ಮೂಡುಬಿದಿರೆ: ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕೇವಲ ಉತ್ತರಗಳನ್ನು ಪಡೆಯುವವರಾಗದೆ, ಪ್ರಶ್ನಿಸುವ, ಯೋಚಿಸುವ ಹಾಗೂ ಸ್ವತಂತ್ರವಾಗಿ ನಿರ್ಧರಿಸುವ ಸಾಮಥ್ರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದಕ್ಕೆ ಓದುವ ಅಭ್ಯಾಸ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಎಸ್ಡಿಎಮ್ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಡಾ. ರಜತಾ ಪಿ. ಶೆಟ್ಟಿ ಹೇಳಿದರು.




ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯ ಅಂಗವಾಗಿ ಆಳ್ವಾಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘ಗೂಗಲ್–ಎಐ ಯುಗದಲ್ಲೂ ಓದಿನ ಅನಿವಾರ್ಯತೆ’ ಕುರಿತು ಅವರು ಮಾತನಾಡಿದರು.
ಗೂಗಲ್ನಲ್ಲಿ ಮಾಹಿತಿ ಹುಡುಕಬಹುದು, ಎಐಯಿಂದ ಉತ್ತರ ಪಡೆಯಬಹುದು. ಆದರೆ ಆ ಮಾಹಿತಿಯ ಅರ್ಥ, ಸಂದರ್ಭ, ಸತ್ಯಾಸತ್ಯತೆ ಹಾಗೂ ಪರಿಣಾಮವನ್ನು ನಿರ್ಣಯಿಸುವ ವಿವೇಚನಾಶಕ್ತಿ ಓದಿನಿಂದಲೇ ರೂಪುಗೊಳ್ಳುತ್ತದೆ. ಓದು ಗಮನ, ಏಕಾಗ್ರತೆ, ಕಲ್ಪನಾಶಕ್ತಿ, ಶಬ್ದ ಸಂಪತ್ತು ಹಾಗೂ ಸಂವಹನ ಕೌಶಲವನ್ನು ಬೆಳೆಸುವ ಮೂಲಕ ವ್ಯಕ್ತಿಯ ಚಿಂತನಾ ಸಾಮಥ್ರ್ಯವನ್ನು ಗಟ್ಟಿಗೊಳಿಸುತ್ತದೆ.
ಕೃತಕ ಬುದ್ಧಿಮತ್ತೆಯನ್ನು ಶತ್ರುವಾಗಿ ನೋಡಬೇಕಾಗಿಲ್ಲ. ಅದನ್ನು ಕಲಿಕೆಯ ಸಹಭಾಗಿಯಾಗಿ ಬಳಸಬೇಕು. ಎಐಗೆ ಗುಲಾಮರಾಗದೆ, ಅದನ್ನು ಕರಗತ ಮಾಡಿಕೊಳ್ಳಬೇಕು. ಮೊದಲು ಓದಿ, ನಂತರ ಯೋಚಿಸಿ, ನಂತರ ಕೃತಕ ಬುದ್ಧಿಮತ್ತೆಯನ್ನು ವಿವೇಕಯುತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಸ್ವೀಕರಿಸಬೇಕು. ಓದು ಒಂದು ಸ್ಪರ್ಧೆಯಲ್ಲ; ಅದು ಜೀವನಶೈಲಿಯಾಗಬೇಕು. ಆರಂಭದಲ್ಲಿ ಹೆಚ್ಚು ಸಮಯ ಮೀಸಲಿಡುವುದಕ್ಕಿಂತ, ಕಡಿಮೆ ಅವಧಿಯಿಂದ ಆರಂಭಿಸಿ ಅದನ್ನು ನಿರಂತರ ಅಭ್ಯಾಸವನ್ನಾಗಿ ಬೆಳೆಸಿಕೊಳ್ಳುವುದು ಮುಖ್ಯ. ಓದುವುದನ್ನು ಎಂದಿಗೂ ನಿಲ್ಲಿಸಬೇಡಿ; ಓದಿನ ಮೂಲಕ ಸ್ವತಂತ್ರವಾಗಿ ಯೋಚಿಸುವ, ಪ್ರಶ್ನಿಸುವ ಹಾಗೂ ಹೊಸ ವಿಚಾರಗಳನ್ನು ಅರಿಯುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸವಲತ್ತಿನ ಮೌಲ್ಯವನ್ನು ಅದು ಕಳೆದುಹೋದ ನಂತರ ಅರಿಯುವ ಪರಿಸ್ಥಿತಿ ಬರಬಾರದು. ಸವಲತ್ತು ನಮ್ಮ ಕೈಯಲ್ಲಿರುವಾಗಲೇ ಅದರ ಮೌಲ್ಯ ಅರಿತು, ಕೃತಜ್ಞತೆಯಿಂದ ಸ್ವೀಕರಿಸಿ, ಜವಾಬ್ದಾರಿಯಿಂದ ಬಳಸಿಕೊಂಡು, ಇತರರಿಗೂ ಅದರ ಪ್ರಯೋಜನ ದೊರೆಯುವಂತೆ ಮಾಡುವುದು ನಿಜವಾದ ಪ್ರಜ್ಞೆ. ಜೀವನದಲ್ಲಿ ಯಶಸ್ಸು ಸಾಧಿಸಲು ಅವಕಾಶಗಳನ್ನು ಗುರುತಿಸುವುದಷ್ಟೇ ಸಾಲದು. ಅವುಗಳನ್ನು ಬಳಸಿಕೊಳ್ಳಲು ಅಪಾಯವನ್ನು ಎದುರಿಸುವ ಧೈರ್ಯ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆಯ ಮನೋಭಾವ ಅಗತ್ಯ ಎಂದರು.
ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನೀಷಾ ಡಿಸೋಜಾ ನಿರೂಪಿಸಿ, ದೀಕ್ಷಿತ್ ಅತಿಥಿಯನ್ನು ಪರಿಚಯಿಸಿ, ಅನ್ಫಲ್ ವಂದಿಸಿದರು.
