ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆಗೊಂಡ ಕೋಂಕಣ್ ಮೆಲೋಡಿ ಸ್ಟಾರ್-2026

ಮುಂಬಯಿ: ಮಾಂಡ್ ಸೊಭಾಣ್‍ನ ಸೋದ್ ಕಾರ್ಯಕ್ರಮದಿಂದ ಆರಂಭವಾದ ಸಂಗೀತ ಪಯಣವನ್ನು ಡೈಜಿವರ್ಲ್ಡ್‍ನ ಎಂಟಿಜಿ, ಗಲ್ಫ್ ವಾಯ್ಸ್ ಆಫ್ ಮಂಗಳೂರು, ಜಿಗಿಬಿಗಿ ತಾರಾಂ ಸೇರಿದಂತೆ ಹಲವು ವೇದಿಕೆಗಳು ಮತ್ತಷ್ಟು ಬಲಪಡಿಸಿವೆ. ಲಿಯೋ ಚಾರಿಟೇಬಲ್ ಟ್ರಸ್ಟ್ ಯೂಟ್ಯೂಬ್ ಆಧಾರಿತ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಯನ್ನು ಪರಿಚಯಿಸಿರುವುದು ಹೊಸತನದ ಪರಿಕಲ್ಪನೆಯಾಗಿದ್ದು, ಉದಯೋನ್ಮುಖ ಗಾಯಕರಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಆದ್ದರಿಂದ ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ದೈಜಿವರ್ಲ್ಡ್ ನ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದು ಡೈಜಿವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ಡಿ’ಸೋಜಾ ನಂದಳಿಕೆ ಭರವಸೆ ನೀಡಿದರು.

ಮಂಗಳೂರು ಅಲ್ಲಿನ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಲಿಯೋ ಚಾರಿಟೇಬಲ್ ಟ್ರಸ್ಟ್ (ಎಲ್‍ಸಿಟಿ) ವತಿಯಿಂದ ಆಯೋಜಿಸಲಾದ `ಕೋಂಕಣ್ ಮೆಲೋಡಿ ಸ್ಟಾರ್ 2026′ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ವಾಲ್ಟರ್ ನಂದಳಿಕೆ ಮಾತನಾಡಿ ಹೊಸ ಪ್ರತಿಭಾವಂತ ಕೊಂಕಣಿ ಗಾಯಕರನ್ನು ಗುರುತಿಸಿ, ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ವಿಶಿಷ್ಟ ಸಂಗೀತಯಾತ್ರೆ ಇತಿಹಾಸದ ಪುಟ ಸೇರುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಲಿಮಿಟೆಡ್‍ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಪೆರ್ಮಾಯಿ ಮುಖ್ಯ ಅತಿಥಿಯಾಗಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರೆಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೊಂಕಣಿ ನಾಟಕ ಸಭಾ ಅಧ್ಯಕ್ಷ ವಂ| ಫಾ| ರೊಕಿ ಡಿ’ಕುನ್ಹಾ, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಪಿಂಟೋ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತೆಲಿನೋ, ಖ್ಯಾತ ಗಾಯಕ ಹಾಗೂ ಕೊಂಕಣಿ ಸಂಗೀತ ದಿಗ್ಗಜ ಸ್ವರ್ಗೀಯವಿಲ್ಫಿ ರೆಬಿಂಬಸ್ ಸುಪುತ್ರ ವಿಶ್ವಾಸ್ ರೆಬಿಂಬಸ್ ಉಪಸ್ಥಿತರಿದ್ದರು. ಲಿಯೋ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಲಿಯೋ ಡಿ’ಸೋಜಾ ರಾಣಿಪುರ ಹಾಗೂ ಕಾರ್ಯಕ್ರಮದ ನಿರೂಪಕ, ಕ್ರಿಯೇಟಿವ್ ಹೆಡ್ ಜೆರಿ ಡಿ’ಸೋಜಾ ಬೊಂದೇಲ್ ವೇದಿಕೆಯನ್ನು ಅಲಂಕರಿಸಿರಿದ್ದರು.

ವಂ| ಫಾ| ರೊಕಿ ಡಿ’ಕುನ್ಹಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿ ಕೋಂಕಣ್ ಮೆಲೋಡಿ ಸ್ಟಾರ್ 2026 ಅಧಿಕೃತ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಯಿತು.

ಅನಿಲ್ ಲೋಬೋ ಮಾತನಾಡಿ ಎಂಸಿಸಿ ಬ್ಯಾಂಕ್ ಸದಾ ಕೊಂಕಣಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಬೆಂಬಲ ನೀಡಿದೆ ಎಂದು ಹೇಳಿದರು. ಲಿಯೋ ಡಿ’ಸೋಜಾ ಮತ್ತು ಜೆರಿ ಡಿ’ಸೋಜಾ ಅವರ ಸಂಗೀತ ಕ್ಷೇತ್ರದ ಸೇವಾರ್ಪಣೆಯನ್ನು ಶ್ಲಾಘಿಸಿ, ಈ ಸ್ಪರ್ಧೆ ಯಶಸ್ವಿಯಾಗಿ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಮೈಲಿಗಲ್ಲು ಆಗಲಿ ಎಂದು ಹಾರೈಸಿದರು.

