ನಿಡಿಯೂರು ಕಾಲೇಜು ಆವರಣದಲ್ಲಿ ವೈಮಾನಿಕ ದಾಳಿ ಮತ್ತು ದೀಪಗಳನ್ನು ನಂದಿಸುವ ಕುರಿತು ಅಣಕು ಪ್ರದರ್ಶನದ ತುಣುಕು ಇದಾಗಿದ್ದು, ಜಿಲ್ಲೆಯ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಈ ಅಣಕು ಪ್ರದರ್ಶನ ಕಾರ್ಯಕ್ರಮವು ನಡೆದಿದ್ದು ಆಕಸ್ಮಿಕ ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಅಣಕು ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಇತ್ತೀಚೆಗೆ ಉಡುಪಿಯಲ್ಲಿ ನಡೆದ ಅಗ್ನಿ ಅವಘಡದ ಸಂದರ್ಭದಲ್ಲಿ ಬೆಂಕಿನಂದಿಸಲು ಹರಸಾಹಸ ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲ ಇಲಾಖೆಗಳು ಒಟ್ಟುಗೂಡಿ ಎರಡು ಗಂಟೆಯ ಅವಧಿಯಲ್ಲಿ ಬೆಂಕಿಯನ್ನು ನಂದಿಸಿದವು. ಆದರೂ ಅಪಾರ ಪ್ರಮಾಣದ ಹಾನಿ ಉಂಟಾಯಿತು. ಇಂತಹ ಅಣಕು ಕಾರ್ಯಕ್ರಮಗಳನ್ನು ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುವ ಜೊತೆಗೆ ಆಕಸ್ಮಿಕ ಪರಿಸ್ಥಿತಿಗಳನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ಬಗ್ಗೆ ಪ್ರಾಯೋಗಿಕ ಅನುಭವ ಸಿಗುತ್ತದೆ ಮತ್ತು ಜನರ ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ಬೇಕಾದ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದರು.

ನಿಜ ಜೀವನದಲ್ಲಿ ಅವಘಡಗಳಾಗುವ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಕೊಳ್ಳುತ್ತಾರೆ, ಮತ್ತೆ ಕೆಲವರು ರೀಲ್ಸ್ ಗಳನ್ನು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಾ ರಕ್ಷಣಾ ಕಾರ್ಯಗಳಲ್ಲಿ ತೊಡಕು ಉಂಟು ಮಾಡುತ್ತಾರೆ. ನಮ್ಮ ರಕ್ಷಣಾ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವವನ್ನು ಉಳಿಸಲು ಹರಸಾಹಸ ಪಡುತ್ತಿರುತ್ತಾರೆ. ಇಂತಹ ವಿಷಮ ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಮಾಡುವ ಬಗ್ಗೆ ಅಣಕು ಕಾರ್ಯಾಚರಣೆಗಳಿಂದ ಪ್ರಾಯೋಗಿಕವಾದ ಜ್ಞಾನ ದೊರೆಯುತ್ತದೆ. ವಿವಿಧ ಇಲಾಖೆಗಳು ಯಾವ ರೀತಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತವೆ ಎನ್ನುವ ಅರಿವಾಗುತ್ತದೆ ಮತ್ತು ಅಣಕು ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡುತ್ತದೆ ಎಂದ ಅವರು ಈ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ರೋಷನ್ ಶೆಟ್ಟಿ, ಸೆಕೆಂಡ್ ಇನ್ ಕಮಾಂಡೆಂಟ್ ಕೆ.ಸಿ ರಾಜೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ ಕಲ್ಗಟಕರ, ಪೌರ ರಕ್ಷಣಾ ದಳದ ಕಮಾಂಡಿಂಗ್ ಆಫೀಸರ್ ಡಾ. ವಿಜಯೇಂದ್ರ ರಾವ್ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ಎನ್, ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ದಿನೇಶ್ ಕಿಣಿ, ತೆಂಕ ನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಮೊದಲಾದವರು ಉಪಸ್ಥಿತರಿದ್ದರು.
ಗೃಹ ರಕ್ಷಕ ದಳದ ಸಿಬ್ಬಂದಿ ಸ್ಟೀವನ್ ಪ್ರಕಾಶ್ ನಿರೂಪಿಸಿದರು.

Leave a Reply

Your email address will not be published. Required fields are marked *