ಬೆಂಗಳೂರಿನಲ್ಲಿ ಆಳ್ವಾಸ್ ಪತ್ರಿಕೋದ್ಯಮದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ

ಮೂಡುಬಿದಿರೆ: ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಯಬೇಕಾದರೆ ಪತ್ರಕರ್ತರು ಸತ್ಯ, ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಯನ್ನು ವೃತ್ತಿಯ ಮೂಲ ಮೌಲ್ಯಗಳನ್ನಾಗಿಸಿಕೊಂಡು, ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ವಾಸ್ತವಾಂಶಗಳನ್ನು ವರದಿ ಮಾಡಬೇಕು ಎಂದು ಟಿವಿ 5 ಕನ್ನಡದ ಮುಖ್ಯ ಸಂಪಾದಕ ರಮಾಕಾಂತ್ ತಿಳಿಸಿದರು.  

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಆಳ್ವಾಸ್ ಸಮ್ಮಿಲನ 2026’  ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪತ್ರಿಕೋದ್ಯಮ ನಶಿಸುತ್ತಿರುವ ವೃತ್ತಿಯಲ್ಲ. ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಪತ್ರಿಕೋದ್ಯಮ ಮಾತ್ರ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಇಂದಿನ ಜನರು ಸ್ವತಂತ್ರ ಹಾಗೂ ಸತ್ಯಾಧಾರಿತ ಮಾಧ್ಯಮಗಳನ್ನು ಬಯಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ವೃತ್ತಿಯ ಮೇಲಿನ ಆಸಕ್ತಿ, ನೈತಿಕತೆ ಮತ್ತು ಬದ್ಧತೆಯನ್ನು ನಿರಂತರವಾಗಿ ಉಳಿಸಿಕೊಳ್ಳಬೇಕು,   ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅನೇಕರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.  ಅದರಲ್ಲೂ ಮುಖ್ಯವಾಗಿ ಇಂದು ಬಹುತೇಕ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ಆಳ್ವಾಸ್‌ನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಪತ್ರಕರ್ತರು ಸತ್ಯ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ತಮ್ಮ ವೃತ್ತಿಯ ಮೂಲ ಆಶಯವನ್ನಾಗಿಸಿಕೊಳ್ಳಬೇಕು. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ವಾಸ್ತವಾಂಶಗಳನ್ನು ಅರಿತು ನಿಷ್ಪಕ್ಷಪಾತವಾಗಿ ವರದಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪತ್ರಿಕೋದ್ಯಮ ಕೇವಲ ಉದ್ಯೋಗವಾಗದೆ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ವೃತ್ತಿಯಾಗಬೇಕು. ವೃತ್ತಿಯಲ್ಲಿ ಶಿಸ್ತು, ಸಮಯಪ್ರಜ್ಞೆ, ಬದ್ಧತೆ ಹಾಗೂ ನಿರಂತರ ಕಲಿಕೆಯ ಮನೋಭಾವ ಅತ್ಯಗತ್ಯ.

ಆಳ್ವಾಸ್ ಶಿಕ್ಷಣ ಸಂಸ್ಥೆ ಆರಂಭವಾದ ದಿನಗಳಿಂದ ಇಂದಿನವರೆಗೆ ಬೆಳೆದು ಬಂದ ಹಾದಿ, ಅದರ ಕಾರ್ಯವೈಖರಿ ಮತ್ತು ಆಶಯಗಳನ್ನು ಅರಿಯಬೇಕು.  ಆಳ್ವಾಸ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಹೊರಜಗತ್ತಿನಲ್ಲಿ ತಾವು ಆಳ್ವಾಸ್‌ನ  ಹಿರಿಯ ವಿದ್ಯಾರ್ಥಿಗಳೆಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.  

ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಡಿ. ರಾಂಪುರ  ಮಾತನಾಡಿ, ವಿವಿಧ ಪ್ರದೇಶಗಳಲ್ಲಿ ವೃತ್ತಿ ಬದುಕು ರೂಪಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ನಡುವಿನ ಸಂಪರ್ಕ ಮತ್ತು ಒಗ್ಗಟ್ಟನ್ನು ಬಲಪಡಿಸಿ, ಪ್ರಸ್ತುತ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ವೃತ್ತಿಪರ ಅನುಭವ ಮತ್ತು ಮಾರ್ಗದರ್ಶನವನ್ನು ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ  ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ದುರ್ಗಾಪ್ರಸನ್ನ ಸ್ವಾಗತಿಸಿ,  ಚಿದಾನಂದ್ ಡಿ. ರುದ್ರಾಪುರ್‌ಮಠ್ ಕಾರ್ಯಕ್ರಮ ನಿರೂಪಿಸಿದರು.  ವಿವಿಧ ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊAಡರು. 

Leave a Reply

Your email address will not be published. Required fields are marked *