ಸ್ಟ್ಯಾನಿ ಅಲ್ವಾರೆಸ್ ಅಧ್ಯಕ್ಷೀಯ ನುಡಿಗಳನ್ನಾಡಿ, ಕೊಂಕಣಿ ಸಮುದಾಯ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಕೊಂಕಣ್ ಮೆಲೋಡಿ ಸ್ಟಾರ್‍ನಂತಹ ದೂರದೃಷ್ಟಿಯ ಕಾರ್ಯಕ್ರಮಗಳು ಶಾಶ್ವತ ಬದಲಾವಣೆ ತರಬಲ್ಲವು ಎಂದು ಹೇಳಿದರು. ಯುವ ಗಾಯಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಮೂಲಕ ಈ ಸ್ಪರ್ಧೆ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಗೀತದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರೋನಿ ಕ್ರಾಸ್ತಾ, ಸ್ಟಾನ್ಲಿ ಬಂಟ್ವಾಳ್ ಹಾಗೂ ಸಂತೋಷ್ ಸಿಕ್ವೇರಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಡಾ| ವೆಲಿಟಾ ಲೋಬೋ, ಅಲ್ವಿನ್ ನೊರೊನ್ಹಾ, ಜೋಶಲ್ ಡಿ’ಸೋಜಾ ಹಾಗೂ ಧ್ವನಿ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ ಸಂಜಯ್ ರೋಡ್ರಿಗಸ್ ಹಾಗೂ ಡೈಜಿವರ್ಲ್ಡ್ ತಂಡದ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಪ್ರಾಥಮಿಕ ವಿಡಿಯೋ ಆಯ್ಕೆ ಸುತ್ತಿನಲ್ಲಿ ಒಟ್ಟು 113 ಸ್ಪರ್ಧಿಗಳು ಭಾಗವಹಿಸಿದ್ದು, ಅವರಲ್ಲಿ 81 ಮಂದಿ ಆಡಿಷನ್ ಸುತ್ತಿಗೆ ಆಯ್ಕೆಯಾದರು.

ಸಂಘಟನಾ ಸಮಿತಿಯ ರೋಶನ್ ಕಾಮತ್ (ವಾಮಂಜೂರು), ಜಸ್ಟನ್ (ಜೆಪ್ಪು), ಕೀತ್ ಫುರ್ಟಾಡೊ (ಉರ್ವಾ), ಮೆಲ್‍ರಾಯ್ ಫೆರ್ನಾಂಡಿಸ್ (ವೆಲೆನ್ಸಿಯಾ), ಶಾಂತಿ ಕಾರ್ಡೋಜಾ (ವಾಮಂಜೂರು), ರೇಶ್ಮಾ ನೊರೊನ್ಹಾ (ಕೆಲರಾಯಿ), ಕಿರಣ್ (ಬನ್ನೂರು), ಆಸ್ಟಿನ್ (ಮೊಗರ್ನಾಡು), ರೋಶನ್ (ಎಳಿಯಾರ್ ಪದವು), ಲವೀನಾ (ಬೆಳ್ಮಣ್), ಇಶೆಲ್ ಡಿ’ಸೋಜಾ (ನಿರ್‍ಮಾರ್ಗ) ಹಾಗೂ ರೋಶನ್ ಕ್ರಾಸ್ತಾ (ಕುಲಶೇಖರ) ಸೇರಿದಂತೆ ಹಲವಾರು ಸ್ವಯಂಸೇವಕರು ಕಾರ್ಯನಿರ್ವಹಿಸಿದರು.

ಅನಿಲ್ ಪಾತ್ರಾವೊ, ವಿೂರಾ ಕ್ರಾಸ್ತಾ, ಶಿಲ್ಪಾ ಕುಟಿನ್ಹಾ, ಅಲ್ವಿನ್ ನೊರೊನ್ಹಾ, ಡಾ| ವೆಲಿಟಾ ಲೋಬೋ ಹಾಗೂ ಜೋಶಲ್ ಡಿ’ಸೋಜಾ ಆಡಿಷನ್ ಸುತ್ತಿನ ತೀರ್ಪುಗಾರರಾಗಿದ್ದು, ರೇಡಿಯೋ ಸಾರಂಗ್ 107.8 ಎಫ್‍ಎಂನ ಆರ್‍ಜೆ ರೋಶನ್ ಕ್ರಾಸ್ತಾ ಹಾಗೂ ಇಶೆಲ್ ಡಿ’ಸೋಜಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಸಮಾರಂಭದ ಮೆರುಗನ್ನು ಹೆಚ್ಚಿಸಿದರು. ಲಿಯೋ ಡಿ’ಸೋಜಾ ರಾಣಿಪುರ ವಂದಿಸಿದರು.

Leave a Reply

Your email address will not be published. Required fields are marked *