ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಕೊಂಕ್ಣಿ ಸಂಭ್ರಮ್” ಕೊಂಕಣಿ ಸಮ್ಮೇಳನ

ಮಂಗಳೂರು: ಆಗಸ್ಟ್‌ 9 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ರಂಗ್‌‌ ತರಂಗ್‌, ಮೂಡಬಿದರೆ ಇದರ ಸಹಯೋಗದಲ್ಲಿ ಗಂಟಾಲ್‌ಕಟ್ಟೆ ಚರ್ಚ್ ವಠಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಕೊಂಕ್ಣಿ ಸಂಭ್ರಮ್” ಕೊಂಕಣಿ ಸಮ್ಮೇಳನವು ವಿಜೃಂಭಣೆಯಿಂದ ನಡೆಯಿತು. ಸಮ್ಮೇಳನಾಧ್ಯಕ್ಷರಾಗಿ ಕೊಂಕಣಿಯ ಹಿರಿಯ ಸಾಹಿತಿ ಡೊಲ್ಫಿ ಎಫ್.ಲೋಬೊರವರು ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಕಾಡೆಮಿಯ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ನೆರೆದಿರುವ ಸರ್ವರನ್ನು ಸ್ವಾಗತಿಸಿ, “ಕೊಂಕಣಿ ಭಾಷೆಗೆ ಯಾವುದೇ ಲಿಪಿಯ ಹಂಗಿಲ್ಲ, ಇದನ್ನು ಪ್ರಮುಖವಾಗಿ ಐದು ಲಿಪಿಗಳನ್ನು ಬಳಸಿ ಬರೆಯಲಾಗುತ್ತದೆ. ಕನ್ನಡ, ರೋಮನ್, ಪರ್ಸೊ ಅರೆಬಿಕ್, ನಾಗರಿ, ಮಳಯಾಲಂ ಲಿಪಿಗಳ ಜೊತೆಗೆ ಗುಜರಾತಿ ಲಿಪಿಯಲ್ಲೂ ಕೊಂಕಣಿಯನ್ನು ಬರೆಯಲಾಗುತ್ತದೆ. ಕೊಂಕಣಿ ಭಾಷೆ ಒಂದು ಸುಂದರ ಹೂ-ತೋಟವಿದ್ದಂತೆ” ಎಂದು ಹೇಳಿ, ಅಕಾಡೆಮಿಯ ಈ ವರೆಗಿನ ಕೆಲಸ-ಕಾರ್ಯಗಳ ಪಕ್ಷಿನೋಟವನ್ನು ಸಭೆಯ ಮುಂದೆ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗುರು ಬಾಳಿಗಾರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶುಭ ಹಾರೈಸಿದರು. ಜೊತೆಗೆ ವೇದಿಕೆಯಲ್ಲಿ ಗಂಟಾಲ್‌ಕಟ್ಟೆ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ  ವಂ.ಸ್ವಾ.ರೊಕ್ ಡೆಸಾ, ರಂಗ್ ತರಂಗ್ ಮೂಡಬಿದರೆ ಇದರ ಮುಖಂಡರಾದ ಲೋಯ್ಡ್ ರೇಗೊ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜುಲೈ 25 ರಿಂದ ಪ್ರಾರಂಭವಾದ 15 ದಿನಗಳ “ರಂಗ್ ಪರ್ಯಟನ್” – ಕೊಂಕಣಿ ಕರಾವಳಿಯಲ್ಲಿ ಚಿತ್ರಕಲಾ ಪರ್ಯಟನೆ ಇದರ ಸಮಾರೋಪ ಕಾರ್ಯಕ್ರಮ ನೆರವೇರಿತು. ಪರ್ಯಟನೆಯಲ್ಲಿ ಭಾಗವಹಿಸಿದ 6 ಜನ ಚಿತ್ರ ಕಲಾವಿದರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಮೊದಲಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ, ʼಕೊಂಕಣಿ ನಿನ್ನೆ, ಇಂದು ಮತ್ತು ನಾಳೆ, ಎಂಬ ವಿಷಯದ ಮೇಲೆ ಟಾಯ್ಟಸ್ ನೊರೊನ್ಹಾ, ತಾರ ಲವೀನ ಮಸ್ಕರೇನ್ಹಸ್ ಹಾಗೂ ರ‍್ಯಾನ್ಸನ್ ಸ್ಟೀಫನ್ ಕುಟಿನ್ಹಾ ಇವರಿಂದ ವಿಚಾರ ಸಂಕಿರಣ ನಡೆಯಿತು. ಅಸ್ತಿತ್ವ (ರಿ.) ಮಂಗಳೂರು ಇವರಿಂದ ಕೊಂಕಣಿ ನಾಟಕ ʼಜುಗಾರಿʼ ಪ್ರದರ್ಶನಗೊಂಡಿತು. ವಿನ್‌ಸ್ಟನ್‌  ಜೋಯೆಲ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮ ಸಂಚಾಲಕರಾದ ಪ್ರವೀಣ್ ಅರಾನ್ಹಾ ಧನ್ಯವಾದಗೈದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್‌ ಕ್ರಾಸ್ತಾರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *